ADVERTISEMENT

ಆರ್ಥಿಕ ತಳಹದಿ ಬಲಿಷ್ಠ: ಹಣಕಾಸು ಸಚಿವಾಲಯದ ವರದಿ

ಪಿಟಿಐ
Published 9 ಸೆಪ್ಟೆಂಬರ್ 2021, 11:17 IST
Last Updated 9 ಸೆಪ್ಟೆಂಬರ್ 2021, 11:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ನಡುವೆಯೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯು ಉತ್ತಮ ಬೆಳವಣಿಗೆ ಕಂಡಿದ್ದು, ದೇಶದ ಆರ್ಥಿಕ ತಳಹದಿಯು ಬಲಿಷ್ಠವಾಗಿದೆ ಎನ್ನುವುದಕ್ಕೆ ಒಂದು ಸಾಕ್ಷ್ಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಗುರುವಾರ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಶೇ 20.1ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್‌ನಿಂದಾಗಿ ಜಿಡಿಪಿಯು ಶೇ 24.4ರಷ್ಟು ಕುಸಿತ ಕಂಡಿತ್ತು.

ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸಚಿವಾಲಯವು ಆತಂಕ ವ್ಯಕ್ತಪಡಿಸಿದೆ. ಈ ಎರಡೂ ರಾಜ್ಯಗಳಲ್ಲಿ ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಸಚಿವಾಲಯವು ತನ್ನ ಈಚಿನ ತಿಂಗಳ ಆರ್ಥಿಕ ವಿಮರ್ಶೆಯಲ್ಲಿ ಹೇಳಿದೆ.

ADVERTISEMENT

ಕೃಷಿ ವಲಯವು ಉತ್ತಮ ಸ್ಥಿತಿಯಲ್ಲಿದ್ದು, ಈ ವರ್ಷದಲ್ಲಿ ಇದುವರೆಗೆ ಶೇ 9ರಷ್ಟು ಮಳೆಯ ಕೊರತೆ ಉಂಟಾಗಿದ್ದರು ಸಹ ಸೆಪ್ಟೆಂಬರ್‌ 3ರವರೆಗೆ ಮುಂಗಾರು ಹಂಗಾಮಿನಲ್ಲಿ ಸಹಜ ಮಟ್ಟದ ಶೇ 101ರಷ್ಟು ಬಿತ್ತನೆ ಆಗಿದೆ ಎಂದು ಅದು ಹೇಳಿದೆ.

ದಾಖಲೆ ಮಟ್ಟದಲ್ಲಿ ಭತ್ತ ಸಂಗ್ರಹ ಹಾಗೂ ಟ್ರ್ಯಾಕ್ಟರ್ ಮಾರಾಟದಲ್ಲಿನ ಹೆಚ್ಚಳವು ಮುಂಬರುವ ತಿಂಗಳುಗಳಲ್ಲಿ ಗ್ರಾಮೀಣ ಭಾಗದ ಬೇಡಿಕೆಯು ಹೆಚ್ಚಿಸಲು ಅನುಕೂಲ ಆಗಲಿದೆ. ಕೈಗಾರಿಕಾ ವಲಯದ ಬೆಳವಣಿಗೆಯು 2019ರ ಜೂನ್‌ನಲ್ಲಿ ಇದ್ದಂತಹ ಮಟ್ಟಕ್ಕೆ ಹೋಲಿಸಿದರೆ ಶೇ 95ರಷ್ಟು ಚೇತರಿಕೆ ಕಂಡುಕೊಂಡಿದೆ.

ಮೂಲಸೌಕರ್ಯ ವಲಯವು ಜುಲೈನಲ್ಲಿ ಶೇ 9.4ರಷ್ಟು ಬೆಳವಣಿಗೆ ಕಂಡಿದ್ದು, ಕಚ್ಚಾ ತೈಲ ಮತ್ತು ಸಂಸ್ಕರಣಾ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳು ಕೋವಿಡ್‌ಗೂ ಮುಂಚಿನ ಮಟ್ಟವನ್ನು ದಾಟಿವೆ ಎಂದು ಸಚಿವಾಲಯವು ತಿಳಿಸಿದೆ.

ವರಮಾನ ಸಂಗ್ರಹಕ್ಕೆ ಸಂಬಂಧಿಸಿದಂತೆ, ಹಿಂದಿನ ವರ್ಷದ ಏಪ್ರಿಲ್‌–ಜುಲೈ ಅವಧಿಗೆ ಹೋಲಿಸಿದರೆ ಈ ಬಾರಿ ಕೇಂದ್ರ ಸರ್ಕಾರದ ಹಣಕಾಸು ಸ್ಥಿತಿಯು ಸುಧಾರಿಸಿದೆ. ನೇರ ಮತ್ತು ಪರೋಕ್ಷದ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ ಬೆಳವಣಿಗೆ ಕಾಣುತ್ತಿದೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.