ADVERTISEMENT

ಶೇ 6ಕ್ಕೆ ಕುಸಿಯಲಿದೆ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ: ವಿಶ್ವಬ್ಯಾಂಕ್‌ ಮುನ್ನೋಟ

ದ್ವೈವಾರ್ಷಿಕ ವರದಿ

ಏಜೆನ್ಸೀಸ್
Published 13 ಅಕ್ಟೋಬರ್ 2019, 6:19 IST
Last Updated 13 ಅಕ್ಟೋಬರ್ 2019, 6:19 IST
ವಿಶ್ವಬ್ಯಾಂಕ್‌
ವಿಶ್ವಬ್ಯಾಂಕ್‌    

ವಾಷಿಂಗ್ಟನ್‌:ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣಶೇ 6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. 2018–19ನೆ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವುಶೇ 6.9ರಷ್ಟು ದಾಖಲಾಗಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ದ್ವೈವಾರ್ಷಿಕ ವರದಿ ಸಿದ್ಧಪಡಿಸಲಾಗುತ್ತದೆ. ಇತ್ತೀಚಿನ ‘ಸೌತ್‌ ಏಷ್ಯಾ ಎಕನಾಮಿಕ್‌ ಫೋಕಸ್‌‘ ಪ್ರಕಾರ, ಭಾರತದ ಆರ್ಥಿಕ ವೃದ್ಧಿ ದರವು 2021ರ ವೇಳೆಗೆ ಶೇ 6.9ರಷ್ಟು ತಲುಪಲಿದೆ ಹಾಗೂ 2022ರಲ್ಲಿ ಶೇ 7.2ರಷ್ಟು ಇರಲಿದೆ ಎಂದುಮುನ್ನೋಟ ನೀಡಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಜತೆಗಿನ ಸಭೆಯ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಈ ವರದಿ ಬಿಡುಗಡೆ ಮಾಡಿದೆ. 2017–18ನೆ ಹಣಕಾಸು ವರ್ಷದಲ್ಲಿ ಶೇ 7.2ರಷ್ಟಿದ್ದ ಆರ್ಥಿಕ ವೃದ್ಧಿ ದರವು 2018–19ರಲ್ಲಿ ಶೇ 6.8 ದಾಖಲಾಗಿದೆ.

ADVERTISEMENT

ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳು ಚೇತರಿಸಿಕೊಂಡಿರುವುದರಿಂದ ಕೈಗಾರಿಕಾ ಉತ್ಪಾದನೆ ವೃದ್ಧಿ ದರ ಶೇ 6.9ಕ್ಕೆ ಏರಿಕೆ ಕಂಡಿದೆ. ಕೃಷಿ ಮತ್ತು ಸೇವಾ ವಲಯಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ 2.9 ಮತ್ತು ಶೇ 7.5ರಷ್ಟು ಎಂದಿದೆ. 2019–20ರ ಮೊದಲ ತ್ರೈಮಾಸಿಕದಲ್ಲಿ ಬೇಡಿಕೆ ಕುಸಿತದಿಂದಾಗಿ ಕೈಗಾರಿಕೆ ಮತ್ತು ಸೇವಾ ವಲಯದ ಪೂರೈಕೆ ವಲಯ ಕುಂಠಿತ ಕಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 2018ರ ಮಾರ್ಚ್‌ನಿಂದ ಅಕ್ಟೋಬರ್‌ ವರೆಗೂ ಶೇ 12.1ರಷ್ಟು ಕುಸಿದಿತ್ತು. ಆನಂತರ 2019ರ ಮಾರ್ಚ್‌ ವರೆಗೂ ಶೇ 7ರಷ್ಟು ಏರಿಕೆ ಕಂಡಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಇನ್ನಷ್ಟುಓದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.