ADVERTISEMENT

ವಿಪ್ರೊ, ಇನ್ಫೊಸಿಸ್‌, ಎಕ್ಸಿಸ್‌ ಬ್ಯಾಂಕ್‌ ಲಾಭ ಏರಿಕೆ

ಪಿಟಿಐ
Published 17 ಅಕ್ಟೋಬರ್ 2024, 16:12 IST
Last Updated 17 ಅಕ್ಟೋಬರ್ 2024, 16:12 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವಿಪ್ರೊ ಕಂಪನಿಯ ನಿವ್ವಳ ಲಾಭದಲ್ಲಿ ಶೇ 21ರಷ್ಟು ಏರಿಕೆಯಾಗಿದೆ.

2023–24ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹2,646 ಕೋಟಿ ಲಾಭ ಗಳಿಸಲಾಗಿತ್ತು. ಈ ಬಾರಿ ₹3,208 ಕೋಟಿ ಲಾಭ ಗಳಿಸಲಾಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ. 

ವರಮಾನದಲ್ಲಿ ಇಳಿಕೆಯಾಗಿದ್ದು ₹22,301 ಕೋಟಿ ಗಳಿಸಿದೆ. ಕಳೆದ ಬಾರಿ ₹22,515 ಕೋಟಿ ವರಮಾನ ಗಳಿಸಿತ್ತು. ಕಂಪನಿಯ ಮಂಡಳಿ 1:1 ಬೋನಸ್‌ ಷೇರು ನೀಡಲು ಅನುಮೋದನೆ ನೀಡಿದೆ. 

ADVERTISEMENT

ಇನ್ಫೊಸಿಸ್‌ ಲಾಭ ಏರಿಕೆ: 

ಇನ್ಫೊಸಿಸ್‌ ಕಂಪನಿಯು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹6,506 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ 5ರಷ್ಟು ಏರಿಕೆಯಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹6,212 ಕೋಟಿ ಲಾಭ ಗಳಿಸಿತ್ತು. ವರಮಾನದಲ್ಲಿ ಶೇ 5ರಷ್ಟು ಹೆಚ್ಚಳವಾಗಿದ್ದು, ₹40,986 ಕೋಟಿ ಗಳಿಸಿದೆ.

ಈ ತ್ರೈಮಾಸಿಕದಲ್ಲಿ 2,500 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ವರಮಾನ, ಬಡ್ಡಿ ಮತ್ತು ತೆರಿಗೆ ಕಡಿತಕ್ಕಿಂತ ಮೊದಲಿನ ಗಳಿಕೆಯು (ಇಬಿಐಟಿ) ₹8,649 ಕೋಟಿಯಾಗಿದ್ದು, ಶೇ 4ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿಗೆ ₹21 ಮಧ್ಯಂತರ ಲಾಭಾಂಶವನ್ನು ಕಂಪನಿಯು ಘೋಷಿಸಿದೆ. 

ಎಕ್ಸಿಸ್‌ ಬ್ಯಾಂಕ್‌ ಲಾಭ ಹೆಚ್ಚಳ:

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್‌ ₹6,918 ಕೋಟಿ ನಿವ್ವಳ ಲಾಭ ಗಳಿಸಿದೆ. 

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹5,864 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 18ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ತಿಳಿಸಿದೆ.

ಒಟ್ಟು ವರಮಾನವು ₹37,142 ಕೋಟಿಯಾಗಿದ್ದು, ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹31,660 ಕೋಟಿ ದಾಖಲಾಗಿತ್ತು. ಬಡ್ಡಿ ವರಮಾನವು ₹30,420 ಕೋಟಿಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.