ADVERTISEMENT

ಈರುಳ್ಳಿ, ಆಲೂಗೆಡ್ಡೆ ಬೆಲೆ ಏರಿಕೆ: ಸಗಟು ಹಣದುಬ್ಬರ 15 ತಿಂಗಳಲ್ಲೇ ಗರಿಷ್ಠ

ಪಿಟಿಐ
Published 14 ಜೂನ್ 2024, 14:32 IST
Last Updated 14 ಜೂನ್ 2024, 14:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರವು 15 ತಿಂಗಳ ಗರಿಷ್ಠ ಮಟ್ಟವಾದ ಶೇ 2.61ಕ್ಕೆ ಏರಿಕೆಯಾಗಿ‌ದೆ.

ಬಿಸಿ ಗಾಳಿಯಿಂದಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಅದರಲ್ಲೂ ತರಕಾರಿಗಳು ಮತ್ತು ಆಹಾರ ತಯಾರಿಕಾ ಉತ್ಪನ್ನಗಳ ದರ ಏರುಗತಿಯಲ್ಲಿದೆ.

ADVERTISEMENT

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಸತತ ಮೂರು ತಿಂಗಳಿಂದ ಏರಿಕೆಯ ಪಥದಲ್ಲಿಯೇ ಸಾಗಿದೆ. ಏಪ್ರಿಲ್‌ನಲ್ಲಿ ಶೇ 1.26ರಷ್ಟು ಏರಿಕೆಯಾಗಿತ್ತು. 2023ರ ಮೇ ತಿಂಗಳಿನಲ್ಲಿ ಶೇ (–) 3.61ರಷ್ಟು ದಾಖಲಾಗಿತ್ತು.

‘ಆಹಾರ ಪದಾರ್ಥಗಳು, ತಯಾರಿಕಾ ಸರಕುಗಳು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ, ಖನಿಜ ತೈಲ ಏರಿಕೆಯಾಗಿರುವುದೇ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಕಳೆದ ವರ್ಷದ ಫೆಬ್ರುವರಿಯಲ್ಲಿ ಸಗಟು ಹಣದುಬ್ಬರವು ಶೇ 3.85ರಷ್ಟು ದಾಖಲಾಗುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು.

ಏಪ್ರಿಲ್‌ನಲ್ಲಿ ಶೇ 7.74ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆಯು ಮೇ ತಿಂಗಳಿನಲ್ಲಿ ಶೇ 9.82ರಷ್ಟು ಹೆಚ್ಚಳವಾಗಿದೆ. ಇದು ಹತ್ತು ತಿಂಗಳ ಗರಿಷ್ಠ ಮಟ್ಟವಾಗಿದೆ. ತರಕಾರಿಗಳ ಬೆಲೆಯು ಶೇ 23.60ರಿಂದ ಶೇ 32.42ರಷ್ಟು ಏರಿಕೆಯಾಗಿದೆ.

ಈರುಳ್ಳಿ ಬೆಲೆ ಶೇ 58.05, ಆಲೂಗೆಡ್ಡೆ ಶೇ 64.05 ಮತ್ತು ಬೇಳೆಕಾಳು ಬೆಲೆಯಲ್ಲಿ ಶೇ 21.95ರಷ್ಟು ಏರಿಕೆಯಾಗಿದೆ. 

ಇಂಧನ ಮತ್ತು ವಿದ್ಯುತ್ ಸೂಚ್ಯಂಕದಲ್ಲಿ ಇಳಿಕೆಯಾಗಿದೆ. ಏಪ್ರಿಲ್‌ನಲ್ಲಿ ಶೇ 1.38ರಷ್ಟು ಇದ್ದಿದ್ದು, ಶೇ 1.35ರಷ್ಟಕ್ಕೆ ಕುಗ್ಗಿದೆ.  

ತಯಾರಿಕಾ ಸೂಚ್ಯಂಕದಲ್ಲಿನ ಬೆಲೆ ಏರಿಕೆಗೆ ಜಾಗತಿಕ ಮಟ್ಟದಲ್ಲಿನ ಲೋಹದ ದರ ಹೆಚ್ಚಳವು ಕೊಡುಗೆ ನೀಡಿದೆ. ಏಪ್ರಿಲ್‌ನಲ್ಲಿ (–) ಶೇ 0.42ರಷ್ಟಿದ್ದ ತಯಾರಿಕಾ ಹಣದುಬ್ಬರವು, ಮೇ ತಿಂಗಳಿನಲ್ಲಿ ಶೇ 0.78ರಷ್ಟಕ್ಕೆ ಮುಟ್ಟಿದೆ.‌

‘ದೇಶದಲ್ಲಿ ಬಿಸಿ ಗಾಳಿ ಮುಂದುವರಿದಿದೆ. ಹಾಗಾಗಿ, ಆಹಾರ ಹಣದುಬ್ಬರವು ಏರಿಕೆಯಾಗುವ ಸಾಧ್ಯತೆಯಿದೆ. ಬೆಲೆ ಇಳಿಕೆಯ ಹಾದಿಗೆ ಮರಳುವಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿಯುವ ಮಳೆಯ ಪಾತ್ರ ನಿರ್ಣಾಯಕವಾಗಿದೆ’ ಎಂದು ಬ್ಯಾಂಕ್‌ ಆಫ್‌ ಬರೋಡಾದ ಅರ್ಥಶಾಸ್ತ್ರಜ್ಞೆ ಅದಿತಿ ಗುಪ್ತ ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.