ADVERTISEMENT

ಹೆಚ್ಚಳ ಕಂಡ ಸಗಟು ಹಣದುಬ್ಬರ

ಪಿಟಿಐ
Published 15 ಫೆಬ್ರುವರಿ 2021, 13:09 IST
Last Updated 15 ಫೆಬ್ರುವರಿ 2021, 13:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಗಟು ಹಣದುಬ್ಬರ ದರವು ಜನವರಿ ತಿಂಗಳಿನಲ್ಲಿ ಶೇಕಡ 2.03ಕ್ಕೆ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಆಹಾರೇತರ ತಯಾರಿಕಾ ಉತ್ಪನ್ನಗಳ ಬೆಲೆಯಲ್ಲಿ ಆದ ಹೆಚ್ಚಳ. ಮುಂದಿನ ಕೆಲವು ತಿಂಗಳುಗಳಲ್ಲಿ ಬೆಲೆ ಹೆಚ್ಚಳದ ಪ್ರಮಾಣವು ಇನ್ನಷ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಸಗಟು ಹಣದುಬ್ಬರ ಪ್ರಮಾಣವು ಡಿಸೆಂಬರ್ ತಿಂಗಳಲ್ಲಿ ಶೇ 1.22ರಷ್ಟಿತ್ತು. ಹಿಂದಿನ ವರ್ಷದ ಜನವರಿಯಲ್ಲಿ ಇದು ಶೇ 3.52ರ ಮಟ್ಟದಲ್ಲಿ ಇತ್ತು. ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ತಗ್ಗಿದೆ. ಆದರೆ, ಆಹಾರೇತರ ತಯಾರಿಕಾ ಉತ್ಪನ್ನಗಳು, ಇಂಧನ, ವಿದ್ಯುತ್, ನೈಸರ್ಗಿಕ ಅನಿಲದ ಬೆಲೆ ಹೆಚ್ಚಳವು ಸಗಟು ಹಣದುಬ್ಬರ ಹೆಚ್ಚಳವಾಗಲು ಕಾರಣವಾಗಿದೆ ಎಂಬುದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

ಈ ವರ್ಷದ ಜನವರಿಯಲ್ಲಿ ಆಹಾರೇತರ ವಸ್ತುಗಳ ಹಣದುಬ್ಬರವು 27 ತಿಂಗಳುಗಳ ಗರಿಷ್ಠ ಮಟ್ಟವಾದ ಶೇ 5.1ಕ್ಕೆ ಏರಿಕೆ ಕಂಡಿದೆ. ‘ಬೇಡಿಕೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಆಹಾರೇತರ ವಸ್ತುಗಳ ಹಣದುಬ್ಬರ ಪ್ರಮಾಣವು ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ 7ರಿಂದ ಶೇ 7.5ರ ಮಟ್ಟಕ್ಕೆ ಏರಿಕೆ ಕಾಣಲಿದೆ’ ಎಂದು ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಅಂದಾಜಿಸಿದೆ.

ADVERTISEMENT

ಈಚಿನ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳವಾಗಿದೆ, ಆಂತರಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಪರೋಕ್ಷ ತೆರಿಗೆ ಪ್ರಮಾಣ ತಗ್ಗಿಸಿಲ್ಲ. ಇವುಗಳ ಜೊತೆಯಲ್ಲೇ, ಕೈಗಾರಿಕೆಗಳ ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಿರುವ ಕಾರಣ ಸೇವೆಗಳು ಹಾಗೂ ಸರಕುಗಳ ಬೆಲೆ ಈಚಿನ ತಿಂಗಳುಗಳಲ್ಲಿ ಹೆಚ್ಚಾಗುವಂತೆ ಆಗಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇ 4.06ಕ್ಕೆ ತಗ್ಗಿದೆ ಎಂದು ಸರ್ಕಾರ ಹೇಳಿದೆ. ‘ಚಿಲ್ಲರೆ ಹಣದುಬ್ಬರ ಪ್ರಮಾಣವು ಇನ್ನೂ ಕಡಿಮೆ ಆಗಲಿಕ್ಕಿಲ್ಲ ಎಂಬುದು ನಮ್ಮ ಅಂದಾಜು. ಮುಂದಿನ ತಿಂಗಳುಗಳಲ್ಲಿ ಇದು ಮತ್ತೆ ಹೆಚ್ಚಳ ಕಾಣಲಿದೆ. ಹಾಗಾಗಿ, ರೆಪೊ ದರ ತಗ್ಗಿಸಲು ಆರ್‌ಬಿಐಗೆ ಹೆಚ್ಚಿನ ಅವಕಾಶಗಳು ಇದ್ದಂತೆ ಕಾಣುತ್ತಿಲ್ಲ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.