ನವದೆಹಲಿ: ದೇಶದ ಮೂರನೇ ಅತಿ ದೊಡ್ಡ ದೂರಸಂಪರ್ಕ ಸೇವಾಧಾರ ಸಂಸ್ಥೆ ವೊಡಾಫೋನ್ ಐಡಿಯಾ ಕಳೆದ ಹಣಕಾಸು ವರ್ಷದಲ್ಲಿ ಒಟ್ಟು ₹73,878 ಕೋಟಿ ನಷ್ಟ ಅನುಭವಿಸಿದೆ. ಭಾರತದ ಯಾವುದೇ ಕಂಪನಿ ದಾಖಲಿಸಿರುವುದಕ್ಕಿಂತ ಅತಿ ಹೆಚ್ಚು ನಷ್ಟದ ಪ್ರಮಾಣವನ್ನು ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ವೊಡಾಫೋನ್ ಐಡಿಯಾ ಸರ್ಕಾರಕ್ಕೆ ₹51,400 ಕೋಟಿ ಬಾಕಿ ಪಾವತಿಸಬೇಕಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಗೆ ಒಟ್ಟು ₹11,643.5 ಕೋಟಿ ನಷ್ಟ ಆಗಿರುವುದಾಗಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ₹4,881.9 ಕೋಟಿ ನಷ್ಟ ವರದಿಯಾಗಿತ್ತು. 2019ರ ಅಕ್ಟೋಬರ್–ಡಿಸಂಬರ್ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣ ₹6,438.8 ಕೋಟಿ ಇತ್ತು.
2016-17ನೇ ಹಣಕಾಸು ವರ್ಷದ ವರೆಗೂ ಕಂಪನಿಯ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿ ₹58,254 ಕೋಟಿ ಎಂದು ದೂರಸಂಪರ್ಕ ಇಲಾಖೆ ಅಂದಾಜಿಸಿದೆ. ಆದರೆ, ವೊಡಾಫೋನ್ ಐಡಿಯಾ ₹46,000 ಬಾಕಿ ಇರುವುದಾಗಿ ಲೆಕ್ಕ ನೀಡಿದೆ. ಒಟ್ಟು ಬಾಕಿ ಪೈಕಿ ಕಂಪನಿ ₹6,854.4 ಕೋಟಿ ಪಾವತಿಸಿದೆ.
ದೂರಸಂಪರ್ಕ ಸೇವೆ ಕಾರ್ಯಾಚರಣೆಗಳ ಮೂಲಕ ಜೂನ್ ತ್ರೈಮಾಸಿಕದಲ್ಲಿ ₹11,754.2 ಕೋಟಿ ವರಮಾನ ದಾಖಲಾಗಿದೆ. 2018–19ನೇ ಹಣಕಾಸು ವರ್ಷದಲ್ಲಿ ವೊಡಾಫೋನ್ ಐಡಿಯಾದ ನಷ್ಟ ₹14,603.9 ಕೋಟಿ ಇತ್ತು. 20190–20ರಲ್ಲಿ ಒಟ್ಟು ನಷ್ಟ ₹73,878.1 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕಾರ್ಯಾಚರಣೆಗಳಿಂದ ಗಳಿಸಿದ ವರಮಾನ ₹44,957.5 ಕೋಟಿ.
2019ರ ಡಿಸೆಂಬರ್‌ನಿಂದ ಪ್ರೀಪೇಯ್ಡ್ ಬಳಕೆ ವೆಚ್ಚ ಹೆಚ್ಚಿಸಿರುವುದರಿಂದ ವರಮಾನದಲ್ಲಿ ತ್ರೈಮಾಸಿಕ ಶೇ 6ರಷ್ಟು ಏರಿಕೆಯಾಗಿರುವುದಾಗಿ ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.