ADVERTISEMENT

ಜಿಎಸ್‌ಟಿ ದರ ಕಡಿತ: ಪ್ರಧಾನಿ ಮೋದಿ ಸುಳಿವು

ಶೇ 99ರಷ್ಟು ಸರಕುಗಳು ಶೇ 18ರ ತೆರಿಗೆ ವ್ಯಾಪ್ತಿಗೆ

ಪಿಟಿಐ
Published 18 ಡಿಸೆಂಬರ್ 2018, 16:46 IST
Last Updated 18 ಡಿಸೆಂಬರ್ 2018, 16:46 IST
   

ಮುಂಬೈ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಬರುವ ಶೇ 99ರಷ್ಟು ಸರಕುಗಳನ್ನು ಶೇ 18ರ ತೆರಿಗೆ ವ್ಯಾಪ್ತಿಗೆ ತರುವ ಪ್ರಕ್ರಿಯೆ ಜಾರಿಯಲ್ಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.

ಶನಿವಾರ ಜಿಎಸ್‌ಟಿ ಮಂಡಳಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಹೇಳಿಕೆಯು ಜಿಎಸ್‌ಟಿ ದರ ಕಡಿತದ ಸುಳಿವು ನೀಡಿದಂತಾಗಿದೆ.

‘ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ಚಿಂತನೆ ನಡೆಯುತ್ತಿದೆ. ಐಷಾರಾಮಿ ಸರಕುಗಳನ್ನೂ ಒಳಗೊಂಡು ಕೆಲವೇ ಕೆಲವು ಸರಕುಗಳನ್ನು ಮಾತ್ರವೇ ಶೇ 28ರ ಗರಿಷ್ಠ ತೆರಿಗೆ ವ್ಯಾಪ್ತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು’ ಎಂದು ಮೋದಿ ಹೇಳಿದ್ದಾರೆ.

ADVERTISEMENT

ಜಿಎಸ್‌ಟಿ ಜಾರಿಗೂ ಮುನ್ನ ನೋಂದಾಯಿತ ಉದ್ಯಮಗಳ ಸಂಖ್ಯೆ 65 ಲಕ್ಷ ಇತ್ತು. ಜಿಎಸ್‌ಟಿ ಜಾರಿಯಾದ ಬಳಿಕ ನೋಂದಣಿಯಲ್ಲಿ 55 ಲಕ್ಷ ಏರಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ, ವ್ಯಾಟ್‌ ಅಥವಾ ಎಕ್ಸೈಸ್‌ ಸುಂಕ ವ್ಯವಸ್ಥೆಗೆ ಅನುಗುಣವಾಗಿ ಜಿಎಸ್‌ಟಿ ರೂಪಿಸಲಾಗಿತ್ತು. ಕಾಲಕಾಲಕ್ಕೆ ಚರ್ಚೆ, ಸಲಹೆಗಳ ಮೂಲಕ ತೆರಿಗೆ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ವ್ಯಾಪಾರ ಮಾರುಕಟ್ಟೆಯಲ್ಲಿದ್ದ ಗೊಂದಲಗಳು ಮರೆಯಾಗಿದ್ದು, ವ್ಯವಸ್ಥೆ ಸುಧಾರಿಸುತ್ತಿದೆ. ದೇಶದ ಆರ್ಥಿಕತೆಯಲ್ಲಿಯೂ ಪಾರದರ್ಶಕತೆ ಮೂಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

‘ಜಿಎಸ್‌ಟಿಯಿಂದ ಹವಾಲಾ ವಹಿವಾಟು’
‘ಯಾವುದೇ ಪೂರ್ವಸಿದ್ಧತೆ ಇಲ್ಲದೆ ಜಿಎಸ್‌ಟಿ ಜಾರಿಗೊಳಿಸಲಾಗಿದೆ. ಇದರಿಂದಾಗಿಹವಾಲಾ ವಹಿವಾಟು ನಡೆಯುತ್ತಿದೆ’ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್‌ ಮಿತ್ರಾ ಟೀಕಿಸಿದ್ದಾರೆ.

‘ಉದ್ಯಮಗಳು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಅರ್ಜಿ ಸಲ್ಲಿಸುತ್ತಿವೆ. ಆದರೆ, ತೆರಿಗೆ ಅಧಿಕಾರಿಗಳು ಅದನ್ನು ಇನ್‌ವೈಯ್ಸ್‌ ಜತೆ ತಾಳೆ ಹಾಕಿ ನೋಡುತ್ತಿಲ್ಲ’

‘ಇನ್‌ವೈಯ್ಸ್‌ ಅಪ್‌ಲೋಡ್‌ ಮಾಡದೇ ಇದ್ದರೆ ಅದು ಹವಾಲಾ ವಹಿವಾಟಿಗೆ ದಾರಿ ಮಾಡಿಕೊಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಇನ್‌ವೈಯ್ಸ್‌ ಅಪ್‌ಲೊಡ್‌ ಮಾಡುವ ಅಗತ್ಯ ಇಲ್ಲದೇ ಇದ್ದಾಗ, ಜಿಎಸ್‌ಟಿಆರ್‌–3ಬಿ ಸಲ್ಲಿಸಿ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದರೆ ಅದು ಕಪ್ಪುಹಣವಾಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.