ADVERTISEMENT

ದೇಶದಲ್ಲಿ ಹೆಚ್ಚಿದ ವಾಹನ ಮಾರಾಟ

ಎಂಜಿ, ಮಹೀಂದ್ರ, ಹುಂಡೈ, ಟೊಯೊಟಾ ಮಾರಾಟ ಹೆಚ್ಚಳ

ಪಿಟಿಐ
Published 1 ಜನವರಿ 2024, 16:27 IST
Last Updated 1 ಜನವರಿ 2024, 16:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ 2023ನೇ ಸಾಲಿನಡಿ ಎಂಜಿ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹುಂಡೈ, ಟೊಯೊಟಾ, ಐಷರ್, ಟಾಟಾ ಕಂಪನಿಯ ವಾಹನಗಳ ಮಾರಾಟ ಏರಿಕೆಯಾಗಿದ್ದರೆ, ಮಾರುತಿ ಸುಜುಕಿ ವಾಹನಗಳ ಮಾರಾಟ ಇಳಿಕೆ ಕಂಡಿದೆ.

ಎಂಜಿ ಮೋಟರ್‌ ಇಂಡಿಯಾದ ಚಿಲ್ಲರೆ ವಾಹನ ಮಾರಾಟವು 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇ 18ರಷ್ಟು ಏರಿಕೆಯಾಗಿದೆ. 56,902 ವಾಹನ ಮಾರಾಟವಾಗಿವೆ. ಡಿಸೆಂಬರ್‌ನಲ್ಲಿ ಚಿಲ್ಲರೆ ಮಾರಾಟವು ಶೇ 13ರಷ್ಟು ಏರಿಕೆಯಾಗಿದ್ದು, 4,400 ವಾಹನಗಳು ಮಾರಾಟವಾಗಿವೆ. ಒಟ್ಟಾರೆ ಮಾರಾಟದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರಾಟವು ಶೇ 25ರಷ್ಟಿದೆ ಎಂದು ಕಂಪನಿ ತಿಳಿಸಿದೆ.

ಮಹೀಂದ್ರ ಮಾರಾಟ: ಮಹೀಂದ್ರ ಆ್ಯಂಡ್‌ ಮಹೀಂದ್ರ ಲಿಮಿಟೆಡ್‌ ವಾಹನಗಳ ಮಾರಾಟವು ಶೇ 6ರಷ್ಟು ಏರಿಕೆಯಾಗಿದ್ದು, 60,188 ವಾಹನಗಳು ಮಾರಾಟವಾಗಿವೆ. ಪ್ರಯಾಣಿಕ ವಾಹನಗಳ ಮಾರಾಟವು 28,445ರಿಂದ 35,174ಕ್ಕೆ ಏರಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಯುಟಿಲಿಟಿ ವಾಹನಗಳ ಮಾರಾಟವು ಡಿಸೆಂಬರ್‌ನಲ್ಲಿ ಶೇ 24ರಷ್ಟು ಏರಿಕೆಯಾಗಿದೆ. ಒಟ್ಟು 35,171 ವಾಹನಗಳು ಮಾರಾಟವಾಗಿವೆ. 

ಡಿಸೆಂಬರ್‌ನಲ್ಲಿ ಕಂಪನಿಯ ಒಟ್ಟು ವಾಹನಗಳ ರಫ್ತು ಶೇ 41ರಷ್ಟು ಇಳಿಕೆಯಾಗಿದೆ.  2022ರ ಡಿಸೆಂಬರ್‌ನಲ್ಲಿ 3,100 ವಾಹನಗಳನ್ನು ರಫ್ತು ಮಾಡಲಾಗಿತ್ತು. ಮಹೀಂದ್ರ ಆ್ಯಂಡ್‌ ಮಹೀಂದ್ರ ಟ್ರ್ಯಾಕ್ಟರ್‌ಗಳ ಒಟ್ಟು ಮಾರಾಟ ಶೇ 18ರಷ್ಟು ಇಳಿಕೆಯಾಗಿ, 19,138ಕ್ಕೆ ತಲುಪಿದೆ. 

ಬಜಾಜ್‌ ವಹಿವಾಟು: ಬಜಾಜ್‌ ಆಟೊ ವಾಹನ ಮಾರಾಟವು ಡಿಸೆಂಬರ್‌ನಲ್ಲಿ ಶೇ 16ರಷ್ಟು ಏರಿಕೆಯಾಗಿ, 3.26 ಲಕ್ಷಕ್ಕೆ ತಲುಪಿದೆ. 2022ರಲ್ಲಿ ಇದೇ ಅವಧಿಯಲ್ಲಿ 2.81 ಲಕ್ಷ ವಾಹನಗಳು ಮಾರಾಟವಾಗಿದ್ದವು. 

ಕಂಪನಿಯ ದ್ವಿಚಕ್ರವಾಹನಗಳ ಮಾರಾಟವು ಹಿಂದಿನ ವರ್ಷದ ಅವಧಿಗಿಂತ ಶೇ 15ರಷ್ಟು ಹೆಚ್ಚಳವಾಗಿ 2.83 ಲಕ್ಷಕ್ಕೆ ತಲುಪಿದೆ. 

ಹುಂಡೈ ಮಾರಾಟ: ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ ವಾಹನಗಳ ಮಾರಾಟವು ಶೇ 9ರಷ್ಟು ಏರಿಕೆಯಾಗಿ 7.65 ಲಕ್ಷಕ್ಕೆ ತಲುಪಿದೆ. 2022ರಲ್ಲಿ ಇವುಗಳ ಮಾರಾಟ 7 ಲಕ್ಷ ಇತ್ತು ಎಂದು ಕಂಪನಿ ತಿಳಿಸಿದೆ.  

ಟೊಯೊಟಾ ವಹಿವಾಟು: ಟೊಯೊಟಾ ಕಿರ್ಲೋಸ್ಕರ್‌ ಮೋಟರ್‌ ವಾಹನಗಳ ಮಾರಾಟವು 2023ರಲ್ಲಿ ಶೇ 45ರಷ್ಟು ಏರಿಕೆಯಾಗಿದ್ದು 2.33 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷ 1.60 ಲಕ್ಷ ವಾಹನಗಳ ಮಾರಾಟವಾಗಿತ್ತು.  

ವಿಇಸಿವಿ ವಾಹನ: ಐಷರ್ ಮೋಟರ್ಸ್‌ನ ಅಂಗಸಂಸ್ಥೆ ‘ವಿಇಸಿವಿ’ ವಾಹನಗಳ ಮಾರಾಟವು ಡಿಸೆಂಬರ್‌ನಲ್ಲಿ ಶೇ 11.1ರಷ್ಟು ಹೆಚ್ಚಳವಾಗಿ, 8,026ಕ್ಕೆ ತಲುಪಿದೆ. ಹಿಂದಿನ ಇದೇ ಅವಧಿಯಲ್ಲಿ 7,221 ವಾಹನಗಳು ಮಾರಾಟವಾಗಿದ್ದವು. 7,468 ಟ್ರಕ್‌ ಮತ್ತು ಬಸ್‌ಗಳು ಮಾರಾಟವಾಗಿವೆ. 

ಮಾರುತಿ ಸುಜುಕಿ ಮಾರಾಟ ಇಳಿಕೆ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾದ ವಾಹನಗಳ ಮಾರಾಟವು ಡಿಸೆಂಬರ್‌ನಲ್ಲಿ ಶೇ 1.28ರಷ್ಟು ಇಳಿಕೆಯಾಗಿದೆ. 1.37 ಲಕ್ಷ ವಾಹನಗಳು ಮಾರಾಟವಾಗಿವೆ. 2022ರ ಡಿಸೆಂಬರ್‌ನಲ್ಲಿ 1.39 ಲಕ್ಷ ವಾಹನ ಮಾರಾಟವಾಗಿದ್ದವು. ಈ ಅವಧಿಯಲ್ಲಿ ವಾಹನಗಳ ರಫ್ತು 21796ರಿಂದ 26884ಕ್ಕೆ ಏರಿಕೆ ಆಗಿದೆ.

ಟಾಟಾ ಮಾರಾಟ ಶೇ 4 ಏರಿಕೆ

ಟಾಟಾ ಮೋಟರ್ಸ್‌ ವಾಹನಗಳ ದೇಶೀಯ ಮಾರಾಟವು ಡಿಸೆಂಬರ್‌ನಲ್ಲಿ ಶೇ 4ರಷ್ಟು ಏರಿಕೆಯಾಗಿದೆ. ಒಟ್ಟು 76138 ವಾಹನಗಳು ಮಾರಾಟವಾಗಿವೆ. 2022ರ ಡಿಸೆಂಬರ್‌ನಲ್ಲಿ 72997 ವಾಹನಗಳು ಮಾರಾಟವಾಗಿದ್ದವು. ಪ್ರಯಾಣಿಕ ವಾಹನಗಳ ಮಾರಾಟ 40043ರಿಂದ 43470ಕ್ಕೆ (ಶೇ 9ರಷ್ಟು) ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.