ನವದೆಹಲಿ: ಕೆಲಸದ ಪಾಳಿ ನಿಗದಿ ಹಾಗೂ ರಜೆಗೆ ಸಂಬಂಧಿಸಿದಂತೆ ಹಾಲಿ ಇರುವ ರೋಸ್ಟರಿಂಗ್ ವ್ಯವಸ್ಥೆಯ ಪರಿಷ್ಕರಣೆ ಬಗ್ಗೆ ಪೈಲಟ್‌ಗಳ ಜೊತೆಗೆ ಚರ್ಚಿಸಲಾಗುವುದು ಎಂದು ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ತಿಳಿಸಿದ್ದಾರೆ.
ರೋಸ್ಟರಿಂಗ್ ವ್ಯವಸ್ಥೆಯ ಪರಿಷ್ಕರಣೆಗೆ ಕಂಪನಿಯು ಪರಿಶೀಲನೆ ನಡೆಸುತ್ತಿದೆ. ಆದರೆ, ಇದರಿಂದ ಮತ್ತೆ ಸಂಘರ್ಷ ತಲೆದೋರುವುದನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಟಾ ಸಮೂಹದ ಜೊತೆಗೆ ವಿಸ್ತಾರಾ ಏರ್‌ಲೈನ್ಸ್ ವಿಲೀನಗೊಂಡ ಬಳಿಕ ಪರಿಷ್ಕೃತ ವೇತನದ ಪಟ್ಟಿ ಪ್ರಕಟಿಸಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹಲವು ಪೈಲಟ್‌ಗಳು ಅನಾರೋಗ್ಯದ ರಜೆಯ ಮೇಲೆ ತೆರಳಿದ್ದರಿಂದ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು.
ಪೈಲಟ್‌ಗಳ ಸೇವೆಯನ್ನು ಹೆಚ್ಚು ಬಳಸಿಕೊಳ್ಳಲು ಮುಂದಾಗಿದ್ದ ಕಂಪನಿಯು ಕೆಲಸ ಪಾಳಿ ಅವಧಿಯನ್ನು ವಿಸ್ತರಿಸಿತ್ತು. ಇದು ಪೈಲಟ್‌ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ವೇತನ ಕುರಿತ ಹೊಸ ಒಪ್ಪಂದದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿಸ್ತಾರಾ ಏರ್‌ಲೈನ್ಸ್ ಇಕ್ಕಟ್ಟಿಗೆ ಸಿಲುಕಿತ್ತು.
ಇತ್ತೀಚೆಗೆ ಪೈಲಟ್‌ಗಳ ಜೊತೆಗೆ ಸಿಇಒ ಕಣ್ಣನ್ ನಡೆಸಿದ ಸಭೆಯಲ್ಲೂ ರೋಸ್ಟರಿಂಗ್ ವ್ಯವಸ್ಥೆಯ ಬಗ್ಗೆ ಕೆಲವರು ಪ್ರಶ್ನೆ ಎತ್ತಿದ್ದು, ಪರಿಷ್ಕರಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕಂಪನಿಯಲ್ಲಿ ಒಟ್ಟು 6,500ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದು, ಈ ಪೈಕಿ ಒಂದು ಸಾವಿರದಷ್ಟು ಪೈಲಟ್‌ಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.