ಮಾನವನ ದಿನನಿತ್ಯದ ಬದುಕಿನಲ್ಲಿ ಈರುಳ್ಳಿಗೆ ಪ್ರಮುಖ ಸ್ಥಾನವಿದೆ. ಎಷ್ಟೋ ಮನೆಗಳಲ್ಲಿ ಈರುಳ್ಳಿ ಇಲ್ಲದೆಯೇ ಅಡುಗೆ ಪರಿಪೂರ್ಣ ಎನಿಸುವುದೇ ಇಲ್ಲ. ಈ ಮಧ್ಯೆ ಈರುಳ್ಳಿ ಬೆಲೆ ಮಾತ್ರ ಗಗನಕ್ಕೇರುತ್ತಲೇ ಸಾಗುತ್ತದೆ. ಅದರಲ್ಲೂ ಆಗಸ್ಟ್ ಮತ್ತು ನವೆಂಬರ್ ತಿಂಗಳಲ್ಲೇ ಏಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ.
ಹೌದು, ಈರುಳ್ಳಿ ಬೆಲೆ ಏರಿಕೆಗೆ ಮುಖ್ಯವಾದ ಕಾರಣವೊಂದಿದೆ. ಅದೇನೆಂದರೆ, ಭಾರತದಲ್ಲಿ ಈರುಳ್ಳಿ ಬೆಲೆಗಳು ಕಾಲೋಚಿತ ಸುಗ್ಗಿಯ ಆಧಾರದ ಮೇಲೆ ಬದಲಾಗುತ್ತಲೇ ಇರುತ್ತವೆ. ಆಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ ಈರುಳ್ಳಿ ಬೆಲೆ ಏಕೆ ಹೆಚ್ಚಾಗುತ್ತದೆ ಎಂಬುದನ್ನು ಆರ್ಥಿಕ ಸಮೀಕ್ಷೆ 2021 ವಿವರಿಸಿದೆ.
ಹೆಚ್ಚಿನ ರಾಜ್ಯಗಳಲ್ಲಿ ರಾಬಿ ಬೆಳೆಗಳು ಮಾರ್ಚ್-ಮೇನಲ್ಲಿ ಕೊಯ್ಲು ನಡೆದು, ಜೂನ್-ಜುಲೈ ಅವಧಿಯಲ್ಲಿ ಬೆಳೆ ಮಾರಾಟವಾಗುತ್ತದೆ. ಖಾರಿಫ್ ಬೆಳೆಗಳು ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಕೊಯ್ಲು ನಡೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ರಾಬಿ ಸುಗ್ಗಿಯು ಮುಗಿಯುವ ತನಕ ಕೊಯ್ಲು ನಡೆಯುತ್ತದೆ. ಆದ್ದರಿಂದ, ರಾಬಿ ಸುಗ್ಗಿಯಲ್ಲಿನ ದಾಸ್ತಾನುಗಳನ್ನು ಮಾರಾಟ ಮಾಡುವ ಸಮಯ ಮತ್ತು ಖಾರಿಫ್ ಕೊಯ್ಲು ನಡೆಯುತ್ತಿರುವಾಗ (ಆಗಸ್ಟ್‌ನಿಂದ ನವೆಂಬರ್) ಈರುಳ್ಳಿ ಬೆಲೆಗಳು ತೀವ್ರವಾಗಿ ಏರುವುದನ್ನು ನಾವು ಗಮನಿಸಿರುತ್ತೇವೆ. ಈ ಅವಧಿಯಲ್ಲಿ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗುವುದರಿಂದಲೇ ಬೆಲೆಗಳು ಹೆಚ್ಚಾಗುತ್ತವೆ.
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ಈರುಳ್ಳಿಯನ್ನು ಹೆಚ್ಚಾಗಿ ಮೂರು ರಾಜ್ಯಗಳಲ್ಲಿ ಸಂಗ್ರಹಿಸುತ್ತದೆ ಮತ್ತು ಶೇಖರಿಸುತ್ತದೆ. ಅವೆಂದರೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್. ಕೇವಲ ಮೂರೇ ರಾಜ್ಯಗಳಿಂದ ಸಂಗ್ರಹಣೆ ಮಾಡುವುದರಿಂದ ಶೇಖರಣೆಗೆ ಹಲವು ಬಾರಿ ಹವಾಮಾನ ಪ್ರತಿಕೂಲವು ಅಡ್ಡಿಯಾಗಿ ಬೆಳೆ ನಾಶವಾಗುತ್ತದೆ. ಇದಲ್ಲದೆ, ಅಗತ್ಯವಿದ್ದಾಗ ತಕ್ಷಣದ ಕ್ರಮಕ್ಕೆ ಅನುಮತಿ ಸಿಗುವುದಿಲ್ಲವಾದ್ದರಿಂದಾಗಿ ವಾಸ್ತವವಾಗಿ ಸಂಗ್ರಹಣೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಸರಿಯಾದ ಟ್ರ್ಯಾಕಿಂಗ್‌ನೊಂದಿಗೆ ವಿಕೇಂದ್ರೀಕೃತ ಸಂಗ್ರಹಣೆ ಮತ್ತು ಶೇಖರಣಾ ವ್ಯವಸ್ಥೆಯು ಹೆಚ್ಚು ಸೂಕ್ತವಾಗುತ್ತದೆ.
ಸರಿಯಾದ ನಿರ್ವಹಣೆಗೆ ಪಾರದರ್ಶಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಇರಬೇಕು, ಅಲ್ಲಿ ರಾಜ್ಯಗಳಿಗೆ ಅಗತ್ಯವಿರುವ ವಿವರಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು, ರಾಜ್ಯವಾರು ಮತ್ತು ತಿಂಗಳ ಪ್ರಕಾರ ಮಾಡುವ ಸಂಗ್ರಹ, ಪ್ರತಿ ರಾಜ್ಯಕ್ಕೆ ವಿತರಿಸಲಾಗುವ ಮೊತ್ತ, ಏಜೆನ್ಸಿ ಮತ್ತು ತಿಂಗಳ ಪ್ರಕಾರ ಲಭ್ಯವಾಗುವಂತೆ ಮಾಡುವ ಮೂಲಕ ಉತ್ತಮ ಯೋಜನೆ ಮತ್ತು ನಿರ್ಧಾರ ತೆಗೆದುಕೊಳ್ಳಬೇಕೆಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.