ADVERTISEMENT

ಎಸ್ಸಾರ್‌ ಸಮೂಹದ ಸಹ–ಸಂಸ್ಥಾಪಕ ಶಶಿ ರುಯಿಯಾ ನಿಧನ

ಪಿಟಿಐ
Published 26 ನವೆಂಬರ್ 2024, 6:44 IST
Last Updated 26 ನವೆಂಬರ್ 2024, 6:44 IST
<div class="paragraphs"><p>ಶಶಿ ರುಯಿಯಾ</p></div>

ಶಶಿ ರುಯಿಯಾ

   

ಚಿತ್ರ ಕೃಪೆ: ಎಕ್ಸ್‌ @Essar

ನವದೆಹಲಿ: ಎಸ್ಸಾರ್‌ ಸಮೂಹದ ಸಹ–ಸಂಸ್ಥಾಪಕ ಶಶಿ ರುಯಿಯಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು (ಮಂಗಳವಾರ) ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ADVERTISEMENT

ಸೋಮವಾರ ರಾತ್ರಿ 11.55ರ ಸುಮಾರಿಗೆ ಅವರು ಮುಂಬೈನಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಅವರು ಒಂದು ತಿಂಗಳ ಹಿಂದಷ್ಟೇ ದೇಶಕ್ಕೆ ವಾಪಸ್ಸಾಗಿದ್ದರು.

ರುಯಿಯಾ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 1 ಗಂಟೆಯಿಂದ 3ರವರೆಗೆ ಅವರ ನಿವಾಸದಲ್ಲಿ ದರ್ಶನಕ್ಕೆ ಇರಿಸಲಾಗುವುದು. ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

1965ರಲ್ಲಿ ಉದ್ಯಮಿ ಶಶಿ ರುಯಿಯಾ ಅವರು ತಂದೆ ನಂದ್‌ ಕಿಶೋರ್‌ ರುಯಿಯಾ ಅವರ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1969ರಲ್ಲಿ ತಮ್ಮ ಸಹೋದರ ರವಿ ಅವರೊಂದಿಗೆ ಚೆನ್ನೈನ ಬಂದರಿನಲ್ಲಿ ಹೊರ ಬ್ರೇಕ್‌ವಾಟರ್‌ ನಿರ್ಮಿಸುವ ಮೂಲಕ ಎಸ್ಸಾರ್‌ಗೆ ಅಡಿಪಾಯ ಹಾಕಿದರು. ನಂತರದ ದಿನಗಳಲ್ಲಿ ಉಕ್ಕು, ತೈಲ ಸಂಸ್ಕರಣೆ, ಪರಿಶೋಧನೆ ಮತ್ತು ಉತ್ಪಾದನೆ, ಟೆಲಿಕಾಂ, ವಿದ್ಯುತ್‌ ಮತ್ತು ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ಉದ್ಯಮ ವಿಸ್ತರಿಸಿತು.

ಉದ್ಯಮಿ ಶಶಿ ರುಯಿಯಾ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರುಯಿಯಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಶಶಿ ರುಯಿಯಾ ಅವರು ಉದ್ಯಮ ಜಗತ್ತಿನಲ್ಲಿ ಮೇರು ವ್ಯಕ್ತಿತ್ವದ ಹೊಂದಿದವರಾಗಿದ್ದರು. ಅವರ ದೂರದೃಷ್ಟಿಯ ನಾಯಕತ್ವ ಮತ್ತು ಅಚಲವಾದ ಬದ್ಧತೆಯು ದೇಶದ ವ್ಯಾಪಾರದ ದೃಶ್ಯವನ್ನು ಪರಿವರ್ತಿಸಿದೆ. ನಾವು ನಮ್ಮ ದೇಶವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಯಾವಾಗಲೂ ಚರ್ಚಿಸುತ್ತಿದ್ದರು. ಅವರ ನಿಧನವು ದುಃಖಕರವಾಗಿದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.