ADVERTISEMENT

ಹೇಳಿಕೆಗಳಿಂದ ವಾಹನೋದ್ಯಮಕ್ಕೆ ಪ್ರಯೋಜನ ಇಲ್ಲ: ಆರ್‌.ಸಿ. ಭಾರ್ಗವ

ಪಿಟಿಐ
Published 25 ಆಗಸ್ಟ್ 2021, 22:15 IST
Last Updated 25 ಆಗಸ್ಟ್ 2021, 22:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಸರ್ಕಾರದ ಅಧಿಕಾರಿಗಳು ಆಟೊಮೊಬೈಲ್‌ ಉದ್ಯಮಕ್ಕೆ ಬೆಂಬಲವಾಗಿ ಹಲವು ಹೇಳಿಕೆಗಳನ್ನು ನೀಡಿದ್ದರೂ, ವಾಸ್ತವದಲ್ಲಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿಯ ಅಧ್ಯಕ್ಷ ಆರ್.ಸಿ. ಭಾರ್ಗವ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) 61ನೇ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ ವಾಹನ ಉದ್ಯಮ ಕಳೆದ ಕೆಲವು ವರ್ಷಗಳಿಂದ ಕುಸಿತ ಕಾಣುತ್ತಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಕಾರುಗಳನ್ನು ನೀಡುವಂತೆ ಆಗದ ಹೊರತು, ಸಾಂಪ್ರದಾಯಿಕ ಎಂಜಿನ್‌ ವಾಹನ ಆಗಲಿ ಇಲ್ಲವೇ ಸಿಎನ್‌ಜಿ, ಜೈವಿಕ ಇಂಧನ ಅಥವಾ ವಿದ್ಯುತ್ ಚಾಲಿತ ವಾಹನಗಳಿಂದಾಗಲಿ ಉದ್ಯಮದ ಪುನಶ್ಚೇತನ ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.

ಈ ಉದ್ಯಮವು ದೀರ್ಘಕಾಲದಿಂದ ಕುಸಿತ ಕಾಣುತ್ತಿದೆ. ಆಟೊಮೊಬೈಲ್‌ ಉದ್ಯಮದ ಮಹತ್ವದ ಬಗ್ಗೆ ಸರ್ಕಾರದಲ್ಲಿನ ಪ್ರಮುಖ ವ್ಯಕ್ತಿಗಳು ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಉದ್ಯಮವು ಚೇತರಿಸಿಕೊಳ್ಳುವಂತೆ ಮಾಡುವ ಯಾವ ಕ್ರಮವೂ ಕಾರ್ಯರೂಪಕ್ಕೆ ಬಂದಿರುವುದು ಕಾಣಿಸುತ್ತಿಲ್ಲ ಎಂದು ಭಾರ್ಗವ ಕಟುವಾಗಿ ಹೇಳಿದ್ದಾರೆ.

ADVERTISEMENT

‘ಮಾರಾಟ ಹೆಚ್ಚಿಸುವಲ್ಲಿ ಮಾತುಗಳು ಹೆಚ್ಚಿನ ಕೆಲಸ ಮಾಡುವುದಿಲ್ಲ. ಮಾರಾಟ ಹೆಚ್ಚಬೇಕು ಎಂದಾದರೆ ಗಟ್ಟಿಯಾದ ಕ್ರಮಗಳು ಬೇಕು ಎಂಬುದನ್ನು ವಿಷಾದದಿಂದ ಹೇಳುತ್ತಿದ್ದೇನೆ’ ಎಂದಿದ್ದಾರೆ.

ಕಾರು ಉದ್ಯಮ ಮತ್ತು ಪ್ರಯಾಣಿಕ ಕಾರುಗಳು ಐಷಾರಾಮಿ ಸರಕುಗಳು, ಅವುಗಳನ್ನು ಶ್ರೀಮಂತರು ಮಾತ್ರವೇ ಹೊಂದಬೇಕು ಎನ್ನುವ ಹಳೆಯ ನಂಬಿಕೆಯಿಂದ ಕೆಲವರು ಹೊರಬಂದಂತೆ ಕಾಣುತ್ತಿಲ್ಲ. ಈ ಮನಃಸ್ಥಿತಿಯಲ್ಲಿ ಬದಲಾವಣೆ ಆಗಿದ್ದಿದ್ದರೆ, ವಾಹನೋದ್ಯಮದ ಬೆಳವವಣಿಗೆ ವಿಚಾರವಾಗಿ ಏನಾಗುತ್ತಿದೆ ಎನ್ನುವುದನ್ನು ಅರ್ಥಿಕ ತಜ್ಞರು, ಚಿಂತಕರು, ಬರಹಗಾರರು, ಪತ್ರಕರ್ತರು ಬಹಳ ಹಿಂದೆಯೇ ಆಲೋಚಿಸಬೇಕಿತ್ತು. ಬೆಳವಣಿಗೆಯ ಅಂಕಿ–ಅಂಶಗಳು ಎಲ್ಲರಿಗೂ ಕಾಣುವಂತೆ ಇವೆಯಾದರೂ ಪರಿಸ್ಥಿತಿಯನ್ನು ಸರಿಪಡಿಸಲು ಕೆಲವೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿಷಾದದಿಂದ ಹೇಳುತ್ತಿದ್ದೇನೆ’ ಎಂದು ಭಾರ್ಗವ ಹೇಳಿದ್ದಾರೆ.

ಕಾರನ್ನು ಹೊಂದಬೇಕು ಎಂದು ದೇಶದ ಜನರಲ್ಲಿದ್ದ ಬಯಕೆಯಿಂದಾಗಿಯೇ ವಾಹನ ಉದ್ಯಮವು ಅಭಿವೃದ್ಧಿಗೊಂಡಿದೆ; ಯಾವುದೇ ಉದ್ದೇಶಪೂರ್ವಕ ನೀತಿಯಿಂದಲ್ಲ ಎಂದು ಅವರು ಹೇಳಿದ್ದಾರೆ.

ಕಾರು ಉದ್ಯಮದ ಪ್ರಾಮುಖ್ಯತೆ ಮತ್ತು ವಾಹನ ಉದ್ಯಮದ ಬಗ್ಗೆ ಯೋಜನೆ ರೂಪಿಸುವವರ ಮನಃಸ್ಥಿತಿಯಲ್ಲಿನ ಬದಲಾವಣೆಯು ಪದಗಳಿಗಷ್ಟೇ ಸೀಮಿತವಾಗಿರುತ್ತದೆಯೇ ಹೊರತು ಕಾರ್ಯರೂಪಕ್ಕೆ ತರುವಲ್ಲಿ ಅಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದ ಗ್ರಾಹಕರು ಸುರಕ್ಷಿತ ಮತ್ತು ಪರಿಸರ ಪೂರಕ ಇಂಧನ ವಾಹನಗಳನ್ನು ಹೊಂದಬೇಕು ಎನ್ನುವುದನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಆದರೆ, ಇಂತಹ ವಾಹನಗಳನ್ನು ಯುರೋಪ್‌ ಮಾನದಂಡಗಳನ್ನು ಅನುಸರಿಸಿ ಕೈಗೆಟಕುವಂತೆ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

‘ಕೇಂದ್ರೀಕೃತ ಯೋಜನಾ ವ್ಯವಸ್ಥೆಯಲ್ಲಿ ನಾವು ಯಾವಾಗಲೂ ಗ್ರಾಹಕರನ್ನು ಮರೆಯುತ್ತಿದ್ದೇವೆ. ಯೋಜನೆ ರೂಪಿಸುವಾಗ ನಾವು ಗ್ರಾಹಕರ ಬಗ್ಗೆ ಯೋಚಿಸುವುದೇ ಇಲ್ಲ. ಗ್ರಾಹಕರು ಈ ಉತ್ಪನ್ನವನ್ನು ಖರೀದಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂದು ಆಲೋಚಿಸುವುದೇ ಇಲ್ಲ’ ಎಂದಿದ್ದಾರೆ.

ಹೊಸ ಸುರಕ್ಷತಾ ನಿಯಮಗಳ ಕಾರಣದಿಂದಾಗಿ ‘ಮಾರುತಿ 800’ ಮಾದರಿಯನ್ನು ಕೈಬಿಡಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಆದಂತಹ ಸಣ್ಣ ಪ್ರಮಾಣದ ಬೆಲೆ ಹೆಚ್ಚಳವು ಕಾರು ಮಾರುಕಟ್ಟೆಯ ಬೆಳವಣಿಗೆಯಲ್ಲಿ ಕುಸಿತಕ್ಕೆ ಕಾರಣವಾಯಿತು. ಬಿಎಸ್‌–6 ಮಾನದಂಡದಿಂದಾಗಿ ಕಾರಿನ ಬೆಲೆ ₹ 22 ಸಾವಿರದಷ್ಟು ಹೆಚ್ಚಾಯಿತು. ಇದರಿಂದ ಕಾರುಗಳು ಮತ್ತಷ್ಟು ಕೈಗೆಟಕದಂತಾಗಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.