ADVERTISEMENT

ಸಗಟು ಹಣದುಬ್ಬರ 16 ತಿಂಗಳ ಗರಿಷ್ಠ

ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಏರಿಕೆ: ಕೇಂದ್ರ

ಪಿಟಿಐ
Published 15 ಜುಲೈ 2024, 14:47 IST
Last Updated 15 ಜುಲೈ 2024, 14:47 IST
vegetables
vegetables   

ನವದೆಹಲಿ: ದೇಶದಲ್ಲಿ ಸಗಟು ಹಣದುಬ್ಬರ ಜೂನ್‌ ತಿಂಗಳಲ್ಲಿ ಶೇ 3.36ಕ್ಕೆ ಏರಿಕೆಯಾಗಿದ್ದು, 16 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ಆಹಾರ ಪದಾರ್ಥಗಳು ಮತ್ತು ತಯಾರಿಸಿದ ವಸ್ತುಗಳ ದರ ಏರಿಕೆಯಿಂದ ಹಣದುಬ್ಬರ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಸತತ ನಾಲ್ಕನೇ ತಿಂಗಳೂ ಏರಿಕೆಯ ಹಾದಿಯಲ್ಲಿದೆ. ಮೇ ತಿಂಗಳಲ್ಲಿ ಶೇ 2.61ರಷ್ಟು ದಾಖಲಾಗಿತ್ತು. 2023ರ ಜೂನ್‌ ತಿಂಗಳಲ್ಲಿ (–)ಶೇ 4.18ರಷ್ಟಿತ್ತು. ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಗರಿಷ್ಠ ಶೇ 3.85ಕ್ಕೆ ಮುಟ್ಟಿತ್ತು.

ADVERTISEMENT

ಆಹಾರ ಪದಾರ್ಥಗಳು, ತಯಾರಿಕಾ ಸರಕುಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಖನಿಜ ತೈಲ ಸೇರಿದಂತೆ ಇತರೆ ಬೆಲೆಗಳ ಏರಿಕೆಯಿಂದ ಹಣದುಬ್ಬರ ಜೂನ್‌ನಲ್ಲಿ ಹೆಚ್ಚಳವಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಆಹಾರ ಪದಾರ್ಥಗಳ ಹಣದುಬ್ಬರವು ಮೇ ತಿಂಗಳಲ್ಲಿ ಶೇ 9.82ರಷ್ಟಿತ್ತು. ಇದು ಜೂನ್‌ನಲ್ಲಿ ಶೇ 10.87ಕ್ಕೆ ಹೆಚ್ಚಳವಾಗಿದೆ. ಹಣದುಬ್ಬರವು ತರಕಾರಿಗಳಿಗೆ ಶೇ 32.42ರಿಂದ 38.76ಕ್ಕೆ ಏರಿಕೆಯಾಗಿದೆ; ಈರುಳ್ಳಿ ಶೇ 93.35, ಆಲೂಗೆಡ್ಡೆ ಶೇ 66.37, ಬೇಳೆಕಾಳು ಬೆಲೆಯಲ್ಲಿ ಶೇ 21.64ರಷ್ಟು ಏರಿಕೆಯಾಗಿದೆ. ಹಣ್ಣುಗಳು ಶೇ 10.14, ಧಾನ್ಯಗಳು ಶೇ 9.27, ಹಾಲು ಶೇ 3.37ರಷ್ಟಕ್ಕೆ ಹೆಚ್ಚಳವಾಗಿದೆ.

ಇಂಧನ, ವಿದ್ಯುತ್‌ ಬಿಟ್ಟು ಉಳಿದಂತೆ ಎಲ್ಲ ದರಗಳ ಏರಿಕೆಯಿಂದ ಸಗಟು ಹಣದುಬ್ಬರ ಜೂನ್‌ ತಿಂಗಳಲ್ಲಿ ಏರಿಕೆಯಾಗಿದೆ. ಜುಲೈನಲ್ಲಿ ಸರಕುಗಳ ಬೆಲೆಯು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ. 

ಇಂಧನ ಮತ್ತು ವಿದ್ಯುತ್‌ನ ಹಣದುಬ್ಬರವು ಶೇ 1.35ರಿಂದ ಶೇ 1.03ಕ್ಕೆ ಇಳಿದಿದೆ. ಆದರೆ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಹಣದುಬ್ಬರ ದರವು ಶೇ 12.55ಕ್ಕೆ ಏರಿಕೆಯಾಗಿದೆ. ತಯಾರಿಕಾ ಹಣದುಬ್ಬರವು ಶೇ 0.78 ರಿಂದ ಶೇ 1.43ಕ್ಕೆ ಹೆಚ್ಚಳವಾಗಿದೆ.

ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ ಶೇ 5.1ರಷ್ಟು ದಾಖಲಾಗಿತ್ತು. ಇದು ನಾಲ್ಕು ತಿಂಗಳ ಗರಿಷ್ಠವಾಗಿತ್ತು ಎಂದು ಕಳೆದ ವಾರ ಕೇಂದ್ರ ಸರ್ಕಾರ ತಿಳಿಸಿತ್ತು.

ಸಗಟು ಹಣದುಬ್ಬರ (ಶೇಕಡಾವಾರು)

2023

ಜೂನ್‌;–4.18

ಜುಲೈ;–1.23

ಆಗಸ್ಟ್‌;–0.46

ಸೆಪ್ಟೆಂಬರ್;–0.07

ಅಕ್ಟೋಬರ್;–0.26

ನವೆಂಬರ್‌;0.26

ಡಿಸೆಂಬರ್‌;0.73

2024

ಜನವರಿ;0.33

ಫೆಬ್ರುವರಿ;0.20

ಮಾರ್ಚ್‌;0.26

ಏಪ್ರಿಲ್‌;1.19

ಮೇ;2.61

ಜೂನ್‌;3.36

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.