ನವದೆಹಲಿ: ದೇಶದ ಬಡವರು ಹಾಗೂ ವಲಸಿಗರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ವಿಶ್ವ ಬ್ಯಾಂಕ್ ಸಮ್ಮತಿಸಿದ್ದು, 1 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹7,500 ಕೋಟಿ) ನೆರವು ಘೋಷಿಸಿದೆ.
ಕೋವಿಡ್-19 ಬಿಕ್ಕಟ್ಟಿನಲ್ಲಿ ದೇಶದ ಆರೋಗ್ಯ ವಲಯಕ್ಕಾಗಿ ವಿಶ್ವ ಬ್ಯಾಂಕ್ ಕಳೆದ ತಿಂಗಳು 1 ಬಿಲಿಯನ್ ಅಮೆರಿಕನ್ ಡಾಲರ್ ತುರ್ತು ನೆರವು ಘೋಷಿಸಿತ್ತು. ಈ ಮೂಲಕ ದೇಶಕ್ಕೆ ವಿಶ್ವ ಬ್ಯಾಂಕ್ನಿಂದ ಎರಡು ಬಿಲಿಯನ್ ಡಾಲರ್ ಸಹಕಾರ ದೊರೆತಂತಾಗಿದೆ.
ವಿಶ್ವ ಬ್ಯಾಂಕ್ ಭಾರತದೊಂದಿಗೆ ಮೂರು ವಲಯಗಳಲ್ಲಿ ಕೈಜೋಡಿಸಲಿದೆ ಎಂದು ಭಾರತಕ್ಕೆ ವಿಶ್ವ ಬ್ಯಾಂಕ್ ನಿರ್ದೇಶಕರಾಗಿರುವ ಜುನೈದ್ ಅಹಮದ್ ಹೇಳಿದ್ದಾರೆ.
ಭಾರತ ಸರ್ಕಾರದೊಂದಿಗೆ ವಿಶ್ವ ಬ್ಯಾಂಕ್ ಪಾಲುದಾರಿಕೆ ಹೊಂದುತ್ತಿರುವ ಮೂರು ವಲಯಗಳು- ಆರೋಗ್ಯ, ಸಾಮಾಜಿಕ ಭದ್ರತೆ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ ಎಂಇ).
ಭಾರತ ಸರ್ಕಾರವಲಸಿಗರು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ತಂತ್ರಜ್ಞಾನ ವ್ಯವಸ್ಥೆಗೆ ವಿಶ್ವ ಬ್ಯಾಂಕ್ ನಿಧಿ ಬಳಕೆಯಾಗಲಿದೆ.
ಭಾರತ ಸರ್ಕಾರದ 400ಕ್ಕೂ ಹೆಚ್ಚು ಸಾಮಾಜಿಕ ಭದ್ರತೆಗೆ ಸಂಬಂಧಿತ ಯೋಜನೆಗಳನ್ನು ತಂತ್ರಜ್ಞಾನ ಆಧಾರಿತ ಸಂಯೋಜನೆಗೊಳಿಸುವ ಕಾರ್ಯಗಳತ್ತ ವಿಶ್ವ ಬ್ಯಾಂಕ್ ಗಮನ ಹರಿಸಿದೆ. ನಗರದ ಬಡವರು ಹಾಗೂ ಗ್ರಾಮೀಣ ಭಾಗದ ಬಡವರಿಗೆಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ಸಮಾನತೆ ಕಾಯ್ದುಗೊಳ್ಳಲು ತಂತ್ರಜ್ಞಾನ ವ್ಯವಸ್ಥೆ ಅವಶ್ಯವಾಗಿದೆ ಎಂದು ಜುನೈದ್ ಅಹಮದ್ ಹೇಳಿದ್ದಾರೆ.
ಜನರು ಸಾಮಾಜಿಕ ಯೋಜನೆಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುವುದು ತಪ್ಪಿಸುವುದು, ಇರುವಲ್ಲಿಯೇ ಯೋಜನೆ ಬಳಕೆಗೆ ಅವಕಾಶ ಕಲ್ಪಿಸುವುದನ್ನು ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ವ್ಯವಸ್ಥೆ ರೂಪಿಸುವ ಯೋಜನೆ ಮಹತ್ವದ್ದಾಗಿದೆ.
ಕೊರೊನಾ ವೈರಸ್ ಸೊಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರಗಳಿಗೆ 160 ಬಿಲಿಯನ್ ಡಾಲರ್‌ತುರ್ತು ಸಹಕಾರ ನೀಡಲು ವಿಶ್ವ ಬ್ಯಾಂಕ್ ಕಳೆದ ತಿಂಗಳು ಸಮ್ಮತಿಸಿದೆ.
ಒಂದು ಬಿಲಿಯನ್ ಡಾಲರ್ ಪೈಕಿ 550 ಮಿಲಿಯನ್ ಡಾಲರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಅಸೋಸಿಯೇಷನ್ (ಐಡಿಎ)ನಿಂದ ಸಿಗಲಿದೆ. ಐಬಿಆರ್‌ಡಿ ಕಡೆಯಿಂದ ಸಾಲದ ರೂಪದಲ್ಲಿ 200 ಮಿಲಿಯನ್ ಡಾಲರ್ ಹಾಗೂ ಉಳಿದ 250 ಮಿಲಿಯನ್ ಡಾಲರ್ ನೆರವು 2020ರ ಜೂನ್ 30ಕ್ಕೆ ಪೂರೈಕೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.