ADVERTISEMENT

ಭಾರತ್‌ ಮ್ಯಾಟ್ರಿಮೋನಿಗೆ ಪ್ಲೇ ಸ್ಟೋರ್‌ನಿಂದ ಕೊಕ್‌?

ಸೇವಾ ಶುಲ್ಕ ಪಾವತಿಸದ 10 ಕಂಪನಿಯ ಆ್ಯಪ್‌ಗಳ ವಿರುದ್ಧ ಕ್ರಮ: ಗೂಗಲ್‌

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 0:30 IST
Last Updated 2 ಮಾರ್ಚ್ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ </p></div>

ಸಾಂದರ್ಭಿಕ ಚಿತ್ರ

   

ಸಾಮಾಜಿಕ ಜಾಲತಾಣ ಎಕ್ಸ್‌ 

ನವದೆಹಲಿ: ನಿಗದಿಪಡಿಸಿದ ಸೇವಾ ಶುಲ್ಕ ಭರಿಸಲು ಹಿಂದೇಟು ಹಾಕಿರುವ ಭಾರತ್‌ ಮ್ಯಾಟ್ರಿಮೋನಿ ಸೇರಿದಂತೆ ದೇಶದ ಪ್ರಮುಖ ಹತ್ತು ಕಂಪನಿಗಳ ಆ್ಯಪ್‌ಗಳನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಲಾಗುವುದು ಎಂದು ಗೂಗಲ್‌ ಕಂಪನಿ ಶುಕ್ರವಾರ ತಿಳಿಸಿದೆ.

ADVERTISEMENT

ಕ್ರಿಶ್ಚಿಯನ್‌ ಮ್ಯಾಟ್ರಿಮೋನಿ, ಮುಸ್ಲಿಂ ಮ್ಯಾಟ್ರಿಮೋನಿ ಸೇರಿದಂತೆ ಹಲವು ಆ್ಯಪ್‌ಗಳನ್ನು ಭಾರತ್‌ ಮ್ಯಾಟ್ರಿಮೋನಿ ಕಂಪನಿಯು ಅಭಿವೃದ್ಧಿಪಡಿಸಿದೆ. ಆದರೆ, ಗೂಗಲ್‌ ನಿಗದಿಪಡಿಸಿರುವ ಶುಲ್ಕ ಪಾವತಿಸುವಲ್ಲಿ ಈ ಕಂಪನಿಯು ನಿರ್ಲಕ್ಷ್ಯವಹಿಸಿದೆ ಎನ್ನಲಾಗಿದೆ.

ಹಾಗಾಗಿ, ಆ ಆ್ಯಪ್‌ಗಳಿಗೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಕೊಕ್‌ ನೀಡಲು ತೀರ್ಮಾನಿಸಲಾಗಿದೆ. ಈ ಆ್ಯಪ್‌ಗಳಲ್ಲಿ ಸಂಗಾತಿಗಳನ್ನು ಹುಡುಕಾಟ ನಡೆಸಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ಕಾರಣ ಏನು?:

ಗೂಗಲ್‌ ಕಂಪನಿಯ ಶುಲ್ಕ ನೀತಿ ಖಂಡಿಸಿ ಇತ್ತೀಚೆಗೆ ಹತ್ತು ಸ್ಟಾರ್ಟ್‌ಅಪ್‌ಗಳು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದವು. ‌

ಫೆಬ್ರುವರಿ 9ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅಧ್ಯಕ್ಷತೆಯ ನ್ಯಾಯಮೂರ್ತಿಗಳಾದ ಮನೋಜ್‌ ಮಿಶ್ರಾ ಮತ್ತು ಸತೀಶ್‌ ಚಂದ್ರ ಶರ್ಮಾ ಅವರಿದ್ದ ತ್ರಿಸದಸ್ಯ ಪೀಠವು, ಗೂಗಲ್‌ ಕೈಗೊಂಡಿರುವ  ಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

ಮೂರು ವಾರಗಳ ಬಳಿಕ ಗೂಗಲ್‌, ಆ್ಯಪ್‌ಗಳನ್ನು ತೆಗೆದುಹಾಕಲು ನಿರ್ಧರಿಸಿದೆ. 

ಪ್ಲೇ ಸ್ಟೋರ್‌ನಿಂದ ಭಾರತದ ಶೇ 3ರಷ್ಟು ಕಂಪನಿಗಳು ಮಾತ್ರವೇ ಡಿಜಿಟಲ್‌ ಸೇವೆಗಳನ್ನು ಮಾರಾಟ ಮಾಡುತ್ತವೆ. ಹಾಗಾಗಿ, ಪ್ಲೇ ಸ್ಟೋರ್‌ನಿಂದ ಸೇವೆ ಒದಗಿಸುವ ಕಂಪನಿಗಳು ಶೇ 15ರಷ್ಟು ಅಥವಾ ಅದಕ್ಕಿಂತ ಕಡಿಮೆ ಶುಲ್ಕ ಪಾವತಿಸಬೇಕಿದೆ ಎಂದು ಗೂಗಲ್‌ ಹೇಳಿದೆ.

ಇತ್ತೀಚೆಗೆ ಫೋನ್‌ಪೇ ಕಂಪನಿಯು ಇಂಡಸ್ ಆ್ಯಪ್‌ ಸ್ಟೋರ್ ಅಭಿವೃದ್ಧಿಪಡಿಸಿದೆ. ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಉಚಿತವಾಗಿ ಡಿಜಿಟಲ್‌ ಸೇವೆ ಒದಗಿಸುವುದಾಗಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.