ವಾಷಿಂಗ್ಟನ್ (ಪಿಟಿಐ): ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 7.5ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
2018–19ನೆ ಹಣಕಾಸು ವರ್ಷದಲ್ಲಿ ದೇಶಿ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 6.8ರಷ್ಟು ದಾಖಲಾಗಿದ್ದು, ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿಯು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿತ್ತು.
ಇದರ ಬೆನ್ನಲ್ಲೇ, ವಿಶ್ವಬ್ಯಾಂಕ್ ವರದಿ ಪ್ರಕಟಗೊಂಡಿರುವುದು ದೇಶಿ ಆರ್ಥಿಕತೆಯ ಪಾಲಿಗೆ ಉತ್ತೇಜನಕಾರಿಯಾದ ಸುದ್ದಿಯಾಗಿದೆ.
2018–19ನೆ ಹಣಕಾಸು ವರ್ಷದಲ್ಲಿ ಭಾರತದ ವೃದ್ಧಿ ದರ ಶೇ 7.2ರಷ್ಟು ಇರಲಿದೆ. 2019–20ರ ಸಾಲಿನ ಆರ್ಥಿಕ ಬೆಳವಣಿಗೆ ದರವು ಈ ಮುಂಚಿನ ಅಂದಾಜಿಗಿಂತ (ಶೇ 7.5) ಬದಲಾಗುವುದಿಲ್ಲ. ಮುಂದಿನ ಮೂರು ಹಣಕಾಸು ವರ್ಷಗಳಲ್ಲಿಯೂ ಶೇ 7.5ರಷ್ಟು ಪ್ರಗತಿ ಕಂಡು ಬರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆ ಎನ್ನುವ ಹೆಗ್ಗಳಿಕೆಯನ್ನು ಭಾರತ ಉಳಿಸಿಕೊಳ್ಳಲಿದೆ. 2021ರಲ್ಲಿ ಭಾರತದ ವೃದ್ಧಿ ದರವು ಚೀನಾದ ಶೇ 6ಕ್ಕಿಂತ, ಶೇ 1.5ರಷ್ಟು ಹೆಚ್ಚಿಗೆ (ಶೇ 7.5) ಇರಲಿದೆ ಎಂದು ತಿಳಿಸಿದೆ.
ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ, ಸರಕು ಮತ್ತು ಸೇವೆಗಳ ಉಪಭೋಗದಲ್ಲಿನ ಏರಿಕೆಯ ಫಲವಾಗಿ ಮುಂಬರುವ ವರ್ಷಗಳಲ್ಲಿ ಭಾರತದ ವೃದ್ಧಿ ದರ ಗರಿಷ್ಠ ಮಟ್ಟದಲ್ಲಿ ಇರಲಿದೆ ಎನ್ನುವುದು ವಿಶ್ವಬ್ಯಾಂಕ್‌ನ ನಿರೀಕ್ಷೆಯಾಗಿದೆ.
ಚೀನಾದ ವೃದ್ಧಿ ದರವು 2018ರಲ್ಲಿದ್ದ ಶೇ 6.6 ರಿಂದ 2019ರಲ್ಲಿ ಶೇ 6.2ಕ್ಕೆ ಇಳಿಯಲಿದೆ. 2020ರಲ್ಲಿ ಶೇ 6.1ರಷ್ಟು ಮತ್ತು 2021ರಲ್ಲಿ
ಶೇ 6ರಷ್ಟು ಆಗಲಿದೆ ಎಂದು ಬ್ಯಾಂಕ್‌ನ ಜಾಗತಿಕ ಆರ್ಥಿಕತೆಯ ಭವಿಷ್ಯ ಕುರಿತ ವರದಿಯಲ್ಲಿ ತಿಳಿಸಲಾಗಿದೆ.
ಮೂಲ ಸೌಕರ್ಯ ವಲಯಗಳಲ್ಲಿನ ಸರ್ಕಾರಿ ಬಂಡವಾಳ ಹೂಡಿಕೆ, ಸರಕು ಮತ್ತು ಸೇವೆಗಳ ಬಳಕೆ ಮತ್ತು ಸಾಲ ನೀಡಿಕೆಯಲ್ಲಿನ ಹೆಚ್ಚಳ, ಹಣದುಬ್ಬರವು ಆರ್‌ಬಿಐನ ಗುರಿಗಿಂತ ಕಡಿಮೆ ಇರಲಿರುವುದು ವೃದ್ಧಿ ದರಕ್ಕೆ ಉತ್ತೇಜನ ನೀಡಲಿದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
‘ಜಿ–20’ ಸಭೆಗೆ ನಿರ್ಮಲಾ
ನವದೆಹಲಿ (ಪಿಟಿಐ): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜಪಾನ್‌ನಲ್ಲಿ ನಡೆಯಲಿರುವ ‘ಜಿ–20’ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಇದೇ 8 ರಿಂದ ಈ ಸಮಾವೇಶ ನಡೆಯಲಿದೆ. ಜಾಗತಿಕ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳು, ಮೂಲಸೌಕರ್ಯ ವಲಯಗಳಲ್ಲಿನ ಹೂಡಿಕೆ ಮತ್ತು ಅಂತರರಾಷ್ಟ್ರೀಯ ತೆರಿಗೆ ಪದ್ಧತಿ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.