ADVERTISEMENT

ಆರ್‌‍ಬಿಐ ಲಾಂಛನದಲ್ಲಿ 'ಹುಲಿ' ಚಿತ್ರ ಯಾಕೆ ಎಂಬುದು ನಿಮಗೆ ಗೊತ್ತೆ?

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 6:58 IST
Last Updated 13 ಡಿಸೆಂಬರ್ 2018, 6:58 IST
   

ಬೆಂಗಳೂರು: ಭಾರತೀ ರಿಸರ್ವ್ ಬ್ಯಾಂಕ್‍ನ ಲಾಂಛನದಲ್ಲಿ ಹುಲಿ ಚಿತ್ರ ಯಾಕೆ ಎಂಬುದು ಗೊತ್ತಾ? ಆರ್‌ಬಿಐ ಸರ್ಕಾರಿ ಸಂಸ್ಥೆ ಎಂಬುದನ್ನು ಪ್ರತಿನಿಧಿಸುವುದರ ಜತೆಗೆ ಸ್ವತಂತ್ರ ಸಂಸ್ಥೆ ಎಂಬುದನ್ನು ಇದು ತೋರಿಸುತ್ತದೆ.
1926ರಲ್ಲಿ ಇಂಡಿಯನ್ ಕರೆನ್ಸಿ ಆ್ಯಂಡ್ ಫೈನಾನ್ಸ್ ನಲ್ಲಿರುವ ಹಿಲ್ಟನ್ ಯಂಗ್ ಕಮಿಷನ್ ಎಂದು ಕರೆಯಲ್ಪಡುವ ರಾಯಲ್ ಕಮಿಷನ್ ಕೇಂದ್ರೀಯಬ್ಯಾಂಕ್‍ವೊಂದನ್ನು ರೂಪಿಸಲು ಶಿಫಾರಸು ಮಾಡಿತ್ತು.

ಬಿ.ಆರ್ ಅಂಬೇಡ್ಕರ್ ಅವರು ಕೂಡಾ ಇದೇ ವ್ಯಾಖ್ಯಾನವನ್ನು ಹೊಂದಿದ್ದರು ಎಂಬುದು ಅವರು ಬರೆದ The Problem of the Rupee – Its Origin and Its Solution ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ.

ಕರೆನ್ಸಿ ಮೇಲಿನ ನಿಯಂತ್ರಣ,ದೇಶದಾದ್ಯಂತ ಬ್ಯಾಂಕಿಂಗ್ ಸೌಲಭ್ಯವನ್ನು ಹೆಚ್ಚಿಸುವುದಕ್ಕಾಗಿ ಮತ್ತುಸರ್ಕಾರದ ಹಣ ಜಮಾ ಮಾಡುವುದಕ್ಕೆ ಈ ಬ್ಯಾಂಕ್ ಸ್ಥಾಪಿಸಲಾಯಿತು.1934ರಲ್ಲಿ ಕೇಂದ್ರ ಸರ್ಕಾರ ಆರ್‌ಬಿಐ ಕಾಯ್ದೆಯನ್ನು ಜಾರಿಗೆ ತಂದಿತು.

ADVERTISEMENT

ಲಾಂಛನದ ಬಗ್ಗೆ
ಆರ್‌ಬಿಐಯ ಅಧಿಕೃತ ಲಾಂಛನ ತಾಳೆ ಮರ ಮತ್ತು ಹುಲಿ.ಈಸ್ಟ್ ಇಂಡಿಯಾ ಕಂಪನಿಯ ಮೊಹರುಗಳಲ್ಲಿ ತಾಳೆ ಮರ ಮತ್ತು ಸಿಂಹ ಇತ್ತು. ಇದರಿಂದ ಸ್ಫೂರ್ತಿ ಹೊಂದಿ ಲಾಂಛನದಲ್ಲಿ ತಾಳೆ ಮರ ಮತ್ತು ಹುಲಿಯನ್ನು ಚಿತ್ರಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರಿ ಸಂಸ್ಥೆ. ಅದೇ ವೇಳೆ ನಿರ್ದಿಷ್ಟ ಕಾರ್ಯಗಳಲ್ಲಿ ಇದು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿದೆ ಎಂಬುದು ಲಾಂಛನದ ಹಿಂದಿನ ಅರ್ಥ.

ಆರ್‌ಬಿಐ ಪ್ರಕಾರ, ಲಾಂಛನವು ಸರ್ಕಾರದ ಮಾನ್ಯತೆಯನ್ನು ಬಿಂಬಿಸುವಂತಿರಬೇಕು ಆದರೆ ತುಂಬಾ ನಿಕಟವಾಗಿ ಬಿಂಬಿಸುವಂತಿರಬಾರದು. ಅಷ್ಟೇ ಅಲ್ಲದೆ ಆ ವಿನ್ಯಾಸದಲ್ಲಿ ಭಾರತೀಯತೆ ಇರಬೇಕು. ಹಾಗಾಗಿ ನಾವು ಸಿಂಹದ ಬದಲು ಹುಲಿ ಚಿತ್ರಿಸಿದೆವು. ಹುಲಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇತರ ಪ್ರಾಣಿಗಳಿಗಿಂತ ಅದಕ್ಕೆ ಅದರದ್ದೇ ಆದ ಗತ್ತು ಇದೆ.
ಅಧಿಕಾರಿಗಳ ಪ್ರಕಾರ ಹುಲಿ ರಾಷ್ಟ್ರೀಯ ಮೃಗ ಆಗಿರುವುದರಿಂದ ಸಿಂಹದ ಚಿತ್ರ ಬಿಟ್ಟು ಹುಲಿ ಚಿತ್ರವನ್ನು ಆಯ್ಕೆ ಮಾಡಲಾಯಿತು.ಆ ಸಮಯದಲ್ಲಿ ನಮ್ಮ ದೇಶದಲ್ಲಿ ಹುಲಿಹೆಚ್ಚಿನ ಸಂಖ್ಯೆಯಲ್ಲಿದ್ದು, ಸಿಂಹಗಳ ಸಂಖ್ಯೆ ಕಡಿಮೆಯಾಗಿತ್ತು. ಭಾರತೀಯ ಕಲ್ಪನೆಗೆ ರೂಪ ಕೊಡುವಾಗ ಹುಲಿಯೇ ಸೂಕ್ತ ಆಯ್ಕೆಯಾಗಿತ್ತು.

ಬಿ.ಆರ್ ಅಂಬೇಡ್ಕರ್ ಅವರ ಕಲ್ಪನೆಯ ಸಂಸ್ಥೆಯಾಗಿ ಆರ್‌ಬಿಐ ತಕ್ಷಣವೇ ರೂಪುಗೊಂಡಿಲ್ಲ. ಸರ್ಕಾರದ ಸಂಸ್ಥೆಯಾಗಿದ್ದರೂ ಅದು ಸ್ವತಂತ್ರ ಆಗಿರಬೇಕು ಮತ್ತು ದೇಶದ ಜನರ ಒಳಿತಿಗಾಗಿ ಕಾರ್ಯವೆಸಗಬೇಕು ಎಂಬ ದೂರದೃಷ್ಟಿ ಮಾತ್ರ ಸ್ಪಷ್ಟವಾಗಿತ್ತು.

ಬ್ಯಾಂಕ್‍ನ ಷೇರು ಸರ್ಟಿಫಿಕೇಟ್‍ಗೆ ಮುದ್ರೆಯೊತ್ತುವ ಕೆಲಸವನ್ನು ಆರ್‌ಬಿಐ ಮದ್ರಾಸ್ ಮೂಲದ ಸಂಸ್ಥೆಯೊಂದಕ್ಕೆ ವಹಿಸಿತ್ತು.

ಆದಾಗ್ಯೂ, 1935 ಫೆಬ್ರವರಿ 23ರಂದು ನಡೆದ ಸಭೆಯಲ್ಲಿ ಲಾಂಛನದ ವಿನ್ಯಾಸಕ್ಕೆ ಒಪ್ಪಿಗೆ ಸೂಚಿಸಿದ ಮಂಡಳಿ ಹುಲಿಯ ರೂಪನ್ನು ಕೊಂಚ ಬದಲಿಸುವಂತೆ ಹೇಳಿತು.ಆದರೆ ಅದು ಸಾಧ್ಯವಿಲ್ಲ ಎಂಬ ಉತ್ತರ ವಿನ್ಯಾಸಕಾರರಿಂದ ಬಂತು.ಆ ಕಾಲದಲ್ಲಿ ಭಾರತ ಸರ್ಕಾರದ ಆರ್ಥಿಕ ವಿಭಾಗದ ಡೆಪ್ಯುಟಿ ಕಂಟ್ರೋಲರ್ ಆಗಿದ್ದ, ಜೇಮ್ಸ್ ಬ್ರೈಡ್ ಟೇಲರ್‌ಗೆ ವಿನ್ಯಾಸ ಇಷ್ಟವಾಗಿರಲಿಲ್ಲ.1937ರಲ್ಲಿ ಆರ್‌ಬಿಐಯ ಕೊನೆಯ ಬ್ರಿಟಿಷ್ ಗವರ್ನರ್ ಆಗಿದ್ದರು ಈ ಟೇಲರ್.

ಗವರ್ನ್ ಮೆಂಟ್ ಆಫ್ ಇಂಡಿಯಾ ಮಿಂಟ್ ಸಂಸ್ಥೆ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಪ್ರೆಸ್ ಹೊಸ ಲಾಂಛನವನ್ನು ವಿನ್ಯಾಸ ಮಾಡುವುದಾಗಿ ಟೇಲರ್ ಹೇಳಿದ್ದರು. ಹೊಸ ಲಾಂಛನದ ವಿನ್ಯಾಸಕ್ಕಾಗಿ ಅವರು ಕೊಲ್ಕತ್ತಾದ ಬೆಲ್ವೆಡೇರ್ ನ ಪ್ರವೇಶ ದ್ವಾರದಲ್ಲಿರುವ ಹುಲಿಯ ಪ್ರತಿಮೆಯ ಫೋಟೊ ತೆಗೆದುಕೊಟ್ಟಿದ್ದರು.

ಇಷ್ಟೆಲ್ಲಾ ಮಾಡಿದನಂತರವೂ ಲಾಂಛನದ ವಿನ್ಯಾಸ ಟೇಲರ್‌‍ಗೆ ಹಿಡಿಸಿಲ್ಲ. ಅದರಲ್ಲಿರುವ ಹುಲಿ ಯಾವುದೋ ಪ್ರಬೇಧಕ್ಕೆ ಸೇರಿದ ನಾಯಿಯಂತೆ ಕಾಣುತ್ತದೆ.ನಾಯಿ ಮತ್ತು ಮರದ ಚಿತ್ರ ಅಣಕಮಾಡಿದಂತೆ ಕಾಣಿಸುತ್ತದೆ ಎಂಬ ಭಯ ನನಗಿದೆ. ಹುಲಿಯ ಚಿತ್ರವೇನೋ ಸರಿಯಾಗಿರುವಂತೆ ಕಾಣುತ್ತದೆ ಆದರೆ ಮರದ ಚಿತ್ರ ವಿನ್ಯಾಸವನ್ನು ಕೆಡಿಸಿದೆ ಎಂದು ಅವರು ಪ್ರತಿಕ್ರಿಯಿಸಿದ್ದರು.

ಹುಲಿಯ ಪಾದದ ಕೆಳಗೊಂದು ದಪ್ಪದ ಗೆರೆ ಬೇಕಿತ್ತು.ಮರದ ಕಾಂಡ ತುಂಬಾ ಉದ್ದವಾಗಿದ್ದು ರೆಂಬೆಗಳು ಜಾಸ್ತಿ ಹರಡಿಕೊಂಡಿವೆ. ಹುಲಿಯ ಪಾದದ ಕೆಳಗೆ ದಪ್ಪ ಗೆರೆಯೊಂದು ಎಳೆದು, ಆ ಮರದ ಚಿತ್ರವನ್ನು ಇನ್ನಷ್ಟು ದಪ್ಪ ಮಾಡಿ, ಕಾಂಡದ ಉದ್ದವನ್ನು ಕಡಿಮೆ ಮಾಡಿದ್ದರೆ ಒಳ್ಳೆಯದಿತ್ತು ಎಂಬ ಸಲಹೆಯನ್ನು ಅವರುನೀಡಿದ್ದರು.
ಆದರೆ ಲಾಂಛನವನ್ನು ಮತ್ತೆ ತಿದ್ದಲು ಸಮಯ ಇರಲಿಲ್ಲ.ಟೇಲರ್ ಇದರಿಂದ ಅಸಮಧಾನಗೊಂಡಿದ್ದರು. ಹಾಗಾಗಿ ಯಾವುದೇ ಬದಲಾವಣೆ ಇಲ್ಲದೆಯೇ ಅಂದಿನಿಂದ ಇಂದಿನವರೆಗೂ ಅದೇ ಲಾಂಛನ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.