ನವದೆಹಲಿ: ಮಾರುಕಟ್ಟೆಗೆ ಹೊಸ ಬೆಳೆಯು ಬರಲಿರುವ ಕಾರಣ ಮುಂದಿನ ತಿಂಗಳಿನಿಂದ ತರಕಾರಿಗಳ ಬೆಲೆಯು ಇಳಿಕೆ ಕಾಣುವ ನಿರೀಕ್ಷೆ ಇದೆ. ಆದರೆ, ಕಚ್ಚಾ ತೈಲ ದರ ಏರಿಕೆಯು ಆತಂಕ ಮೂಡಿಸಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶೇ 6ರಷ್ಟು ಮಳೆ ಕೊರತೆ ಆಗಿದ್ದರೂ ಮುಂಗಾರು ಬಿತ್ತನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಹಣದುಬ್ಬರ ನಿಯಂತ್ರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರದ ಸಂಗ್ರಹದಲ್ಲಿ ಇರುವ ಗೋಧಿ ಮತ್ತು ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಅಕ್ಕಿ, ಸಕ್ಕರೆ ರಫ್ತು ಮೇಲೆ ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಆಮದಿಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಟೊಮೆಟೊ ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಇದರಿಂದಾಗಿ ಮುಂಬರುವ ತಿಂಗಳುಗಳಲ್ಲಿ ಬೆಲೆಯು ಇನ್ನಷ್ಟು ಇಳಿಕೆ ಆಗಲಿದೆ. ಟೊಮೆಟೊ ಹೊಸ ಬೆಳೆ ಶೀಘ್ರವೇ ಬರಲಿದ್ದು ಬೆಲೆಯ ಮೇಲಿನ ಒತ್ತಡ ತಗ್ಗಲಿದೆ ಎಂದಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತ ಮಾಡುವ ಯಾವುದೇ ಆಲೋಚನೆ ಸರ್ಕಾರಕ್ಕೆ ಇಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಕಚ್ಚಾ ತೈಲ ದರ ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸಿದೆ. ಹೀಗಿದ್ದರೂ ತೈಲ ಮಾರಾಟ ಕಂಪನಿಗಳ ದೃಷ್ಟಿಯಿಂದ ಸಹನೀಯ ಮಟ್ಟದಲ್ಲಿಯೇ ಇದೆ. ಹೀಗಾಗಿ ನೀತಿಯಲ್ಲಿ ಯಾವುದೇ ಹೊಂದಾಣಿಕೆ ಮಾಡುವ ಅಗತ್ಯ ಈಗ ಕಂಡುಬರುತ್ತಿಲ್ಲ. ಕಚ್ಚಾ ತೈಲ ದರವು ಬ್ಯಾರಲ್‌ಗೆ 80–85 ಡಾಲರ್ ಇದ್ದರೆ ಪರವಾಗಿಲ್ಲ. ಬ್ಯಾರಲ್‌ಗೆ 90 ಡಾಲರ್‌ವರೆಗೆ ಇದ್ದರೂ ಯಾವುದೇ ಸಮಸ್ಯೆ ಇಲ್ಲ. ಅದನ್ನೂ ಮೀರಿದರೆ ಹಣದುಬ್ಬರ ಮತ್ತು ಇನ್ನಿತರ ವಿಷಯಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ. ಕಚ್ಚಾ ತೈಲ ದರವು ಸದ್ಯ ಬ್ಯಾರಲ್‌ಗೆ 85 ಡಾಲರ್‌ನ ಮಟ್ಟದಲ್ಲಿದೆ. ಬಜೆಟ್ ಸಂದರ್ಭದಲ್ಲಿ ಬ್ಯಾರಲ್‌ಗೆ 70 ಡಾಲರ್‌ನಿಂದ 73 ಡಾಲರ್‌ನ ಮಟ್ಟದಲ್ಲಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.