ನವದೆಹಲಿ: ತರಕಾರಿಗಳು, ಆಲೂಗೆಡ್ಡೆ, ಈರುಳ್ಳಿ ಮತ್ತು ಕಚ್ಚಾ ತೈಲದ ಬೆಲೆಗಳ ಹೆಚ್ಚಳದಿಂದಾಗಿ ಮಾರ್ಚ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಅಂದರೆ, ಶೇ 0.53ಕ್ಕೆ ಏರಿಕೆಯಾಗಿದೆ.
ಫೆಬ್ರುವರಿಯಲ್ಲಿ ಹಣದುಬ್ಬರವು ಶೇ 0.20ರಷ್ಟಿತ್ತು. ಹಿಂದಿನ ವರ್ಷದ ಮಾರ್ಚ್‌ನಲ್ಲಿ ಶೇ 1.41ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಆಹಾರದ ಹಣದುಬ್ಬರವು ಶೇ 6.88ಕ್ಕೆ ಏರಿಕೆಯಾಗಿದೆ. 2023ರ ಮಾರ್ಚ್‌ನಲ್ಲಿ ಶೇ 5.42ರಷ್ಟು ಇತ್ತು. ತರಕಾರಿ ಹಣದುಬ್ಬರವು ಶೇ 19.52ಕ್ಕೆ ಹೆಚ್ಚಳವಾಗಿದೆ. ಆಲೂಗೆಡ್ಡೆಯು ಶೇ 25.59ರಿಂದ ಶೇ 52.96ಕ್ಕೆ ಜಿಗಿತ ಕಂಡಿದ್ದರೆ, ಈರುಳ್ಳಿ ಶೇ (–)36.83ರಿಂದ ಶೇ 56.99ಕ್ಕೆ ಹೆಚ್ಚಳವಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ದರವು ಏರಿಕೆಯಾಗುತ್ತಿದ್ದು, ಶೇ 10.26ರಷ್ಟು ಏರಿಕೆಯಾಗಿದೆ. 2023ರ ಮಾರ್ಚ್‌ನಲ್ಲಿ ಶೇ 23.53ರಷ್ಟು ದರ ಇಳಿಕೆ ಇತ್ತು.
ಆದಾಗ್ಯೂ, ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಐದು ತಿಂಗಳ ಕನಿಷ್ಠ ಮಟ್ಟ ಶೇ 4.85ಕ್ಕೆ ಇಳಿದಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 5.09 ಆಗಿದ್ದರೆ, ಹಿಂದಿನ ವರ್ಷದ ಮಾರ್ಚ್‌ನಲ್ಲಿ ಶೇ 5.66 ಆಗಿತ್ತು ಎಂದು ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.