ADVERTISEMENT

ಜನ ಕಲ್ಯಾಣ ಕಾರ್ಯಕ್ರಮಗಳಿಗೆ 262.48 ಲಕ್ಷ ಟನ್‌ ಗೋಧಿ ಸಂಗ್ರಹ: ಕೇಂದ್ರ

ಪಿಟಿಐ
Published 24 ಮೇ 2024, 15:10 IST
Last Updated 24 ಮೇ 2024, 15:10 IST
.....
.....   

ನವದೆಹಲಿ: 2024–25ನೇ ಮಾರುಕಟ್ಟೆ ವರ್ಷದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಒಟ್ಟು 262.48 ಲಕ್ಷ ಟನ್‌ ಗೋಧಿ ಸಂಗ್ರಹಿಸಲಾಗಿದೆ. ಈ ಸಂಗ್ರಹಣೆ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ. 

ರಾಬಿ ಅವಧಿಯಲ್ಲಿನ ಗೋಧಿ ಸಂಗ್ರಹಣೆ ಕಾರ್ಯ ಪೂರ್ಣಗೊಂಡಿದೆ. 21.31 ಲಕ್ಷ ರೈತರಿಂದ ಗೋಧಿ ಖರೀದಿಸಲಾಗಿದ್ದು, ಇದಕ್ಕಾಗಿ ಕನಿಷ್ಠ ಬೆಂಬಲ ಬೆಲೆಯಡಿ ₹59,715 ಕೋಟಿ ವಿನಿಯೋಗಿಸಲಾಗಿದೆ ಎಂದು ವಿವರಿಸಿದೆ.

ಪ್ರಮುಖವಾಗಿ ಪಂಜಾಬ್‌ನಲ್ಲಿ 124.26 ಲಕ್ಷ ಟನ್‌ ಖರೀದಿಸಲಾಗಿದೆ. ಉಳಿದಂತೆ ಹರಿಯಾಣ 71.49 ಲಕ್ಷ ಟನ್‌, ಮಧ್ಯಪ್ರದೇಶ 47.78 ಲಕ್ಷ ಟನ್‌, ರಾಜಸ್ಥಾನ 9.66 ಲಕ್ಷ ಟನ್‌ ಹಾಗೂ ಉತ್ತರಪ್ರದೇಶದಲ್ಲಿ 9.07 ಲಕ್ಷ ಟನ್‌ ಖರೀದಿಸಲಾಗಿದೆ.

ADVERTISEMENT

ಸಾಮಾನ್ಯವಾಗಿ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಕೇಂದ್ರದ ಖರೀದಿ ಏಜೆನ್ಸಿಗಳಿಂದ ಗೋಧಿ ಸಂಗ್ರಹಣೆ ನಡೆಯುವುದು ವಾಡಿಕೆ. ಆದರೆ, ಈ ಬಾರಿ ಬೆಳೆ ಕಟಾವು ಹಂತದಲ್ಲಿಯೇ ಕೇಂದ್ರದಿಂದ ಸಂಗ್ರಹಣೆ ಆರಂಭಿಸಲಾಗಿತ್ತು. ಬಹುತೇಕ ರಾಜ್ಯಗಳಲ್ಲಿ ಮಾರ್ಚ್‌ನ ಆರಂಭದಲ್ಲಿಯೇ ಖರೀದಿ ಪ್ರಕ್ರಿಯೆ ಶುರುವಾಗಿತ್ತು. 

ಸರ್ಕಾರವು ಮಾರುಕಟ್ಟೆ ವರ್ಷದಲ್ಲಿ 300 ಲಕ್ಷದಿಂದ 320 ಲಕ್ಷ ಟನ್‌ನಷ್ಟು ಗೋಧಿ ಸಂಗ್ರಹಣೆ ಮಾಡುವ ಗುರಿ ಹೊಂದಿದೆ. 

ಭತ್ತ ಖರೀದಿ:

ಅಲ್ಲದೆ, 489.15 ಲಕ್ಷ ಟನ್‌ನಷ್ಟು ಅಕ್ಕಿ ಕಾಪು ದಾಸ್ತಾನಿನ ಗುರಿ ಹೊಂದಲಾಗಿದೆ. ಇದಕ್ಕೆ ಅನುಗುಣವಾಗಿ 728.42 ಲಕ್ಷ ಟನ್‌ನಷ್ಟು ಭತ್ತ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಕನಿಷ್ಠ ಬೆಂಬಲ ಬೆಲೆಯಡಿ ₹1.60 ಲಕ್ಷ ಕೋಟಿ ನಿಗದಿಪಡಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. 

ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಅನ್ನ ಯೋಜನೆ ಸೇರಿ ಇತರೆ ಯೋಜನೆಯಡಿ ವಿತರಣೆ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಡೆಯಲು ಸರ್ಕಾರವು ಗೋಧಿ ಮತ್ತು ಅಕ್ಕಿಯನ್ನು ಕಾಪು ದಾಸ್ತಾನು ಮಾಡುತ್ತದೆ. ಸದ್ಯ ಈ ಎರಡು ಆಹಾರ ಪದಾರ್ಥಗಳ ದಾಸ್ತಾನು ಪ್ರಮಾಣವು 600 ಲಕ್ಷ ಟನ್‌ಗೂ ಹೆಚ್ಚಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.