ADVERTISEMENT

ತೆರಿಗೆದಾರರಿಗೆ ಭಯ ಪಡಿಸಬೇಡಿ: ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ಮಲಾ ಪಾಠ

ಪಿಟಿಐ
Published 21 ಆಗಸ್ಟ್ 2024, 14:45 IST
Last Updated 21 ಆಗಸ್ಟ್ 2024, 14:45 IST
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್‌ –ಪಿಟಿಐ ಚಿತ್ರ   

ನವದೆಹಲಿ: ‘ತೆರಿಗೆದಾರರಿಗೆ ನೋಟಿಸ್‌ ಅಥವಾ ಪತ್ರ ರವಾನಿಸುವಾಗ ಆದಾಯ ತೆರಿಗೆ ಅಧಿಕಾರಿಗಳು ಸರಳ ಪದಗಳನ್ನು ಬಳಸಬೇಕು. ಅವರ ಮೇಲೆ ವಿವೇಚನೆಯಿಂದ ಅಧಿಕಾರ ಚಲಾಯಿಸಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಿವಿಮಾತು ಹೇಳಿದ್ದಾರೆ.  

ಬುಧವಾರ ನಡೆದ 165ನೇ ಆದಾಯ ತೆರಿಗೆ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡುವುದಿಲ್ಲ. ಅಧಿಕಾರಿಗಳೊಂದಿಗೆ  ಮುಖಾಮುಖಿ ಆಗುವುದಿಲ್ಲ. ನಾವು ಇಂತಹ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ ಎಂಬ ಬಗ್ಗೆ ಅಧಿಕಾರಿಗಳಿಗೆ ಅರಿವು ಇರಬೇಕು. ಅವರೊಟ್ಟಿಗೆ ನ್ಯಾಯೋಚಿತ ಹಾಗೂ ಸ್ನೇಹಪರದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ನೋಟಿಸ್‌ಗಳು ತೆರಿಗೆದಾರರಲ್ಲಿ ಭಯ ಹುಟ್ಟಿಸುವಂತಿರಬಾರದು. ಬೆದರಿಕೆಯ ಸಾಧನವಾಗಬಾರದು. ಯಾವ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂಬ ಬಗ್ಗೆ ಸರಳ ಹಾಗೂ ನೇರವಾಗಿ ಅವರಿಗೆ ಮನದಟ್ಟು ಮಾಡುವಂತಿರಬೇಕು ಎಂದು ಸಲಹೆ ನೀಡಿದರು.

ತೆರಿಗೆದಾರರನ್ನು ಪೇಚಿಗೆ ಸಿಲುಕಿಸಬಾರದು. ತೆರಿಗೆ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಸೂಕ್ತ ನೆಲೆಯಲ್ಲಿ ಕ್ರಮ ಜರುಗಿಸಬೇಕಿದೆ ಎಂದರು. 

ಮರುಪಾವತಿ ವಿಳಂಬ ಸಲ್ಲದು. ಸಕಾಲದಲ್ಲಿ ಮರುಪಾವತಿಗೆ ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸೂಚಿಸಿದರು.

ಇಲಾಖೆಯು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು ಎಂದ ಅವರು, ಅಧಿಕಾರಿಗಳು ತೆರಿಗೆ ವಸೂಲಾತಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಮರೆಯಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.