ನವದೆಹಲಿ: ಇಂಧನ ಬೆಲೆ ಏರಿಕೆ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಇದೊಂದು ಬೇಸರದ ಸಂಗತಿ' ಎಂದು ಹೇಳಿದ್ದಾರೆ.
'ಇಂಧನ ಬೆಲೆ ಏರಿಕೆಯು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇಂಧನ ಬೆಲೆ ಕುಸಿತವೇ ಇದಕ್ಕೆ ಉತ್ತರವಾಗಬೇಕಿದೆ. ಇದನ್ನು ಹೊರತುಪಡಿಸಿ ಬೇರೆ ಏನು ಹೇಳಿದರೂ, ಯಾರಿಗೂ ಮನವರಿಕೆಯಾಗುವುದಿಲ್ಲ' ಎಂದು ಸೀತಾರಾಮನ್ ತಿಳಿಸಿದ್ದಾರೆ.
ಗ್ರಾಹಕರಿಗೆ ಚಿಲ್ಲರೆ ಇಂಧನವನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸಬೇಕಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಪೆಟ್ರೋಲ್ ಬೆಲೆಯು ದೆಹಲಿಯಲ್ಲಿ ಶುಕ್ರವಾರ ಲೀಟರ್‌ಗೆ ₹ 90ರ ಗಡಿ ದಾಟಿದೆ. ಸತತ ಹನ್ನೊಂದನೆಯ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹ 90.19 ಆಗಿದೆ. ಅಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ₹ 80.60 ಆಗಿದೆ. ಪೆಟ್ರೋಲ್ ಬೆಲೆಯು ಮುಂಬೈನಲ್ಲಿ ₹ 96.62ಕ್ಕೆ ಹೆಚ್ಚಳವಾಗಿದೆ.
ಗುರುವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 65 ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ. ಕಳೆದ ಹನ್ನೊಂದು ದಿನಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ₹ 3.24ರಷ್ಟು ಹೆಚ್ಚಳ ಆಗಿದೆ. 2010ರಲ್ಲಿ ಪೆಟ್ರೋಲ್ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದ ನಂತರ ಆಗಿರುವ ದಾಖಲೆಯ ಹೆಚ್ಚಳ ಇದು. ಡೀಸೆಲ್ ಬೆಲೆ ಹನ್ನೊಂದು ದಿನಗಳಲ್ಲಿ ₹ 3.47ರಷ್ಟು ಹೆಚ್ಚಾಗಿದೆ.
ಶುಕ್ರವಾರದ ಬೆಲೆ ಹೆಚ್ಚಳದ ಪರಿಣಾಮವಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ₹ 93.21ಕ್ಕೆ, ಡೀಸೆಲ್ ₹ 85.44ಕ್ಕೆ ಮಾರಾಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.