ADVERTISEMENT

ವಿಪ್ರೊ ಲಾಭದಲ್ಲಿ ಶೇ 7.8ರಷ್ಟು ಇಳಿಕೆ

ಪಿಟಿಐ
Published 19 ಏಪ್ರಿಲ್ 2024, 15:39 IST
Last Updated 19 ಏಪ್ರಿಲ್ 2024, 15:39 IST
ವಿಪ್ರೊ
ವಿಪ್ರೊ   

ನವದೆಹಲಿ: 2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವಿಪ್ರೊ ಕಂಪನಿಯ ನಿವ್ವಳ ಲಾಭವು ಶೇ 7.8ರಷ್ಟು ಇಳಿಕೆಯಾಗಿದೆ. 

2022–23ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹3,074 ಕೋಟಿ ಲಾಭ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ ₹2,835 ಕೋಟಿ ಲಾಭ ಗಳಿಸಿದೆ. ಇದೇ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ಶೇ 4.2ರಷ್ಟು ಇಳಿಕೆಯಾಗಿದೆ. ಒಟ್ಟು ₹22,208 ಕೋಟಿ ವರಮಾನ ಗಳಿಸಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

2023–24ರ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯ ವರಮಾನವು ₹89,760 ಕೋಟಿಯಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 0.8ರಷ್ಟು ಕಡಿಮೆಯಾಗಿದೆ. ನಿವ್ವಳ ಲಾಭದಲ್ಲಿ ಶೇ 2.6ರಷ್ಟು ಇಳಿದಿದ್ದು, ₹11,045 ಕೋಟಿ ಆಗಿದೆ ಎಂದು ಹೇಳಿದೆ.   

ADVERTISEMENT

ಒಟ್ಟು ಸಿಬ್ಬಂದಿ ಸಂಖ್ಯೆಯು ಶೇ 9.1ರಷ್ಟು ಇಳಿಕೆ ಕಂಡಿದೆ. ಮಾರ್ಚ್ ಅಂತ್ಯಕ್ಕೆ ಕಂಪನಿಯಲ್ಲಿ ಒಟ್ಟು 2.34 ಲಕ್ಷ ಉದ್ಯೋಗಿಗಳು ಇದ್ದಾರೆ. 

ಸಿಇಒ ಆಗಿದ್ದ ಥಿಯರಿ ಡೆಲಾಪೋರ್ಟ್ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಹೊಸ ಸಿಇಒ ಆಗಿ ಶ್ರೀನಿವಾಸ್‌ ಪಲ್ಲಿಯಾ ನೇಮಕಗೊಂಡಿದ್ದಾರೆ. ಈ ನೇಮಕವು ಇದು ಕಂಪನಿಯ ಪ್ರದರ್ಶನ ಮತ್ತು ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರಿದೆ. ಹಾಗಾಗಿ, ಲಾಭ, ವರಮಾನದಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಕಳೆದ ಹಣಕಾಸು ವರ್ಷವು ಇಡೀ ಐ.ಟಿ ಉದ್ಯಮಕ್ಕೆ ದೊಡ್ಡ ಸವಾಲುಗಳನ್ನು ಒಡ್ಡಿದೆ. ಇದು ವಿಪ್ರೊದ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರಿದೆ. ಆರ್ಥಿಕ ಪರಿಸ್ಥಿತಿಯು ಇನ್ನೂ ಅನಿಶ್ಚಿತೆಯಿಂದ ಕೂಡಿದೆ. ಹಾಗಾಗಿ, ಅಲ್ಪಾವಧಿಯಲ್ಲಿ ಹೆಚ್ಚಿನ ಸವಾಲುಗಳು ಎದುರಾಗಬಹುದು. ಇವುಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ’ ಎಂದು ಪಲ್ಲಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.