ಮುಂಬೈ: ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಾಗುತ್ತಿದ್ದರೂ ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುತ್ತಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿ, ರೆಪೊ ದರಕ್ಕೆ ಅನುಗುಣವಾಗಿ ಬಡ್ಡಿ ದರ ಏರಿಳಿತ ಆಗುವ ಅವಧಿ ಠೇವಣಿ ಯೋಜನೆಯನ್ನುಯೆಸ್ ಬ್ಯಾಂಕ್ ರೂಪಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ನಿಯಂತ್ರಿಸಲು ರೆಪೊ ದರವನ್ನು ಎರಡು ಹಂತಗಳಲ್ಲಿ ಒಟ್ಟು ಶೇಕಡ 0.90ರಷ್ಟು ಹೆಚ್ಚಿಸಿದೆ. ರೆಪೊ ದರವು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಸಾಲದ ಮೇಲಿನ ಬಡ್ಡಿ ದರವನ್ನು ರೆಪೊ ದರ ಹೆಚ್ಚಳವಾದ ತಕ್ಷಣ ಏರಿಕೆ ಮಾಡುವ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಅಷ್ಟು ತ್ವರಿತವಾಗಿ ಜಾಸ್ತಿ ಮಾಡುವುದಿಲ್ಲ ಎಂಬ ಆರೋಪಗಳು ಇವೆ.
ಚಾಲ್ತಿಯಲ್ಲಿರುವ ರೆಪೊ ದರಕ್ಕೆ ಅನುಗುಣವಾಗಿ ಬಡ್ಡಿ ನಿಗದಿ ಆಗುವ ನಿಶ್ಚಿತ ಠೇವಣಿಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ ಎಂದು ಯೆಸ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ. ಈ ಸೌಲಭ್ಯ ಹೊಂದಿರುವ ಠೇವಣಿಗಳನ್ನು ಒಂದು ವರ್ಷದಿಂದ ಮೂರು ವರ್ಷದವರೆಗಿನ ಅವಧಿಗೆ ಇರಿಸಬಹುದು.
‘ರೆಪೊ ದರ ಬದಲಾವಣೆ ಆದಂತೆಲ್ಲ ಈ ಠೇವಣಿಗೆ ನೀಡುವ ಬಡ್ಡಿ ದರ ತಾನಾಗಿಯೇ ಬದಲಾಗುತ್ತದೆ’ ಎಂದು ಯೆಸ್ ಬ್ಯಾಂಕ್ ಸಿಇಒ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.