ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ, ಟಾಟಾ ಮೋಟರ್ಸ್, ಎಂ.ಜಿ. ಮೋಟರ್ಸ್, ಟೊಯೊಟ, ಹುಂಡೈ, ರಾಯಲ್ ಎನ್‌ಫೀಲ್ಡ್ ಸೇರಿದಂತೆ ದೇಶದ ಪ್ರಮುಖ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಫೆಬ್ರುವರಿಯಲ್ಲಿ ಏರಿಕೆ ಕಂಡಿದೆ.
ದೇಶೀಯ ವಾಹನಗಳ ಮಾರಾಟವು ಪ್ರಗತಿ ದಾಖಲಿಸಿದ್ದು, ರಫ್ತು ಕೂಡ ಉತ್ತಮವಾಗಿದೆ. ಆದರೆ, ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.
ಟೊಯೊಟ ಶೇ 61ರಷ್ಟು ಹೆಚ್ಚಳ:
ಟೊಯೊಟ ಕಿರ್ಲೋಸ್ಕರ್ ಮೋಟರ್‌ನ 25,220 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಫೆಬ್ರುವರಿಯಲ್ಲಿ 15,685 ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಶೇ 61ರಷ್ಟು ಏರಿಕೆ ಆಗಿದೆ.
ಮಹೀಂದ್ರ ಶೇ 24ರಷ್ಟು ಏರಿಕೆ:
ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ 72,923 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 58,801 ವಾಹನಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ 24ರಷ್ಟು ಏರಿಕೆ ಆಗಿದೆ.
ಟಾಟಾ ಮೋಟರ್ಸ್ ಏರಿಕೆ:
ಟಾಟಾ ಮೋಟರ್ಸ್‌ನ 86,406 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 79,705 ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಮಾರಾಟದದಲ್ಲಿ ಶೇ 8ರಷ್ಟು ಹೆಚ್ಚಳವಾಗಿದೆ. ದೇಶೀಯ ವಾಹನಗಳ ಮಾರಾಟ ಶೇ 9ರಷ್ಟು ಬೆಳವಣಿಗೆ ಕಂಡಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 4ರಷ್ಟು ಇಳಿಕೆ ಆಗಿದೆ.
ಎಂ.ಜಿ ಮೋಟರ್ ಇಂಡಿಯಾ:
ಎಂ.ಜಿ ಮೋಟರ್ ಇಂಡಿಯಾದ ವಾಹನ ಮಾರಾಟವು ಶೇ 8ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4,193 ವಾಹನಗಳು ಮಾರಾಟವಾಗಿದ್ದರೆ, ಪ್ರಸಕ್ತ ಅವಧಿಯಲ್ಲಿ 4,532 ಮಾರಾಟವಾಗಿವೆ.
ಮಾರುತಿ ಸುಜುಕಿ:
ಮಾರುತಿ ಸುಜುಕಿ ಇಂಡಿಯಾದ ವಾಹನಗಳ ಮಾರಾಟವು ಶೇ 15ರಷ್ಟು ಏರಿಕೆ ಆಗಿದೆ. ಒಟ್ಟು 1,97,471 ವಾಹನಗಳು ಮಾರಾಟವಾಗಿವೆ. ಯುಟಿಲಿಟಿ ವಾಹನ ಮಾರಾಟದಲ್ಲಿ ಶೇ 82ರಷ್ಟು ಏರಿಕೆಯಾಗಿದೆ.
ಟಿವಿಎಸ್ ದಾಖಲೆ:
ಟಿವಿಎಸ್ ಮೋಟರ್ ವಾಹನಗಳ ಮಾರಾಟವು ಶೇ 33ರಷ್ಟು ಏರಿಕೆ ಆಗಿದೆ. ಹಿಂದಿನ ವರ್ಷದ ಫೆಬ್ರುವರಿಯಲ್ಲಿ 2,76,150 ವಾಹನಗಳು ಮಾರಾಟವಾಗಿದ್ದರೆ, ಪ್ರಸಕ್ತ ಅವಧಿಯಲ್ಲಿ 3,68,424 ವಾಹನಗಳು ಮಾರಾಟವಾಗಿವೆ.
ಹುಂಡೈ ಮೋಟರ್:
ಹುಂಡೈ ಮೋಟರ್ ಇಂಡಿಯಾದ 60,501 ವಾಹನಗಳು ಮಾರಾಟವಾಗಿವೆ. ದೇಶೀಯ ವಾಹನ ಮಾರಾಟದಲ್ಲಿ ಶೇ 7ರಷ್ಟು ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.