ದಾವೋಸ್: ‘ವಿಶ್ವದ ಐವರು ಉದ್ಯಮಿಗಳ ಸಂಪತ್ತು 2020ರಿಂದ ದ್ವಿಗುಣಗೊಂಡಿದೆ. ಮುಂದಿನ ಹತ್ತು ವರ್ಷಗಳಲ್ಲಿ ಜಗತ್ತು ತನ್ನ ಮೊದಲ ಲಕ್ಷ ಕೋಟ್ಯಧಿಪತಿಯನ್ನು (ಟ್ರಿಲಿಯನೇರ್) ಕಾಣಲಿದೆ. ಆದರೆ, ಜಗತ್ತಿನ ಬಡತನದ ನಿರ್ಮೂಲನೆಗೆ ಇನ್ನೂ 229 ವರ್ಷಗಳು ಬೇಕಿದೆ...’
–ಇದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ದಾವೋಸ್ ಶೃಂಗದ ಮೊದಲ ದಿನವಾದ ಸೋಮವಾರ ಸಂಪತ್ತಿನ ಅಸಮಾನ ಹಂಚಿಕೆ ಕುರಿತು ಆಕ್ಸ್‌ಫ್ಯಾಮ್ ಸಂಸ್ಥೆ ಬಿಡುಗಡೆಗೊಳಿಸಿರುವ ವಾರ್ಷಿಕ ಸಮೀಕ್ಷೆಯ ಸಾರ.
ವಿಶ್ವದ ಅತಿದೊಡ್ಡ ಹತ್ತು ಕಂಪನಿಗಳ ಪೈಕಿ ಏಳು ಕಂಪನಿಗಳ ಸಿಇಒ ಅಥವಾ ಪ್ರಮುಖ ಷೇರುದಾರರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಹೇಳಿದೆ.
ವಿಶ್ವದ ಪ್ರಮುಖ 148 ಕಂಪನಿಗಳು ₹149 ಲಕ್ಷ ಕೋಟಿ (1.8 ಟ್ರಿಲಿಯನ್ ಡಾಲರ್) ಲಾಭ ಗಳಿಸಿವೆ. ಮೂರು ವರ್ಷಗಳ ಅವಧಿಯಲ್ಲಿ ಅವು ಸರಾಸರಿ ಶೇ 52ರಷ್ಟು ಆದಾಯ ಗಳಿಸಿವೆ. ಶ್ರೀಮಂತ ಹೂಡಿಕೆದಾರರಿಗೆ ದೊಡ್ಡ ಇಡುಗಂಟು ಸಿಕ್ಕಿದೆ. ಆದರೆ, ಕಂಪನಿಗಳಲ್ಲಿ ಲಕ್ಷಾಂತರ ಉದ್ಯೋಗಿಗಳು ಸಂಬಳದ ಕಡಿತ ಎದುರಿಸಿದ್ದಾರೆ ಎಂದು ವಿವರಿಸಿದೆ.
ಸಾರ್ವಜನಿಕ ಸೇವೆಯ ಮೂಲಕ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣ ಮತ್ತು ಏಕಸ್ವಾಮ್ಯವನ್ನು ಬದಿಗೊತ್ತಬೇಕಿದೆ. ಸಂಪತ್ತು ಮತ್ತು ಹೆಚ್ಚುವರಿ ತೆರಿಗೆಯ ಲಾಭ ಹಂಚಿಕೆ ಮಾಡುವಂತಹ ಹೊಸ ಯುಗದ ಉದಯವಾಗಬೇಕಿದೆ ಎಂದು ಪ್ರತಿಪಾದಿಸಿದೆ.
ಜಗತ್ತಿನ ಶೇ 21ರಷ್ಟು ಜನಸಂಖ್ಯೆ ಹೊಂದಿರುವ ಹೊರತಾಗಿಯೂ ವಿಶ್ವದ ಉತ್ತರದಲ್ಲಿರುವ ಸಿರಿವಂತ ರಾಷ್ಟ್ರಗಳು ಜಾಗತಿಕ ಸಂಪತ್ತಿನ ಶೇ 69ರಷ್ಟು ಪಾಲನ್ನು ಹೊಂದಿವೆ. ಅಲ್ಲದೇ, ಈ ಭಾಗವು ವಿಶ್ವದ ಶೇ 74ಷ್ಟು ಕೋಟ್ಯಧಿಪತಿಗಳ ಸಂಪತ್ತಿನ ನೆಲೆಯೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.