ADVERTISEMENT

ಸ್ಯಾಮ್‌ಸಂಗ್‌ ಫೋನ್‌ ತಯಾರಿಕೆಗೂ ಕೊರೊನಾ ವೈರಸ್‌ ಕಾಟ; ವಿಯೆಟ್ನಾಂನಲ್ಲಿ ಆತಂಕ

ಏಜೆನ್ಸೀಸ್
Published 22 ಫೆಬ್ರುವರಿ 2020, 12:42 IST
Last Updated 22 ಫೆಬ್ರುವರಿ 2020, 12:42 IST
ಸ್ಯಾಮ್‌ಸಂಗ್‌ ಝಡ್‌ ಫ್ಲಿಪ್‌ ಫೋನ್‌
ಸ್ಯಾಮ್‌ಸಂಗ್‌ ಝಡ್‌ ಫ್ಲಿಪ್‌ ಫೋನ್‌   
""

ಹನಾಯ್‌: ವಿಯೆಟ್ನಾಂನಲ್ಲಿ ತಯಾರಿಕಾ ಘಟಕಗಳನ್ನು ಹೊಂದಿರುವ 'ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌'ಗೆ ಕೊರೊನಾ ವೈರಸ್‌ ಆತಂಕ ಎದುರಾಗಿದೆ. ಹೊಸ ಫೋನ್‌ಗಳ ತಯಾರಿಕೆಗೆ ಹೊಡೆತ ಬೀಳಬಹುದು ಎಂದು ವಿಯೆಟ್ನಾಂಕೈಗಾರಿಕೆ ಸಚಿವಾಲಯ ಹೇಳಿದೆ.

ವೈರಸ್‌ ಆತಂಕದಿಂದಾಗಿ ಅಗತ್ಯ ಬಿಡಿ ಭಾಗಗಳ ಪೂರೈಕೆಯಾಗದೆ ಕಾರು, ಎಲೆಕ್ಟ್ರಾನಿಕ್ಸ್‌ ಹಾಗೂ ಫೋನ್‌ ತಯಾರಿಕಾ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ. ಉಪಕರಣಗಳು ಹಾಗೂ ಬಿಡಿ ಭಾಗಗಳಿಗೆ ವಿಯೆಟ್ನಾಂ ಚೀನಾ ಮೇಲೆ ಅವಲಂಬಿತವಾಗಿದ್ದು, ಚೀನಾದಿಂದ ಪೂರೈಕೆಯಲ್ಲಿ ಆಗುವ ವ್ಯತ್ಯಾಸ ತಯಾರಿಕೆ ವಲಯದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ವಿಯೆಟ್ನಾಂನ ಅತಿ ದೊಡ್ಡ ವಿದೇಶಿ ಹೂಡಿಕೆದಾರ ಕಂಪನಿ ಸ್ಯಾಮ್‌ಸಂಗ್‌, ತನ್ನ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡಿ ಭಾಗಗಳಿಗೆ ಚೀನಾನೆಚ್ಚಿಕೊಂಡಿದೆ. ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ (ಕೋವಿಡ್–19) ಸರಕು ಸಾಗಣೆ ಹಾಗೂ ಕೈಗಾರಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಚೀನಾದಿಂದ ಇತರೆ ರಾಷ್ಟ್ರಗಳಿಗೆ ಬಿಡಿ ಭಾಗಗಳ ಪೂರೈಕೆ ಬಹುತೇಕ ಸ್ಥಗಿತವಾಗಿದೆ.

ADVERTISEMENT

ಸಮುದ್ರ ಅಥವಾ ವಾಯು ಮಾರ್ಗದಲ್ಲಿ ತಯಾರಿಕೆಗೆ ಅಗತ್ಯವಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸ್ಯಾಮ್‌ಸಂಗ್‌ ಪ್ರಯತ್ನಿಸುತ್ತಿದೆ. ಆದರೆ, ಅದರಿಂದ ಆಮದು ಖರ್ಚು ಹೆಚ್ಚಲಿದೆ ಹಾಗೂ ಬೇಡಿಕೆ ತಕ್ಕಂತೆ ಪೂರೈಕೆ ಸಾಧ್ಯವಾಗದಿರಬಹುದು ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಪ್ರಸ್ತುತ ವಿಯೆಟ್ನಾಂನಲ್ಲಿ ಯಾವುದೇ ತಯಾರಿಕಾ ಘಟಕಗಳು ಕಾರ್ಯಸ್ಥಗಿತಗೊಳಿಸಿಲ್ಲ. ಆದರೆ, ಮುಂದಿನ 1–1.5 ತಿಂಗಳು ವೈರಸ್‌ ಪ್ರಭಾವ ಹೀಗೆಯೇ ಮುಂದುವರಿದರೆ ಪರಿಣಾಮ ತೀವ್ರವಾಗಲಿದೆ. ಟಿವಿ ಮತ್ತು ಫೋನ್‌ ತಯಾರಿಕೆಗೆ ಹೆಚ್ಚಿನ ಹೊಡೆತ ಬೀಳಲಿದೆ.

ಈಗಾಗಲೇ 15 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢ ಪಟ್ಟಿದೆ. ತಯಾರಿಕೆ ಘಟಕಗಳುಕಾರ್ಯ ನಿಲ್ಲಿಸಿದರೆ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ವಿಯೆಟ್ನಾಂ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಶೇ 6.8ರಷ್ಟು ಆರ್ಥಿಕ ವೃದ್ಧಿ ನಿರೀಕ್ಷಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.