ADVERTISEMENT

ಸಗಟು ಹಣದುಬ್ಬರ ದಾಖಲೆ: 1991ರ ಆಗಸ್ಟ್‌ ನಂತರದ ಗರಿಷ್ಠ ಮಟ್ಟ

ಪಿಟಿಐ
Published 17 ಮೇ 2022, 20:10 IST
Last Updated 17 ಮೇ 2022, 20:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಗಟು ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡ 15.08ಕ್ಕೆ ತಲುಪಿದೆ. ಇಂಧನ, ವಿದ್ಯುತ್, ಕಚ್ಚಾ ಪೆಟ್ರೋಲಿಯಂ, ತರಕಾರಿ ಬೆಲೆಯು ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದು ಸಗಟು ಹಣದುಬ್ಬರ ಪ್ರಮಾಣದ ಹೆಚ್ಚಳಕ್ಕೆ ಪ್ರಮುಖ ಕಾರಣ.

2011-12ನೆಯ ವರ್ಷವನ್ನು ಮೂಲವಾಗಿ ಇರಿಸಿಕೊಂಡ ಈಗಿನ ಸರಣಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಈ ಮಟ್ಟದಲ್ಲಿ ದಾಖಲಾಗಿರುವುದು ಇದೇ ಮೊದಲು. ಹಿಂದಿನ ಹಣದುಬ್ಬರ ಸರಣಿಯನ್ನು ಕೂಡ ಪರಿಗಣಿಸಿ ಹೇಳುವುದಾದಲ್ಲಿ, ಏಪ್ರಿಲ್‌ನಲ್ಲಿ ದಾಖಲಾಗಿರುವ ಹಣದುಬ್ಬರವು ಮೂವತ್ತು ವರ್ಷಗಳ ಗರಿಷ್ಠ. 1991ರ ಆಗಸ್ಟ್‌ನಲ್ಲಿ ಈ ವರ್ಷದ ಏಪ್ರಿಲ್‌ಗಿಂತ ಹೆಚ್ಚಿನ (ಶೇ 16.06ರಷ್ಟು) ಸಗಟು ಹಣದುಬ್ಬರ ದಾಖಲಾಗಿತ್ತು.

ಸಗಟು ಹಣದುಬ್ಬರ ದರದ ಈ ಏರಿಕೆಯು ಆರ್‌ಬಿಐ ಮುಂದಿನ ತಿಂಗಳು ರೆ‍ಪೊ ದರವನ್ನು ಮತ್ತೆ ಹೆಚ್ಚಿಸುವ ಸಾಧ್ಯತೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಸಗಟು ಹಣದುಬ್ಬರ ಪ್ರಮಾಣವು ಸತತ 13 ತಿಂಗಳುಗಳಿಂದ ಎರಡಂಕಿ ಮಟ್ಟದಲ್ಲಿ ಉಳಿದಿದೆ. ಸಗಟು ಹಣದುಬ್ಬರವು1991ರ ಆಗಸ್ಟ್‌ನಲ್ಲಿ ಶೇ 16.06ರಷ್ಟು ದಾಖಲಾಗಿತ್ತು. ಅದಾದ ನಂತರದ ಗರಿಷ್ಠ ಪ್ರಮಾಣ ಏಪ್ರಿಲ್‌ನಲ್ಲಿ ದಾಖಲಾಗಿದೆ.

ADVERTISEMENT

ಆಹಾರ, ಇಂಧನ ಮತ್ತು ತಯಾರಿಕಾ ವಲಯದಲ್ಲಿ ಹಣದುಬ್ಬರ ಪ್ರಮಾಣವು ಹೆಚ್ಚಾಗಿದೆ. ‘ಏಪ್ರಿಲ್‌ನಲ್ಲಿ ತೀವ್ರ ಪ್ರಮಾಣದ ಹಣದುಬ್ಬರಕ್ಕೆ ಖನಿಜ ತೈಲ, ಮೂಲ ಲೋಹ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ವಸ್ತುಗಳು, ಆಹಾರೇತರ ವಸ್ತುಗಳು, ಆಹಾರ ಉತ್ಪನ್ನಗಳು, ರಾಸಾಯನಿಕಗಳು ಮತ್ತು ಅವುಗಳ ಉತ್ಪನ್ನಗಳ ಬೆಲೆಯಲ್ಲಿನ ಏರಿಕೆಯೇ ಮುಖ್ಯ ಕಾರಣ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಹೇಳಿದೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಸಗಟು ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡ 7.79ಕ್ಕೆ ತಲುಪಿದೆ ಎಂದು ಕೇಂದ್ರವು ಹಿಂದಿನ ವಾರ ತಿಳಿಸಿದೆ. ‘ಸಗಟು ಹಣದುಬ್ಬರ ಪ್ರಮಾಣವು ಎರಡಂಕಿ ಮಟ್ಟದಲ್ಲಿಯೇ ಉಳಿದಿರುವ ಕಾರಣ, ಆರ್‌ಬಿಐ ಜೂನ್‌ ತಿಂಗಳಲ್ಲಿ ರೆಪೊ ದರವನ್ನು ಹೆಚ್ಚಿಸುವ ಸಾಧ್ಯತೆಯು ಜಾಸ್ತಿಯಾಗಿದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

‘ಜೂನ್‌ ತಿಂಗಳಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 0.40ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಆಗಸ್ಟ್‌ನಲ್ಲಿ ಶೇ 0.35ರಷ್ಟು ಜಾಸ್ತಿ ಮಾಡಬಹುದು’ ಎಂದು ಅವರು ಅಂದಾಜಿಸಿದ್ದಾರೆ.

ಆರ್‌ಬಿಐ ಈ ತಿಂಗಳ ಆರಂಭದಲ್ಲಿ ರೆಪೊ ದರವನ್ನು ಶೇ 0.40ರಷ್ಟು ಹೆಚ್ಚಿಸಿದೆ. ನಗದು ಮೀಸಲು ಅನುಪಾತವನ್ನು ಶೇ 0.50ರಷ್ಟು ಏರಿಕೆ ಮಾಡಿದೆ.

‘ಹಣದುಬ್ಬರದ ಮೂಲ ಇರುವುದು ಜಾಗತಿಕ ‍ಪೂರೈಕೆ ವ್ಯವಸ್ಥೆಯಲ್ಲಿ ಉಂಟಾಗಿರುವ ಅಡಚಣೆಯಲ್ಲಿ. ದೇಶಿ ಮಾರುಕಟ್ಟೆಯಲ್ಲಿನ ಭಾರಿ ಬೇಡಿಕೆಯಿಂದ ಹಣದುಬ್ಬರ ಸೃಷ್ಟಿಯಾಗಿಲ್ಲ. ಹಣದ ಹರಿವನ್ನು ಹೆಚ್ಚು ಬಿಗಿಗೊಳಿಸಿದರೆ ಅರ್ಥ ವ್ಯವಸ್ಥೆಯಲ್ಲಿ ಈಗ ಕಂಡುಬಂದಿರುವ ಚೇತರಿಕೆಯ ಮೇಲೆ ಪೆಟ್ಟು ಬೀಳುತ್ತದೆ. ಆದರೆ, ಹಣದುಬ್ಬರದ ಮೇಲೆ ಹಚ್ಚಿನ ಪರಿಣಾಮ ಆಗಲಿಕ್ಕಿಲ್ಲ’ ಎಂದೂ ನಾಯರ್ ಹೇಳಿದ್ದಾರೆ.

ಭಾರತೀಯ ಸ್ಟೇಟ್ ಬ್ಯಾಂಕ್ ನಡೆಸಿರುವ ಅಧ್ಯಯನದ ಪ್ರಕಾರ ಹಣದುಬ್ಬರ ಹೆಚ್ಚಳಕ್ಕೆ ಉಕ್ರೇನ್–ರಷ್ಯಾ ನಡುವಿನ ಯುದ್ಧವು ಶೇ 59ರಷ್ಟು ಕೊಡುಗೆ ನೀಡಿದೆ.

ಹಣದುಬ್ಬರ ಎಷ್ಟು (%)

ತರಕಾರಿ;23.24

ಆಲೂಗಡ್ಡೆ;19.84

ಹಣ್ಣುಗಳು;10.89

ಗೋಧಿ;10.70

ತಯಾರಿಸಿದ ಉತ್ಪನ್ನಗಳು;10.85

ಎಣ್ಣೆಬೀಜಗಳು;16.10

ಇಂಧನ, ವಿದ್ಯುತ್;38.66

ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ;69.07

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.