ಬೆಂಗಳೂರು: ಒಂದು ಕಾಲದಲ್ಲಿ ₹1.84 ಲಕ್ಷ ಕೋಟಿ ನಿವ್ವಳ ಮೌಲ್ಯ ಹೊಂದಿದ್ದ ಬೆಂಗಳೂರು ಮೂಲದ ಎಜುಟೆಕ್ ಕಂಪನಿ ಬೈಜುಸ್ ಈಗ ‘ಶೂನ್ಯ’ಕ್ಕೆ ಬಂದು ನಿಂತಿದೆ!
ಹೌದು ಸ್ವತಃ ಈ ವಿಷಯವನ್ನು ಜೈಜುಸ್ ಸಿಇಒ ರವೀಂದ್ರನ್ ಅವರೇ ಬಹಿರಂಗಪಡಿಸಿದ್ದಾರೆ.
ಕಂಪನಿಯ ಇತ್ತೀಚಿನ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಲು ಗುರುವಾರ ರಾತ್ರಿ ದುಬೈನಿಂದ ವರ್ಚುವಲ್ ಪ್ರೆಸ್ ಮೀಟ್ ಆಯೋಜಿಸಿದ್ದ ರವೀಂದ್ರನ್ ಅವರು ಕಂಪನಿಗೆ ಬಂದೊದಗಿರುವ ಸಂಕಟವನ್ನು ಪತ್ರಕರ್ತರ ಎದುರು ತೋಡಿಕೊಂಡಿದ್ದಾರೆ.
‘ಕೆಲ ಹೂಡಿಕೆದಾರರಿಂದ ಕಂಪನಿಗೆ ತೀವ್ರ ತೊಂದರೆಯಾಗುತ್ತಿದೆ. ನಾವು ಅವರಿಗೆ (ಹೂಡಿಕೆದಾರರಿಗೆ) ಇಲ್ಲಿವರೆಗೆ ₹8,500 ಕೋಟಿ ಹಿಂದಿರುಗಿಸಿದ್ದೇವೆ. ಅವರು ನನ್ನೊಂದಿಗೆ ಕೆಲಸ ಮಾಡಲು ಬಯಸಿದರೆ, ನಾನು ಒಂದು ರೂಪಾಯಿ ಪಡೆಯುವ ಮೊದಲು ಅವರ ಸಂಪೂರ್ಣ ಹಣವನ್ನು ಹಿಂದಿರುಗಿಸುತ್ತೇನೆ. ಆದರೆ, ಹೂಡಿಕೆಯಾದ ₹12 ಸಾವಿರ ಕೋಟಿಯನ್ನೂ ಈಗಲೇ ಕೇಳುತ್ತಿದ್ದಾರೆ. ಹಲವರು ಸಹಕಾರ ಕೊಟ್ಟರೇ ಕೆಲವರಿಂದ ತೀವ್ರ ತೊಂದರೆಯಾಗುತ್ತಿದೆ‘ ಎಂದು ಹೇಳಿದ್ದಾರೆ.
‘ಕೆಲವು ಆಕ್ರಮಣಕಾರಿ ಸಾಲದಾತರು ಕಂಪನಿ ವಿರುದ್ಧ ದಾವೆಗಳನ್ನೂ ಹೂಡುತ್ತಿದ್ದಾರೆ. ಅವರು ಮಧ್ಯಸ್ಥಿಕೆಗಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಏಕೆಂದರೆ ಅದು ಅವರ ವ್ಯವಹಾರದ ಮಾದರಿಯಾಗಿದೆ‘ ಎಂದು ಕಿಡಿಕಾರಿದ್ದಾರೆ.
‘ಹೌದು, ಕಂಪನಿ ಈಗ ಶೂನ್ಯ ನಿವ್ವಳ ಮೌಲ್ಯ (Net Worth) ಹೊಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ರಂಗದಲ್ಲಿ ಹೂಡಿಕೆ ಮಾಡುವ ಅಮೆರಿಕದ Glas Trust ಅಮೆರಿಕದ ಡೆಲ್ವರ್ ಕೋರ್ಟ್‌ನಲ್ಲಿ ಬೈಜೂಸ್ ವಿರುದ್ಧ ದಾವೆ ಹೂಡಿದೆ. ಈ ಟ್ರಸ್ಟ್ ಬೈಜೂಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ.
‘ಈ ದಿವಾಳಿತನದ ಸಮಸ್ಯೆ ಪರಿಹಾರವಾದ ನಂತರ ನಾವು ಮತ್ತೆ ಪುಟಿದೇಳಲಿದ್ದೇವೆ. ನಮ್ಮ ಇತರ ಅಂಗಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಬೈಜೂಸ್ ಫ್ಲಾಟ್‌ಫಾರ್ಮ್‌ಗಳಿಗೆ ಪ್ರತಿ ತಿಂಗಳು 20 ಕೋಟಿ ಮಕ್ಕಳ ಸೇರ್ಪಡೆ ಆಗುತ್ತಿದೆ. ಏನೇ ಆದರೂ ನಾವು ಮಕ್ಕಳಿಗೆ ಶಿಕ್ಷಣ ನೀಡುವುದನ್ನು ನಿಲ್ಲಿಸುವುದಿಲ್ಲ‘ ಎಂದು ತಿಳಿಸಿದ್ದಾರೆ.
ಪ್ರಕರಣವೊಂದರಲ್ಲಿ ₹158 ಕೋಟಿ ಪಾವತಿಸಿಲ್ಲ ಎಂದು ಬಿಸಿಸಿಐ, ಬೈಜುಸ್ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ (NCLAT) ದಾವೆ ಹೂಡಿತ್ತು. ಇದರಿಂದ ಹೆದರಿದ್ದ ಕಂಪನಿ ಬಿಸಿಸಿಐಗೆ ಸಂಪೂರ್ಣ ಮೊತ್ತವನ್ನು ಪಾವತಿಸಿತ್ತು. ಹೀಗಾಗಿ NCLAT ಬೈಜೂಸ್ ವಿರುದ್ಧ ದಿವಾಳಿತನದ ಪ್ರಕ್ರಿಯೆಯನ್ನು ಕೈಬಿಟ್ಟಿತ್ತು.
ಕೇರಳ ಮೂಲದ ಬಿ.ಟೆಕ್ ಪದವೀಧರ ರವೀಂದ್ರನ್ ಅವರು 2011ರಲ್ಲಿ ಬೈಜುಸ್ ಎಂಬ ಆನ್‌ಲೈನ್ ಶೈಕ್ಷಣಿಕ ಕಂಪನಿ ಸ್ಥಾಪಿಸಿದ್ದರು. ಸದ್ಯ ಭಾರತವೂ ಸೇರಿದಂತೆ 22 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಜುಸ್ 2022 ರಲ್ಲಿ ₹1.84 ಲಕ್ಷ ಕೋಟಿ ನಿವ್ವಳ ಮೌಲ್ಯ ಹೊಂದಿದ್ದ ಜಗತ್ತಿನ ಪ್ರಮುಖ ಸ್ಟಾರ್ಟ್ ಅಪ್ ಕಂಪನಿ ಎಂದು ಹೆಸರಾಗಿತ್ತು.
ಕೋವಿಡ್ ನಂತರದ ಬೆಳವಣಿಗೆ ಹಾಗೂ ಹೂಡಿಕೆದಾರರ ಕಿರಿಕಿರಿಯಿಂದ ಬೈಜುಸ್ ಇದೀಗ ದಿವಾಳಿ ಹಾದಿಗೆ ಬಂದು ನಿಂತಿದೆ. ಇತ್ತೀಚೆಗೆ ಅನೇಕ ಸಿಬ್ಬಂದಿಯನ್ನು ವಜಾ ಮಾಡಿದ್ದಲ್ಲದೇ ಅನೇಕ ಕಚೇರಿಗಳನ್ನು ಮುಚ್ಚಿತ್ತು.
––
ಆಧಾರ– ಪಿಟಿಐ ಹಾಗೂ ರಾಯಿಟರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.