ADVERTISEMENT

ವಾಟ್ಸ್‌ಆ್ಯಪ್‌ನಿಂದ ಖಾಸಗಿತನದ ಉಲ್ಲಂಘನೆ: ಕೇಂದ್ರದಿಂದ ಪರಿಶೀಲನೆ

ಪಿಟಿಐ
Published 10 ಮೇ 2023, 11:48 IST
Last Updated 10 ಮೇ 2023, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ (ಪಿಟಿಐ): ಸ್ಮಾರ್ಟ್‌ಫೋನ್‌ ಬಳಕೆಯಲ್ಲಿ ಇಲ್ಲದಿದ್ದ ಹೊತ್ತಿನಲ್ಲಿಯೂ ವಾಟ್ಸ್‌ಆ್ಯಪ್‌ ಅದರ ಮೈಕ್ರೊಫೋನ್‌ ಸೌಲಭ್ಯವನ್ನು ಬಳಸುತ್ತಿತ್ತು ಎಂಬ ಆರೋಪದ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

‘ನಾನು ನಿದ್ರೆ ಮಾಡುತ್ತಿದ್ದ ಹೊತ್ತಿನಲ್ಲಿ ವಾಟ್ಸ್‌ಆ್ಯಪ್‌ ಮೈಕ್ರೊಫೋನ್‌ಅನ್ನು ಬಳಕೆ ಮಾಡುತ್ತಿದೆ. ಏನಾಗುತ್ತಿದೆ’ ಎಂದು ಟ್ವಿಟರ್‌ನ ಎಂಜಿನಿಯರಿಂಗ್ ನಿರ್ದೇಶಕ ಫೋದ್ ದಾಬಿರಿ ಆರೋ‍ಪಿಸಿದ್ದರು. ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್ ಅವರು, ‘ಈ ಉಲ್ಲಂಘನೆಯನ್ನು ಒಪ್ಪಿಕೊಳ್ಳಲು ಆಗದು, ಇದು ಖಾಸಗಿತನದ ಉಲ್ಲಂಘನೆ’ ಎಂದು ಹೇಳಿದ್ದಾರೆ.

‘ಈ ಬಗ್ಗೆ ನಾವು ತಕ್ಷಣ ಪರಿಶೀಲಿಸಲಿದ್ದೇವೆ. ಖಾಸಗಿತನದ ಉಲ್ಲಂಘನೆ ಆಗಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದ್ದಾರೆ. ಟ್ವಿಟರ್ ಎಂಜಿನಿಯರ್ ಮಾಡಿರುವ ಆರೋಪಕ್ಕೆ ಉತ್ತರಿಸಿರುವ ವಾಟ್ಸ್‌ಆ್ಯಪ್, ‘ಇದು ಆ್ಯಂಡ್ರಾಯ್ಡ್‌ನಲ್ಲಿನ ಒಂದು ಬಗ್‌ನಿಂದ ಆಗಿರಬಹುದು ಎಂದು ಭಾವಿಸಿದ್ದೇವೆ’ ಎಂದು ಹೇಳಿದೆ.

ADVERTISEMENT

‘ಬಳಕೆದಾರರಿಂದ ಅನುಮತಿ ದೊರೆತ ನಂತರ ವಾಟ್ಸ್‌ಆ್ಯಪ್‌, ಬಳಕೆದಾರರು ಕರೆ ಮಾಡುವ ಸಂದರ್ಭದಲ್ಲಿ, ವಾಯ್ಸ್‌ನೋಟ್‌ (ಧ್ವನಿ ಟಿಪ್ಪಣಿ) ಸಿದ್ಧಪಡಿಸುವಾಗ ಅಥವಾ ವಿಡಿಯೊ ಸೆರೆಹಿಡಿಯುವಾಗ ಮಾತ್ರ ಮೈಕ್‌ ಸೌಲಭ್ಯವನ್ನು ಬಳಸುತ್ತದೆ. ಆ ಹೊತ್ತಿನಲ್ಲಿಯೂ, ಅದು ಎನ್‌ಕ್ರಿಪ್ಟ್‌ ಆಗಿರುತ್ತದೆ. ಬಳಕೆದಾರರು ಏನು ಹೇಳುತ್ತಿದ್ದಾರೆ ಎಂಬುದನ್ನು ನಾವು ಆಲಿಸುವುದಿಲ್ಲ’ ಎಂದು ವಾಟ್ಸ್‌ಆ್ಯಪ್ ವಿವರಣೆ ನೀಡಿದೆ.

ನಿದ್ರೆ ಮಾಡುತ್ತಿದ್ದ ಹೊತ್ತಿನಲ್ಲಿ ವಾಟ್ಸ್‌ಆ್ಯಪ್‌ ತಮ್ಮ ಸ್ಮಾರ್ಟ್‌ಫೋನ್‌ನ ಮೈಕ್ರೊಫೋನ್ ಸೌಲಭ್ಯವನ್ನು ಹಲವು ಸಂದರ್ಭಗಳಲ್ಲಿ ಬಳಕೆ ಮಾಡುತ್ತಿತ್ತು ಎಂದು ಹೇಳುವ ಸ್ಕ್ರೀನ್‌ಶಾಟ್‌ಗಳ್ನು ಟ್ವಿಟರ್ ಎಂಜಿನಿಯರ್ ಹಂಚಿಕೊಂಡಿದ್ದಾರೆ. ಇದಕ್ಕೆ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ‘ವಾಟ್ಸ್‌ಆ್ಯಪ್‌ಅನ್ನು ನಂಬಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.