ನವದೆಹಲಿ: ಭಾರತದ ಆರ್ಥಿಕತೆಯು 2024–25ರ ಹಣಕಾಸು ವರ್ಷದಲ್ಲಿ ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಈ ಮೊದಲು ಜಿಡಿಪಿಯು ಶೇ 6.6ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿತ್ತು. ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಇದನ್ನು ಪರಿಷ್ಕರಿಸಲಾಗಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಬೆಳವಣಿಗೆ ಶೇ 7ರಷ್ಟಾಗಲಿದೆ ಎಂದು ಈಗಾಗಲೇ ಅಂದಾಜಿಸಿವೆ. ಆರ್ಥಿಕ ಸಮೀಕ್ಷೆ ಪ್ರಕಾರ ಶೇ 6.5ರಿಂದ ಶೇ 7 ಬೆಳವಣಿಗೆ ಇರಲಿದೆ. ಆರ್‌ಬಿಐ ಅಂದಾಜು ಪ್ರಕಾರ ಪ್ರಗತಿಯು ಶೇ 7.2ರಷ್ಟು ಇರಲಿದೆ.
ಉತ್ತಮ ಮುಂಗಾರು, ಸರಕು ಮತ್ತು ಸೇವೆಗಳ ಮೇಲೆ ಗ್ರಾಹಕರು ಖರ್ಚು ಮಾಡುವ ಹಣದ ಪ್ರಮಾಣ ಹೆಚ್ಚಳ ಮತ್ತು ರಫ್ತು ಪ್ರಮಾಣ ಏರಿಕೆಯು ಜಿಡಿಪಿ ಪ್ರಗತಿಯ ಅಂದಾಜು ಹೆಚ್ಚಳಕ್ಕೆ ಕಾರಣ ಎಂದು ವಿಶ್ವಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞ ರಾನ್ ಲಿ ಹೇಳಿದ್ದಾರೆ.
ಬಾಹ್ಯ ಸವಾಲುಗಳ ಪರಿಸ್ಥಿತಿ ನಡುವೆಯೂ, ಭಾರತದ ಮಧ್ಯಮ ಅವಧಿ ಮುನ್ನೋಟ ಸಕಾರಾತ್ಮಕವಾಗಿ ಉಳಿದಿದೆ. 2025–26 ಮತ್ತು 2026–27ರಲ್ಲೂ ಜಿಡಿಪಿ ಪ್ರಗತಿಯು ಸದೃಢವಾಗಿ ಉಳಿಯುವ ನಿರೀಕ್ಷೆ ಇದೆ ಎಂದು ರಾನ್ ಹೇಳಿದ್ದಾರೆ.
2023–24ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಸಾಲದ ಅನುಪಾತವು ಶೇ 83.9ರಷ್ಟಿತ್ತು. ಇದು 2026–27ರ ಹಣಕಾಸು ವರ್ಷದ ವೇಳೆಗೆ ಶೇ 82ಕ್ಕೆ ಇಳಿಯಲಿದೆ. ಚಾಲ್ತಿ ಖಾತೆ ಕೊರತೆ ಜಿಡಿಪಿಯ ಅಂದಾಜು ಶೇ 1ರಿಂದ ಶೇ 1.6ರಷ್ಟು ಆಗಬಹುದು ಎಂದು ಅಂದಾಜಿಸಿದೆ.
‘ಭಾರತದ ದೃಢವಾದ ಬೆಳವಣಿಗೆಯ ನಿರೀಕ್ಷೆ, ಇಳಿಮುಖವಾಗಿರುವ ಹಣದುಬ್ಬರ ದರವು ತೀವ್ರ ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ’ ಎಂದು ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ ಆಗಸ್ಟೆ ಟ್ಯಾನೋ ಕೌಮೆ ಹೇಳಿದ್ದಾರೆ.
ಭಾರತವು ತನ್ನ ಜಾಗತಿಕ ವ್ಯಾಪಾರ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಮೂಲಕ ತನ್ನ ಬೆಳವಣಿಗೆಯ ದರವನ್ನು ಮತ್ತಷ್ಟು ಹೆಚ್ಚಿಸಬಹುದು. ಐ.ಟಿ, ವ್ಯಾಪಾರ ಸೇವೆಗಳು, ಫಾರ್ಮಾ, ಜವುಳಿ, ಸಿದ್ಧಉಡುಪು, ಪಾದರಕ್ಷೆ, ಎಲೆಕ್ಟ್ರಾನಿಕ್ಸ್ ಮತ್ತು ಗ್ರೀನ್ ಟೆಕ್ನಾಲಜಿ ಉತ್ಪನ್ನಗಳ ರಫ್ತುಗಳೊಂದಿಗೆ ಭಾರತವು ತನ್ನ ರಫ್ತನ್ನು ವೈವಿಧ್ಯಮಯಗೊಳಿಸಬಹುದು ಎಂದು ಹೇಳಿದರು.
ಕೃಷಿ ವಲಯ ಚೇತರಿಕೆಯಿಂದ ಗ್ರಾಮೀಣ ಪ್ರದೇಶದ ಜನರ ಖರ್ಚು ಪ್ರಮಾಣ ಏರಿಕೆಗೊಳ್ಳಲಿದೆ. 2030ರ ವೇಳೆಗೆ ದೇಶದ ಸರಕುಗಳ ರಫ್ತು ₹83 ಲಕ್ಷ ಕೋಟಿ (1 ಟ್ರಿಲಿಯನ್ ಡಾಲರ್) ಮಾಡುವ ಗುರಿಯನ್ನು ಸಾಧಿಸಲು ರಫ್ತಿನಲ್ಲಿ ವೈವಿಧ್ಯ ಅಗತ್ಯ. ವ್ಯಾಪಾರದ ವೆಚ್ಚ ಮತ್ತು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ಗುರಿಯನ್ನು ತಲುಪಬಹುದು ಎಂದರು.
ಹೆಚ್ಚು ವ್ಯಾಪಾರ ಸಂಬಂಧಿತ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ. ಇದು ನಾವೀನ್ಯ ಮತ್ತು ಉತ್ಪಾದನಾ ಬೆಳವಣಿಗೆಯ ಅವಕಾಶವನ್ನು ಹೆಚ್ಚಿಸಲಿದೆ ಎಂದು ರಾನ್ ಲಿ ಹೇಳಿದ್ದಾರೆ.
ಮುಖ್ಯಾಂಶಗಳು:
ಜೂನ್‌ನಲ್ಲಿ ಜಿಡಿಪಿಯು ಶೇ 6.6ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದ್ದ ವಿಶ್ವಬ್ಯಾಂಕ್
‘ರಫ್ತು ಪ್ರಮಾಣ ಹೆಚ್ಚಳಕ್ಕೆ ವಸ್ತುಗಳ ರಫ್ತಿನಲ್ಲಿ ವೈವಿಧ್ಯ ಅಗತ್ಯ’
ಆರ್‌ಬಿಐನ ಅಂದಾಜಿಗಿಂತ ಕಡಿಮೆ ಇರುವ ವಿಶ್ವಬ್ಯಾಂಕ್‌ನ ಅಂದಾಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.