ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರ ಸೂಚ್ಯಂಕವು ಫೆಬ್ರುವರಿಯಲ್ಲಿ ಎರಡು ವರ್ಷಗಳಿಗೂ ಹೆಚ್ಚಿನ ಕನಿಷ್ಠ ಮಟ್ಟವಾದ ಶೇಕಡ 3.85ಕ್ಕೆ ಇಳಿಕೆ ಕಂಡಿದೆ. ತಯಾರಿಸಿದ ಉತ್ಪನ್ನಗಳು, ಇಂಧನ ಮತ್ತು ವಿದ್ಯುತ್ ಬೆಲೆ ಏರಿಕೆಯು ಕಡಿಮೆ ಆದ ಪರಿಣಾಮವಾಗಿ ಸಗಟು ಹಣದುಬ್ಬರ ತಗ್ಗಿದೆ. ಆದರೆ ಆಹಾರ ವಸ್ತುಗಳ ಬೆಲೆ ಏರಿಕೆಯು ಮುಂದುವರಿದಿದೆ.
ಸಗಟು ಹಣದುಬ್ಬರ ಪ್ರಮಾಣವು ಸತತ ಒಂಬತ್ತು ತಿಂಗಳುಗಳಿಂದ ಇಳಿಕೆಯ ಹಾದಿಯಲ್ಲಿದೆ. ಜನವರಿಯಲ್ಲಿ ಇದು ಶೇ 4.73ರಷ್ಟು ಇತ್ತು, ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಇದು ಶೇ 13.43ರಷ್ಟು ಆಗಿತ್ತು. ಈ ವರ್ಷದ ಫೆಬ್ರುವರಿಯಲ್ಲಿ ದಾಖಲಾಗಿರುವ ಮಟ್ಟವು 2021ರ ಜನವರಿ ನಂತರದ ಕನಿಷ್ಠ ಮಟ್ಟ.
ಸರಕುಗಳ ಬೆಲೆಯು ತಗ್ಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಸಗಟು ಹಣದುಬ್ಬರ ಪ್ರಮಾಣವು ಇನ್ನಷ್ಟು ಕಡಿಮೆ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೆ, ಆಹಾರ ವಸ್ತುಗಳ ಬೆಲೆ ಏರಿಕೆಯು ಮುಂದಿನ ದಿನಗಳಲ್ಲಿ ಹೇಗಿರಲಿದೆ ಎಂಬುದನ್ನು ಮುಂಗಾರು ಹಾಗೂ ಹವಾಮಾನ ಪರಿಸ್ಥಿತಿಯು ತೀರ್ಮಾನಿಸಲಿದೆ ಎಂದು ತಜ್ಞರು ಹೇಳಿದ್ದಾರೆ.
ಆರ್‌ಬಿಐ ರೆಪೊ ದರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಗಮನಿಸುತ್ತದೆ. ಅದು ಫೆಬ್ರುವರಿಯಲ್ಲಿ ಶೇ 6.44ರಷ್ಟಾಗಿದೆ. ಏಪ್ರಿಲ್‌ನಲ್ಲಿ ನಡೆಯುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 0.25ರಷ್ಟು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.