ADVERTISEMENT

ಯೆಸ್‌ ಬ್ಯಾಂಕ್‌ಗೆ ₹452 ಕೋಟಿ ಲಾಭ

ಪಿಟಿಐ
Published 10 ಮೇ 2024, 17:16 IST
Last Updated 10 ಮೇ 2024, 17:16 IST
<div class="paragraphs"><p>ಯೆಸ್‌ ಬ್ಯಾಂಕ್‌</p></div>

ಯೆಸ್‌ ಬ್ಯಾಂಕ್‌

   

ಮುಂಬೈ: ದೇಶದ ಆರನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಯೆಸ್‌ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹452 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ನೇ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹202 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಎರಡೂವರೆ ಪಟ್ಟು ಹೆಚ್ಚಳವಾಗಿದೆ. ಬಡ್ಡಿ ವರಮಾನದಲ್ಲಿ ಶೇ 2.3ರಷ್ಟು ಹೆಚ್ಚಳವಾಗಿದ್ದು, ₹2,153 ಕೋಟಿ ಗಳಿಸಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ತಿಳಿಸಿದೆ.

ADVERTISEMENT

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ಬ್ಯಾಂಕ್‌ ಶೇ 74ರಷ್ಟು ಲಾಭ ಗಳಿಸಿದ್ದು, ₹1,251 ಕೋಟಿ ಆಗಿದೆ. ಎನ್‌ಪಿಎಯಲ್ಲಿ ಸುಧಾರಣೆಯಾಗಿದ್ದು, ಶೇ 2.2ರಿಂದ ಶೇ 1.7ಕ್ಕೆ ಇಳಿದಿದೆ ಎಂದು ತಿಳಿಸಿದೆ.

ಬ್ಯಾಂಕ್‌ನ ಒಟ್ಟು ಠೇವಣಿಗಳ ಮೊತ್ತವು ₹2.66 ಲಕ್ಷ ಕೋಟಿಗೆ ಏರಿಕೆಯಾಗಿದೆ. ಚಾಲ್ತಿ ಮತ್ತು ಉಳಿತಾಯ ಖಾತೆ ಠೇವಣಿಗಳ ಸಿಎಎಸ್‌ಎ ಅನುಪಾತವು ಶೇ 30.9ರಷ್ಟಿದೆ. ಇದು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 29.7ರಷ್ಟಿತ್ತು ಎಂದು ಹೇಳಿದೆ.

‌ಬ್ಯಾಂಕ್‌ನ ಠೇವಣಿಗಳ ದರವು ಶೇ 22.5ರಷ್ಟಿದೆ. ಸಾಲ ನೀಡಿಕೆಯಲ್ಲೂ ಏರಿಕೆಯಾಗಿದೆ. ಬ್ಯಾಂಕ್‌ ನೀಡಿರುವ ಸಾಲದ ಮೊತ್ತವು ₹2.27 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಹೇಳಿದೆ.

ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಒತ್ತು ನೀಡಲಾಗಿದೆ. ಡಿಜಿಟಲ್ ಸಾಮರ್ಥ್ಯ ಹೆಚ್ಚಿಸುವ ಮೂಲಕ ಬ್ಯಾಂಕ್‌ನ ಆಂತರಿಕ ದಕ್ಷತೆಯನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದೆ.  

‘ಪೇಟಿಎಂ ಜೊತೆಗೆ ಇತ್ತೀಚೆಗೆ ಪಾಲುದಾರಿಕೆ ಹೊಂದಲಾಗಿದೆ. ಇದರಿಂದ ಮಾಸಿಕ ಯುಪಿಐ ‍ಪಾವತಿಯು 3.80 ಕೋಟಿಯಿಂದ 5 ಕೋಟಿಗೆ ಮುಟ್ಟಿದೆ. ಬ್ಯಾಂಕ್‌ ತಂತ್ರಜ್ಞಾನಕ್ಕೆ ₹11 ಸಾವಿರ ಕೋಟಿಗೂ ಹೆಚ್ಚು ವ್ಯಯಿಸುತ್ತದೆ. ಇದು ಮುಂದುವರಿಯಲಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

‘ಸದ್ಯ ದೇಶದಲ್ಲಿ ಬ್ಯಾಂಕ್‌ 1,234 ಶಾಖೆಗಳನ್ನು ಹೊಂದಿದೆ. ಪ್ರಸಕ್ತ ವರ್ಷದ ಜೂನ್‌ ಅಂತ್ಯದೊಳಗೆ 30ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದ್ದಾರೆ. 

‘2024–25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನ ಸಾಲ ನೀಡಿಕೆ ಪ್ರಮಾಣವನ್ನು ಶೇ 17ರಷ್ಟಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಠೇವಣಿಗಳ ಮೊತ್ತವನ್ನು ಶೇ 18.5ರಷ್ಟಕ್ಕೆ ಹೆಚ್ಚಿಸಲು ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.