ADVERTISEMENT

ಇದೇ ಮೊದಲ ಬಾರಿಗೆ 100 ಟ್ರಿಲಿಯನ್‌ ಡಾಲರ್ ದಾಟಲಿದೆ ಜಗತ್ತಿನ ಆರ್ಥಿಕತೆ: ವರದಿ

ರಾಯಿಟರ್ಸ್
Published 26 ಡಿಸೆಂಬರ್ 2021, 3:23 IST
Last Updated 26 ಡಿಸೆಂಬರ್ 2021, 3:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್‌ ಡಾಲರ್‌ (ಸುಮಾರು ₹7,539 ಲಕ್ಷ ಕೋಟಿ) ದಾಟಲಿದ್ದು, ಆರ್ಥಿಕತೆಯಲ್ಲಿ ಅಮೆರಿಕವನ್ನು ಹಿಂದಿಟ್ಟು ನಂಬರ್ 1 ಪಟ್ಟಕ್ಕೆ ಏರಲು ಚೀನಾಗೆ ಮತ್ತಷ್ಟು ಸಮಯ ಬೇಕಾಗಲಿದೆ ಎಂದು ವರದಿಯಾಗಿದೆ.

ಡಾಲರ್‌ನ ಲೆಕ್ಕಾಚಾರದಲ್ಲಿ ಚೀನಾ 2030ರ ವೇಳೆಗೆ ಜಗತ್ತಿನ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಲಿದೆ ಎಂದು ಬ್ರಿಟನ್‌ನ ಆರ್ಥಿಕ ಸಲಹಾ ಸಂಸ್ಥೆ 'ಸಿಇಬಿಆರ್‌' ಅಂದಾಜಿಸಿದೆ. ಕಳೆದ ವರ್ಷದ ವಿಶ್ವ ಆರ್ಥಿಕತೆಯ ವರದಿಯಲ್ಲಿ ಅಂದಾಜಿಸಿರುವುದಕ್ಕಿಂತ ಎರಡು ವರ್ಷ ತಡವಾಗಿ ಚೀನಾ ಆರ್ಥಿಕತೆಯಲ್ಲಿ ಮುಂಚೂಣಿ ಸ್ಥಾನಕ್ಕೇರಲಿದೆ.

ಭಾರತವು ಮುಂದಿನ ವರ್ಷ ಫ್ರಾನ್ಸ್‌ಗಿಂತ ಮುಂದೆ ಸಾಗಲಿದ್ದು, 2023ರಲ್ಲಿ ಬ್ರಿಟನ್‌ ಅನ್ನು ದಾಟಿ ಜಗತ್ತಿನ ಆರನೇ ಅತಿ ದೊಡ್ಡ ಆರ್ಥಿಕತೆ ಸ್ಥಾನವನ್ನು ಮತ್ತೆ ಸಾಧಿಸಲಿದೆ ಎಂದು ಸಿಇಬಿಆರ್‌ ಹೇಳಿದೆ.

ADVERTISEMENT

'ಹಣದುಬ್ಬರವನ್ನು ಜಗತ್ತಿನ ಆರ್ಥಿಕತೆಯು ಹೇಗೆ ನಿರ್ವಹಿಸುತ್ತದೆ ಎಂಬುದು 2020ರ ಪ್ರಮುಖ ಸವಾಲು. ಅಮೆರಿಕದಲ್ಲಿ ಪ್ರಸ್ತುತ ಹಣದುಬ್ಬರವು ಶೇಕಡ 6.8ರಷ್ಟು ತಲುಪಿದೆ' ಎಂದು ಸಿಇಬಿಆರ್‌ನ ಉಪಾಧ್ಯಕ್ಷ ಡುಗ್ಲಸ್‌ ಮೆಕ್‌ವಿಲಿಯಮ್ಸ್‌ ಹೇಳಿದ್ದಾರೆ.

'ಕೆಲವು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಆರ್ಥಿಕತೆಗೆ ಎದುರಾಗಿರುವ ಅಲ್ಪಾವಧಿಯ ಹೊಡೆತವನ್ನು ನಿಯಂತ್ರಿಸಬಹುದಾಗಿದೆ. ಇಲ್ಲವಾದರೆ, ಇಡೀ ಜಗತ್ತು 2023 ಅಥವಾ 2024ರಲ್ಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗ ಬೇಕಾಗುತ್ತದೆ' ಎಂದಿದ್ದಾರೆ.

ಆರ್ಥಿಕತೆಯಲ್ಲಿ ಜಪಾನ್‌ಗಿಂತ ಮುಂದೆ ಸಾಗಲು ಜರ್ಮನಿಯು ಸರಿಯಾದ ಹಾದಿಯನ್ನು ಹಿಡಿದಿದ್ದು, 2033ರಲ್ಲಿ ಅದು ಸಾಧ್ಯವಾಗಬಹುದೆಂದು ವರದಿ ಹೇಳಿದೆ.

2036ರಲ್ಲಿ ರಷ್ಯಾ ಜಗತ್ತಿನ ಆರ್ಥಿಕತೆಯ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಬಹುದಾಗಿದೆ ಹಾಗೂ 2034ರಲ್ಲಿ ಇಂಡೊನೇಷ್ಯಾ 9ನೇ ಸ್ಥಾನ ತಲುಪಬಹುದು ಎಂದು ವರದಿ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.