ನವದೆಹಲಿ:ಅಮೆರಿಕದ ರಿಟೇಲ್ ಬೃಹತ್ ಸಂಸ್ಥೆ ವಾಲ್‌ಮಾರ್ಟ್ ಭಾರತದಲ್ಲಿ ಸುಮಾರು 50 ಮಂದಿ ಕಾರ್ಯನಿರ್ವಾಹಕರನ್ನು (ಎಕ್ಸಿಕ್ಯುಟಿವ್ಸ್) ತೆಗೆದು ಹಾಕಿದೆ. ದೇಶದಲ್ಲಿ 'ವಾಲ್‌ಮಾರ್ಟ್' ಕಾರ್ಯನಿರ್ವಹಣಾ ರಚನೆಯ ಬದಲಾವಣೆ ಭಾಗವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ದೇಶಿ ನವೋದ್ಯಮ ಇ–ಕಾಮರ್ಸ್ 'ಫ್ಲಿಪ್‌ಕಾರ್ಟ್'ನ್ನು ಈ ಹಿಂದೆ ವಾಲ್‌ಮಾರ್ಟ್ ಸ್ವಾಧೀನ ಪಡಿಸಿಕೊಂಡಿದೆ. ಭಾರತದಲ್ಲಿ ಸಗಟು ಮಾರಾಟ ವ್ಯಾಪಾರವನ್ನು ವಿಸ್ತರಿಸಿಕೊಳ್ಳಲು ಅಡೆತಡೆ ಎದುರಿಸುತ್ತಿದ್ದು, ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಲು ಎಕ್ಸಿಕ್ಯುಟಿವ್‌ಗಳನ್ನು ತೆಗೆದು ಹಾಕುವ ಕ್ರಮವಹಿಸಿದೆ ಎನ್ನಲಾಗುತ್ತಿದೆ. ಪ್ರಸ್ತುತ 28 ಸಗಟು ಮಾರಾಟ ಮಳಿಗೆಗಳ ಮೂಲಕ ಚಿಕ್ಕ ಅಂಗಡಿಗಳ ವರ್ತಕರಿಗೆ ಸರಕು ಮಾರಾಟ ಮಾಡುತ್ತಿದೆ. ಆದರೆ, ನೇರವಾಗಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿಲ್ಲ.
ಕಂಪನಿಯ ರಿಯಲ್ ಎಸ್ಟೇಟ್ ವಿಭಾಗದ ಬಹುತೇಕ ಎಕ್ಸಿಕ್ಯುಟಿವ್‌ಗಳುನೌಕರಿ ಕಳೆದುಕೊಂಡಿದ್ದಾರೆ. ಮಳೆಗೆಗಳಿಗಿಂತಲೂ ಇ–ಕಾಮರ್ಸ್ ಕುರಿತು ವಾಲ್‌ಮಾರ್ಟ್ ಹೆಚ್ಚು ಗಮನ ಹರಿಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಯಾವುದೇ ಪ್ರತಿಕ್ರಿಯೆಗೆ ವಾಲ್‌ಮಾರ್ಟ್ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.
2018ರಲ್ಲಿ ಪ್ಲಿಪ್‌ಕಾರ್ಟ್‌ನಲ್ಲಿ ಶೇ 77ರಷ್ಟು ಪಾಲು ಬಂಡವಾಳವನ್ನು ₹ 1.07 ಲಕ್ಷ ಕೋಟಿಗೆ ಖರೀದಿಸಿರುವುದಾಗಿ ವಾಲ್‌ಮಾರ್ಟ್ ಪ್ರಕಟಿಸಿತ್ತು.
ವಾಲ್‌ಮಾರ್ಟ್ ದೇಶದಲ್ಲಿ ಒಟ್ಟು 5,300 ನೌಕರರನ್ನು ಹೊಂದಿದ್ದು, ಮುಖ್ಯ ಕಚೇರಿಯಲ್ಲಿ 600 ಸಿಬ್ಬಂದಿ ಹೊಂದಿದೆ.ಕಳೆದ ವಾರ ಸಹ ಕೆಲವು ಎಕ್ಸಿಕ್ಯುಟಿವ್‌ಗಳನ್ನು ತೆಗೆದು ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.