ಮುಂಬೈ: ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್‌ನ (ಜೆಡ್‌ಇಇಎಲ್) ಪ್ರವರ್ತಕ ಪುನಿತ್ ಗೋಯೆಂಕಾ ಅವರ ವಿರುದ್ಧದ ಆದೇಶವನ್ನು ಷೇರುಪೇಟೆ ಮೇಲ್ಮನವಿ ನ್ಯಾಯಮಂಡಳಿಯು (ಎಸ್‌ಎಟಿ) ಸೋಮವಾರ ರದ್ದುಪಡಿಸಿದೆ.
ಗೋಯೆಂಕಾ ಅವರು ಕಂಪನಿಯಲ್ಲಿ ಅಥವಾ ಯಾವುದೇ ಸಮೂಹ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆ ಹೊಂದುವಂತೆ ಇಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಆಗಸ್ಟ್ 14ರಂದು ಆದೇಶ ನೀಡಿತ್ತು. ಜೀ ಮತ್ತು ಸೋನಿ ವಿಲೀನಗೊಂಡ ಬಳಿಕ ರೂಪಗೊಳ್ಳಲಿರುವ ಕಂಪನಿಯಲ್ಲಿಯೂ ಅವರು ಯಾವುದೇ ಉನ್ನತ ಸ್ಥಾನ ಹೊಂದುವಂತೆ ಇಲ್ಲ ಎಂದು ಸೆಬಿ ಆದೇಶದಲ್ಲಿ ತಿಳಿಸಿತ್ತು.
ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ. ಹೀಗಾಗಿ ಸೆಬಿ ನೀಡಿರುವ ಆದೇಶವು ನಿಷ್ಠುರವಾಗಿದ್ದು ಸಮರ್ಥಿಸಲಾಗದು ಎಂದು ಹೇಳುವ ಮೂಲಕ ಆದೇಶವನ್ನು ಎಸ್‌ಎಟಿ ರದ್ದುಪಡಿಸಿದೆ. ಸೆಬಿಯ ತನಿಖೆಗೆ ಸಹಕರಿಸುವಂತೆಯೂ ಗೋಯೆಂಕಾ ಅವರಿಗೆ ನಿರ್ದೇಶನ ನೀಡಿದೆ. ತನಿಖೆಯ ವೇಳೆ ಅವರ ವಿರುದ್ಧ ಯಾವುದೇ ಸಾಕ್ಷ್ಯ ದೊರೆತಲ್ಲಿ ಕಾನೂನಿನ ರಿತ್ಯಾ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.
ಜೆಡ್‌ಇಇಎಲ್‌ನ ಅಧ್ಯಕ್ಷ ಸುಭಾಷ್ ಚಂದ್ರ ಮತ್ತು ಪವರ್ತಕ ಗೋಯೆಂಕಾ ಅವರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಕಂಪನಿಯ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಸೆಬಿ ತನ್ನ ಆದೇಶದಲ್ಲಿ ತಿಳಿಸಿತ್ತು.
ಜೆಡ್‌ಇಇಎಲ್‌ನ ಷೇರುದಾರರು ಗೋಯೆಂಕಾ ಅವರಲ್ಲಿ ವಿಶ್ವಾಸ ಹೊಂದಿದ್ದು, ವಿಲೀನದ ನಂತರವೂ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಮುಂದುವರಿಯಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದನ್ನೂ ಎಸ್ಎಟಿ ಪರಿಗಣಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.