ADVERTISEMENT

ಕೊಹ್ಲಿ ಜನಪ್ರಿಯ ಸೆಲೆಬ್ರಿಟಿ: ರಣವೀರ್‌ ಸಿಂಗ್‌ ದ್ವಿತೀಯ, ಶಾರುಕ್‌ ತೃತೀಯ ಸ್ಥಾನ

ಕ್ರೋಲ್ಸ್‌ ಕನ್ಸಲ್ಟೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರ್ಯಾಂಡ್‌ ಮೌಲ್ಯ ಆಧರಿಸಿದ ವರದಿ

ಪಿಟಿಐ
Published 18 ಜೂನ್ 2024, 16:30 IST
Last Updated 18 ಜೂನ್ 2024, 16:30 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಮುಂಬೈ: ಕ್ರೋಲ್ಸ್‌ ಕನ್ಸಲ್ಟೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರ್ಯಾಂಡ್‌ ಮೌಲ್ಯ ಆಧರಿಸಿದ ವರದಿ ಪ್ರಕಾರ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರಿಟಿ ಆಗಿ ಹೊರಹೊಮ್ಮಿದ್ದಾರೆ.

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರನ್ನು ಹಿಂದಿಕ್ಕಿರುವ ಅವರು, ಮರಳಿ ಅಗ್ರಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್‌ ನಟ  ಶಾರುಕ್‌ಖಾನ್‌ ಮೂರನೇ ಸ್ಥಾನದಲ್ಲಿದ್ದಾರೆ.

2020ನೇ ಸಾಲಿನಲ್ಲಿ ಕೊಹ್ಲಿ ಅವರ ಬ್ರ್ಯಾಂಡ್ ಮೌಲ್ಯ ₹1,982 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಬ್ರ್ಯಾಂಡ್‌ ಮೌಲ್ಯದಲ್ಲಿ ಕೊಂಚ ಇಳಿಕೆಯಾಗಿದ್ದು, ₹1,900 ಕೋಟಿ ಆಗಿದೆ.  

ADVERTISEMENT

2022ರಲ್ಲಿ ಕೊಹ್ಲಿ ₹1,474 ಕೋಟಿ ಮೌಲ್ಯದ ಬ್ರ್ಯಾಂಡ್‌ ಮೌಲ್ಯ ಹೊಂದಿದ್ದರು. ಒಂದೇ ವರ್ಷದಲ್ಲಿ ಮೌಲ್ಯದಲ್ಲಿ ಶೇ 29ರಷ್ಟು ಜಿಗಿತ ಕಂಡಿದ್ದು, ದುಬಾರಿ ತಾರೆ ಎನಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಣವೀರ್‌ ಸಿಂಗ್‌ ಅವರ ಬ್ರ್ಯಾಂಡ್‌ ಮೌಲ್ಯ ₹1,692 ಕೋಟಿ ಆಗಿದೆ. 

ನಟ ಶಾರುಕ್‌ ಖಾನ್‌ ₹1,006 ಕೋಟಿ ಬ್ರ್ಯಾಂಡ್‌ ಮೌಲ್ಯ ಹೊಂದಿದ್ದಾರೆ. 2022ರಲ್ಲಿ ₹464 ಕೋಟಿ ಬ್ರ್ಯಾಂಡ್‌ ಮೌಲ್ಯ ಹೊಂದಿದ್ದ ಅವರು, 10ನೇ ಸ್ಥಾನದಲ್ಲಿದ್ದರು.

ನಟ ಅಕ್ಷಯ್‌ ಕುಮಾರ್‌ ₹930 ಕೋಟಿ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನ ಹಾಗೂ ₹842 ಕೋಟಿ ಮೌಲ್ಯದೊಂದಿಗೆ ನಟಿ ಅಲಿಯಾ ಭಟ್‌ ಐದನೆ ಸ್ಥಾನ ಪಡೆದಿದ್ದಾರೆ. ನಟಿ ದೀಪಿಕಾ ಪಡುಕೋಣೆ ₹800 ಕೋಟಿ ಮೌಲ್ಯ ಹೊಂದಿದ್ದು, ಆರನೇ ಸ್ಥಾನ ಪಡೆದಿದ್ದಾರೆ. ಈ ಮೂವರು 2022ಕ್ಕೆ ಹೋಲಿಸಿದರೆ ತಲಾ ಒಂದೊಂದು ಸ್ಥಾನ ಇಳಿಕೆ ಕಂಡಿದ್ದಾರೆ‌.

ನಿವೃತ್ತ ಕ್ರಿಕೆಟಿಗ ಎಂ.ಎಸ್. ದೋನಿ ₹798 ಕೋಟಿ (7ನೇ ಸ್ಥಾನ) ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ₹760 ಕೋಟಿ ಬ್ರ್ಯಾಂಡ್‌ ಮೌಲ್ಯ ಹೊಂದಿದ್ದಾರೆ (8ನೇ ಸ್ಥಾನ).

ನಟ ಸಲ್ಮಾನ್‌ ಖಾನ್‌ ₹680 ಕೋಟಿ ಬ್ರ್ಯಾಂಡ್‌ ಮೌಲ್ಯದೊಂದಿಗೆ 10ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 25 ಸೆಲೆಬ್ರಿಟಿಗಳ ಪೈಕಿ ನಟಿಯರಾದ ಕಿಯಾರ ಅಡ್ವಾಣಿ 12ನೇ ಸ್ಥಾನ ಹಾಗೂ ಕತ್ರಿನಾ ಕೈಫ್‌ 25ನೇ ಸ್ಥಾನದಲ್ಲಿದ್ದಾರೆ.

ದೇಶದ ಪ್ರಮುಖ 25 ಸೆಲೆಬ್ರಿಟಿಗಳ ಮೌಲ್ಯ ₹15,832 ಕೋಟಿ ಆಗಿದೆ. ಇದರ ಹಿಂದಿನ ವರ್ಷಕ್ಕಿಂತ ಶೇ 15.5ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.