ADVERTISEMENT

ಲಾಭಾಂಶ ಕಡಿಮೆ ಆಗುವ ಸಾಧ್ಯತೆ: ವೇರಿಯೇಬಲ್ ಪೇ ತಡೆಹಿಡಿದ ವಿಪ್ರೊ

ಪಿಟಿಐ
Published 19 ಆಗಸ್ಟ್ 2022, 10:56 IST
Last Updated 19 ಆಗಸ್ಟ್ 2022, 10:56 IST
   

ನವದೆಹಲಿ: ಐ.ಟಿ. ಸೇವಾ ಕಂಪನಿ ವಿಪ್ರೊ ತನ್ನ ನೌಕರರಿಗೆ ನೀಡುವ ‘ವೇರಿಯೇಬಲ್ ಪೇ’ ತಡೆಹಿಡಿದಿದೆ. ಕಂಪನಿಯ ಲಾಭಾಂಶ ಕಡಿಮೆ ಆಗುವ ಸಾಧ್ಯತೆ ಇರುವುದು, ಪ್ರತಿಭಾವಂತರನ್ನು ಕಂಪನಿಗೆ ಪೂರೈಸುವ ವ್ಯವಸ್ಥೆಯು ಅದಕ್ಷವಾಗಿರುವುದು ಇದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.

ವೇರಿಯೇಬಲ್‌ ಪೇ ಕಡಿತ ಮಾಡುತ್ತಿರುವ ಬಗ್ಗೆ ಕಂಪನಿಯು ತನ್ನ ನೌಕರರಿಗೆ ಇ–ಮೇಲ್ ಮೂಲಕ ಮಾಹಿತಿ ನೀಡಿದೆ ಎಂದು ಮೂಲಗಳು ವಿವರಿಸಿವೆ.

ಸಿ–ಸೂಟ್ ಹಂತದ ವ್ಯವಸ್ಥಾಪಕರಿಗೆ ವೆರಿಯೇಬಲ್‌ ಪೇ ಸಿಗುವುದೇ ಇಲ್ಲ. ಹೊಸದಾಗಿ ನೇಮಕ ಆದವರು ಹಾಗೂ ತಂಡಗಳ ನಾಯಕರು ವೇರಿಯೇಬಲ್‌ ಪೇನಲ್ಲಿ ಗರಿಷ್ಠ ಶೇಕಡ 70ರಷ್ಟು ಪಡೆಯಲಿದ್ದಾರೆ. ಪ್ರತಿಭಾವಂತರ ಮೇಲೆ ಹೆಚ್ಚಿನ ಹೂಡಿಕೆ ಹಾಗೂ ತಂತ್ರಜ್ಞಾನದ ಮೇಲಿನ ಹೂಡಿಕೆ ಕೂಡ ವೇರಿಯೇಬಲ್ ಪೇ ಕಡಿತಕ್ಕೆ ಒಂದು ಕಾರಣ ಎಂದು ಕಂಪನಿಯು ತಿಳಿಸಿದೆ ಎಂದು ಗೊತ್ತಾಗಿದೆ.

ಈ ಕುರಿತು ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ವಿಪ್ರೊ ಕಂಪನಿಯು, ‘ವೇತನ ಹೆಚ್ಚಳದ ವಿಚಾರವಾಗಿ ನಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಬದಲಿಸುವುದಿಲ್ಲ. ನಮ್ಮ ನೌಕರರಿಗೆ ವೇತನ ಏರಿಕೆಯು ಸೆಪ್ಟೆಂಬರ್‌ 1ರಿಂದ ಅನ್ವಯವಾಗಲಿದೆ. ವೇರಿಯೇಬಲ್ ಪೇ ವಿಚಾರದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಇಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.