ADVERTISEMENT

ಸಗಟು ಹಣದುಬ್ಬರ 4 ತಿಂಗಳ ಗರಿಷ್ಠ

ಪಿಟಿಐ
Published 14 ನವೆಂಬರ್ 2024, 13:03 IST
Last Updated 14 ನವೆಂಬರ್ 2024, 13:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಕ್ಟೋಬರ್‌ ತಿಂಗಳಿನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 2.36ಕ್ಕೆ ದಾಖಲಾಗಿದೆ.

ತರಕಾರಿಗಳು ಮತ್ತು ತಯಾರಿಕಾ ಸರಕುಗಳ ಬೆಲೆ ಏರಿಕೆಯೇ ಇದಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರವು ಶೇ 1.84ರಷ್ಟಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ (–) 0.26ರಷ್ಟು ದಾಖಲಾಗಿತ್ತು.

ADVERTISEMENT

ಸೆಪ್ಟೆಂಬರ್‌ನಲ್ಲಿ ಶೇ 11.53ರಷ್ಟಿದ್ದ ಆಹಾರ ಪದಾರ್ಥಗಳ ಬೆಲೆಯು ಅಕ್ಟೋಬರ್‌ನಲ್ಲಿ ಶೇ 13.54ರಷ್ಟು ಹೆಚ್ಚಳವಾಗಿದೆ. ತರಕಾರಿಗಳ ಬೆಲೆಯು ಶೇ 48.73ರಿಂದ ಶೇ 63.04ರಷ್ಟಕ್ಕೆ ಮುಟ್ಟಿದೆ. ಟೊಮೆಟೊ ಮತ್ತು ಈರುಳ್ಳಿ ಬೆಲೆಯು ಕ್ರಮವಾಗಿ ಶೇ 78.73ರಷ್ಟು ಹಾಗೂ ಶೇ 39.25ರಷ್ಟು ಏರಿಕೆಯಾಗಿದೆ ಎಂದು ವಿವರಿಸಿದೆ.

ತೈಲ ಮತ್ತು ಇಂಧನ ಬೆಲೆಯು ಶೇ 5.79ರಷ್ಟು, ತಯಾರಿಕಾ ವಲಯದ ಸರಕುಗಳ ಬೆಲೆಯು ಶೇ 1.50ರಷ್ಟು ಹೆಚ್ಚಳವಾಗಿದೆ.

‘ಆಹಾರ ಪದಾರ್ಥಗಳು, ಆಹಾರ ಸರಕುಗಳ ತಯಾರಿಕೆ, ಯಂತ್ರ ಹಾಗೂ ಉಪಕರಣಗಳು, ಮೋಟರ್‌ ವಾಹನಗಳ ತಯಾರಿಕೆ ವೆಚ್ಚದಲ್ಲಿನ ಏರಿಕೆಯೇ  ಹಣದುಬ್ಬರವು ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಸಚಿವಾಲಯ ಹೇಳಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.