ನವದೆಹಲಿ: ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡ ಬಳಿಕ ಒಂದು ವಾರದಲ್ಲಿ ಬೆಲೆಯು ಶೇ 10ಕ್ಕೂ ಹೆಚ್ಚು ಇಳಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮವು ಈವರೆಗೆ 9.2 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. ಪ್ರತಿ ಕ್ವಿಂಟಲ್‌ಗೆ ಸರಾಸರಿ ₹2,474ರಂತೆ ಮಾರಾಟ ಮಾಡಲಾಗಿದೆ.
ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತನ್ನ ಸಂಗ್ರಹದ 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸರ್ಕಾರ ಈಚೆಗಷ್ಟೇ ನಿರ್ಧಾರ ತೆಗೆದುಕೊಂಡಿದೆ. ಇದರಲ್ಲಿ 25 ಲಕ್ಷ ಟನ್ ಗೋಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವವರು ಮತ್ತು ಮಿಲ್‌ಗಳಿಗೆ ಮಾರಾಟ ಮಾಡಲು ಉದ್ದೇಶಿಸಿದೆ. ನಾಫೆಡ್ ತರಹದ ಸಂಸ್ಥೆಗಳಿಗೆ 3 ಲಕ್ಷ ಟನ್ ಹಾಗೂ ಇನ್ನುಳಿದ 2 ಲಕ್ಷ ಟನ್ ರಾಜ್ಯ ಸರ್ಕಾರಗಳಿಗೆ ಮಾರಾಟ ಮಾಡಲು ಯೋಜನೆ ಹೊಂದಿದೆ.
ಇ–ಹರಾಜಿನ ಪರಿಣಾಮ ಆರಂಭ ಆಗಿದೆ. ಗೋಧಿಯ ಮಾರುಕಟ್ಟೆ ದರವು ಒಂದು ವಾರದಲ್ಲಿ ಶೇ 10ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದು ಆಹಾರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. 23 ರಾಜ್ಯಗಳ 1,150 ಬಿಡ್‌ದಾರರು ಹರಾಜಿನಲ್ಲಿ ಭಾಗವಹಿಸಿದ್ದರು.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ, ಫೆಬ್ರುವರಿ 2ರಂದು ಗೋಧಿ ದರ ಕೆ.ಜಿಗೆ ₹33.47 ಮತ್ತು ಗೋಧಿ ಹಿಟ್ಟಿನ ದರ ಕೆ.ಜಿಗೆ ₹38.1ರಷ್ಟು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.