ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರ (ಡಬ್ಲ್ಯುಪಿಐ) ಪ್ರಮಾಣವು ದೇಶದಲ್ಲಿ ಮೇ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆಯ ಶೇಕಡ 12.94ಕ್ಕೆ ತಲುಪಿದೆ. ಕಚ್ಚಾ ತೈಲ ಹಾಗೂ ತಯಾರಿಸಿದ ಉತ್ಪನ್ನಗಳ ಬೆಲೆ ಹೆಚ್ಚುತ್ತಿರುವುದು ಸಗಟು ಹಣದುಬ್ಬರದ ಏರಿಕೆ ಕಾರಣ.
ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ಡಬ್ಲ್ಯುಪಿಐ ಹಣದುಬ್ಬರ ಪ್ರಮಾಣವು ಶೇ(–) 3.37ರಷ್ಟು ಇತ್ತು. ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಪ್ರಮಾಣವು ಐದು ತಿಂಗಳುಗಳಿಂದ ನಿರಂತರವಾಗಿ ಏರಿಕೆಯ ಹಾದಿಯಲ್ಲಿ ಇದೆ. ಏಪ್ರಿಲ್ ತಿಂಗಳಲ್ಲಿ ಇದು ಎರಡಂಕಿಯ ಪ್ರಮಾಣವನ್ನು (ಶೇ 10.49) ತಲುಪಿತ್ತು.
‘ಹಿಂದಿನ ವರ್ಷದ ಇದೇ ತಿಂಗಳಿನಲ್ಲಿ ಡಬ್ಲ್ಯುಪಿಐ ಹಣದುಬ್ಬರ ಪ್ರಮಾಣವು ಕಡಿಮೆ ಇತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ಹಣದುಬ್ಬರ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಮಾತ್ರವೇ ಅಲ್ಲದೆ ಹಿಂದಿನ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ ತಯಾರಿಸಿದ ಉತ್ಪನ್ನಗಳ ಬೆಲೆಯಲ್ಲಿಯೂ ಹೆಚ್ಚಳ ಆಗಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
ಪೆಟ್ರೋಲ್, ಎಲ್‌ಪಿಜಿ ಮತ್ತು ಹೈಸ್ಪೀಡ್ ಡೀಸೆಲ್ಅನ್ನು ಒಳಗೊಂಡಿರುವ ಇಂಧನ ವಿಭಾಗದಲ್ಲಿನ ಡಬ್ಲ್ಯುಪಿಐ ಹಣದುಬ್ಬರ ಪ್ರಮಾಣವು ಮೇನಲ್ಲಿ ಶೇ 37.61ಕ್ಕೆ ತಲುಪಿದೆ. ಇದು ಏಪ್ರಿಲ್ ತಿಂಗಳಿನಲ್ಲಿ ಶೇ 20.94ರಷ್ಟು ಇತ್ತು. ತಯಾರಿಸಿದ ಉತ್ಪನ್ನಗಳ ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಶೇ 9.01ರಷ್ಟು ಇದ್ದಿದ್ದು ಮೇನಲ್ಲಿ ಶೇ 10.83ಕ್ಕೆ ತಲುಪಿದೆ.
ಈರುಳ್ಳಿ ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಶೇ (–)19.72ರಷ್ಟು ಇತ್ತು. ಅದು ಮೇನಲ್ಲಿ ಶೇ 23.24ಕ್ಕೆ ಏರಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಬದಲಾವಣೆ ಮಾಡದೆ ಇರುವ ತೀರ್ಮಾನವನ್ನುಈ ತಿಂಗಳ ಮೊದಲ ವಾರದಲ್ಲಿ ಕೈಗೊಂಡಿತ್ತು. ರೆಪೊ ದರದಲ್ಲಿ ಬದಲಾವಣೆ ತರುವ ಮುನ್ನ ಆರ್‌ಬಿಐ ಹಣದುಬ್ಬರ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.
2022ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 5.1ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ.
ಚಿಲ್ಲರೆ ಹಣದುಬ್ಬರವೂ ಹೆಚ್ಚಳ:
ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಕೂಡ ಮೇ ತಿಂಗಳಿನಲ್ಲಿ ಶೇ 6.3ಕ್ಕೆ ಏರಿಕೆ ಆಗಿದೆ. ಇದು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಮಟ್ಟಕ್ಕಿಂತಲೂ ತುಸು ಹೆಚ್ಚು. ಏಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 4.23ರಷ್ಟು ಇತ್ತು.
ಆಹಾರ ವಸ್ತುಗಳ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 1.96ರಷ್ಟು ಇದ್ದಿದ್ದು ಮೇ ತಿಂಗಳಲ್ಲಿ ಶೇ 5.01ಕ್ಕೆ ಏರಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ಕ್ಕೆ ಮಿತಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವು ಆರ್‌ಬಿಐಗೆ ಗುರಿ ನಿಗದಿ ಮಾಡಿದೆ. ಶೇ 4ಕ್ಕಿಂತ 2 ಅಂಶ ಹೆಚ್ಚು ಅಥವಾ 2 ಅಂಶ ಕಡಿಮೆ ಆಗಲು ಅವಕಾಶ ಇದೆ. ಆದರೆ, ಮೇ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ರ ಗಡಿಯನ್ನೂ ದಾಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.