ಅದು ಸಣ್ಣ ಉದ್ಯಮವಿರಬಹುದು, ದೊಡ್ಡ ಕಂಪನಿ ಇರಬಹುದು ಅಥವಾ ಒಂದು ಸರ್ಕಾರವೇ ಇರಬಹುದು; ಕೆಲಸ ಸಾಗಬೇಕು ಅಂದರೆ ಹಣದ ಅಗತ್ಯ ಇದ್ದೇ ಇರುತ್ತದೆ. ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲ ಮಾಡುವುದು ಒಂದು ಮಾರ್ಗ. ಸಾಲ ಪಡೆಯಲು ಹಲವು ಮಾರ್ಗಗಳಿದ್ದರೂ ಅವುಗಳಲ್ಲಿ ಬಾಂಡ್ ಮತ್ತು ಡಿಬೆಂಚರ್‌ಗಳು ಪ್ರಮುಖ ಸಾಧನಗಳು. ಬಹಳಷ್ಟು ಹೂಡಿಕೆದಾರರು ಬಾಂಡ್ ಮತ್ತು ಡಿಬೆಂಚರ್‌ಗಳಲ್ಲಿನ ಹೂಡಿಕೆಯಲ್ಲಿ ಹೆಚ್ಚು ಅಪಾಯ (ರಿಸ್ಕ್) ಇಲ್ಲ ಎಂದು ಭಾವಿಸಿ ಹೂಡಿಕೆ ಮಾಡಿದ ನಂತರ ಪರಿತಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಾಂಡ್ ಮತ್ತು ಡಿಬೆಂಚರ್ ಹೂಡಿಕೆ ಬಗ್ಗೆ ಅರಿವು ಹೆಚ್ಚಿಸುವ ವಿವರ ಇಲ್ಲಿದೆ.
ಏನಿದು ಬಾಂಡ್, ಡಿಬೆಂಚರ್?: ಬಾಂಡ್ ಅಥವಾ ಡಿಬೆಂಚರ್‌ಗಳು ಸರ್ಕಾರ ಅಥವಾ ಕಂಪನಿಗಳು ನೀಡುವ ಸಾಲಪತ್ರಗಳು (Debt Instruments). ಈ ಎರಡೂ ಮಾದರಿಗಳು ಬಂಡವಾಳ ಸಂಗ್ರಹಕ್ಕೆ ಇರುವ ಸಾಧನಗಳು. ಬಾಂಡ್‌ಗಳನ್ನು ಸಾಮಾನ್ಯವಾಗಿ ಸರ್ಕಾರ, ಸರ್ಕಾರದ ಸಂಸ್ಥೆಗಳು ನೀಡಿದರೆ ಡಿಬೆಂಚರ್‌ಗಳನ್ನು ದೊಡ್ಡ ಕಂಪನಿಗಳು ನೀಡುತ್ತವೆ. ಬಹುತೇಕ ಸಂದರ್ಭಗಳಲ್ಲಿ ಬಾಂಡ್ ಮತ್ತು ಡಿಬೆಂಚರ್ ಪದಗಳನ್ನು ಒಂದಕ್ಕೊಂದು ಪರ್ಯಾಯ ಎಂಬಂತೆ ಬಳಸಲಾಗುತ್ತದೆ. ಬಾಂಡ್ ಮತ್ತು ಡಿಬೆಂಚರ್‌ಗೆ ಒಂದಿಷ್ಟು ವ್ಯತ್ಯಾಸಗಳಿದ್ದರೂ ಅಷ್ಟಾಗಿ ಪ್ರತ್ಯೇಕಿಸಿ ನೋಡುವ ಅಗತ್ಯವಿಲ್ಲ. ಉದಾಹರಣೆಗೆ ‘ಆರ್’ ಎಂಬ ಕಂಪನಿಗೆ ಈಗ ಬಂಡವಾಳ ಅಗತ್ಯವಿದೆ ಎಂದು ಭಾವಿಸೋಣ. ಅದು ಶೇಕಡ 7, ಶೇ 8 ಅಥವಾ ಶೇ 9ರ ಬಡ್ಡಿ ದರದ ಡಿಬೆಂಚರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ ನಿಮಗೆ ಪೂರ್ವ ನಿಗದಿತ ಬಡ್ಡಿಯ ಲಾಭ ಸಿಗುತ್ತದೆ.
ಬಾಂಡ್/ಡಿಬೆಂಚರ್ ಮಾದರಿಗಳು: ಡಿಬೆಂಚರ್‌ಗಳಲ್ಲಿ ಎರಡು ಮಾದರಿಗಳಿವೆ. ಒಂದು, ಹೂಡಿಕೆ ಹಣಕ್ಕೆ ಖಾತರಿ ಇರುವ ಡಿಬೆಂಚರ್. ಮತ್ತೊಂದು, ಹೂಡಿಕೆ ಹಣಕ್ಕೆ ಖಾತರಿ ಇಲ್ಲದಿರುವ ಡಿಬೆಂಚರ್. ಖಾತರಿ ಇರುವ ಡಿಬೆಂಚರ್‌ನಲ್ಲಿ ಬಡ್ಡಿ ಲಾಭ ಕಡಿಮೆ ಇರುತ್ತದೆ. ಆದರೆ ಖಾತರಿ ಇಲ್ಲದಿರುವ ಡಿಬೆಂಚರ್‌ನಲ್ಲಿ ಬಡ್ಡಿ ಲಾಭ ಹೆಚ್ಚಿಗೆ ಇರುತ್ತದೆ. ಖಾತರಿ ಇರುವ ಡಿಬೆಂಚರ್‌ನಲ್ಲಿ ಕಂಪನಿ ದಿವಾಳಿಯಾದರೂ ನಿಮ್ಮ ಹೂಡಿಕೆ ಹಣ ಸಿಗುತ್ತದೆ. ಆದರೆ, ಕಂಪನಿ ದಿವಾಳಿಯಾದ ಬಳಿಕ ಅದರ ಆಸ್ತಿಗಳನ್ನೆಲ್ಲಾ ಮಾರಾಟ ಮಾಡಿ ನಂತರದಲ್ಲಿ ಹಣ ನೀಡುವ ಹೊತ್ತಿಗೆ ಸಾಕಷ್ಟು ಸಮಯ ಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ಹಣ ಹಂಚಿಕೆಯಲ್ಲಿ ವಿಳಂಬವಾಗಿರುವ ಬಹಳಷ್ಟು ಉದಾಹರಣೆಗಳು ಕಣ್ಣ ಮುಂದೆ ಇವೆ.
ಮಾರ್ಪಡಿಸಲಾಗದ ಡಿಬೆಂಚರ್‌ಗಳು (Non Convertible Debentures): ಹೂಡಿಕೆಯ ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಾಗದ ಡಿಬೆಂಚರ್‌ಗಳನ್ನು ಮಾರ್ಪಡಿಸಲಾಗದ ಡಿಬೆಂಚರ್‌ಗಳು ಎಂದು ಕರೆಯಬಹುದು. ಸಾಲ ಪಡೆದ ಕಂಪನಿ ಅಥವಾ ಸಾಲ ನೀಡಿದ ವ್ಯಕ್ತಿಯ ಇಚ್ಛೆಯ ಮೇರೆಗೆ ಇಲ್ಲಿ ಡಿಬೆಂಚರ್‌ಗಳನ್ನು ಷೇರು ಹೂಡಿಕೆಗಳಾಗಿ ಮಾರ್ಪಡಿಸಲು ಸಾಧ್ಯವಾಗುವುದಿಲ್ಲ. ನಿರ್ದಿಷ್ಟ ಬಡ್ಡಿ ಆದಾಯ ಬೇಕು ಎನ್ನುವವರಿಗೆ ಇದೊಂದು ಒಳ್ಳೆಯ ಆಯ್ಕೆ.
ಬಾಂಡ್/ಡಿಬೆಂಚರ್ ಹೂಡಿಕೆ ಬೇಕೇ?: ಡಿಬೆಂಚರ್‌ಗಳಲ್ಲಿ ಸಾಮಾನ್ಯವಾಗಿ ನಿಶ್ಚಿತ ಠೇವಣಿಗಳಲ್ಲಿ ಸಿಗುವ ಬಡ್ಡಿಗಿಂತ ಹೆಚ್ಚಿಗೆ ಲಾಭ ಸಿಗುತ್ತದೆ. ಉದಾಹರಣೆಗೆ ನಿಶ್ಚಿತ ಠೇವಣಿಗಳಲ್ಲಿ ಶೇ 6ರ ಬಡ್ಡಿ ಲಾಭ ಸಿಕ್ಕಿದರೆ ಡಿಬೆಂಚರ್‌ನಲ್ಲಿ ಶೇ 8ರಿಂದ ಶೇ 9ರಷ್ಟು ಬಡ್ಡಿ ಲಾಭ ಲಭಿಸುತ್ತದೆ. ಆದರೆ ಇಲ್ಲಿ ಕೊಂಚ ರಿಸ್ಕ್ ಇರುತ್ತದೆ. ಖಾತರಿ ಇರುವ ಡಿಬೆಂಚರ್‌ಗಳಲ್ಲಿ ರಿಸ್ಕ್ ಕಡಿಮೆ, ಖಾತರಿ ಇಲ್ಲದ ಡಿಬೆಂಚರ್‌ಗಳಲ್ಲಿ ರಿಸ್ಕ್ ಜಾಸ್ತಿ ಇರುತ್ತದೆ. ಇನ್ನು, ಡಿಬೆಂಚರ್‌ಗಳು ಷೇರು ಮಾರುಕಟ್ಟೆಗೆ ಸೇರ್ಪಡೆಯಾಗಿರುತ್ತವೆ. ಹಾಗಾಗಿ ನಗದೀಕರಣ ಕಷ್ಟವಿಲ್ಲ. ಮಾರಾಟ ಮಾಡಿದ ಮೂರು ದಿನಗಳಲ್ಲಿ ಹಣ ನಿಮಗೆ ಸಂದಾಯವಾಗುತ್ತದೆ. ಹೀಗಾಗಿ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸದ ನಂತರದಲ್ಲಷ್ಟೇ ಡಿಬೆಂಚರ್ ಹೂಡಿಕೆ ತೀರ್ಮಾನಕ್ಕೆ ಬರಬೇಕು.
ಮಾರಾಟದ ಒತ್ತಡಕ್ಕೆ ಸಿಲುಕಿದ ಸೂಚ್ಯಂಕ
ಷೇರುಪೇಟೆ ಸೂಚ್ಯಂಕಗಳು ಮಾರಾಟದ ಒತ್ತಡಕ್ಕೆ ಸಿಲುಕಿವೆ. ಬಾಂಡ್‌ಗಳ ಮೇಲಿನ ಗಳಿಕೆ ಹೆಚ್ಚಳ, ಹಣದುಬ್ಬರ ಪ್ರಮಾಣದಲ್ಲಿ ಏರಿಕೆ, ಕೋವಿಡ್ ಎರಡನೆಯ ಅಲೆಯ ಆತಂಕ ಸೇರಿ ಹಲವು ಅಂಶಗಳು ಮಾರುಕಟ್ಟೆಯನ್ನು ಮಂಕಾಗಿಸಿವೆ.
ಮಾರ್ಚ್ 19ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿವೆ. 49,858 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 1.83ರಷ್ಟು ಇಳಿಕೆ ಕಂಡಿದ್ದರೆ, 14,744 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.9ರಷ್ಟು ಕುಸಿತ ಕಂಡಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.4ರಷ್ಟು ಕುಸಿದಿದೆ. ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 2.6ರಷ್ಟು ಮತ್ತು ಶೇ 2ರಷ್ಟು ತಗ್ಗಿವೆ.
ವಾರದ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,893 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಹೂಡಿಕೆದಾರರು ₹ 3,037 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಮಾರ್ಚ್‌ನಲ್ಲಿ ಈವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 9,221.24 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ದೇಶಿಯ ಹೂಡಿಕೆದಾರರು ₹ 4,433.48 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 5.8ರಷ್ಟು, ಫಾರ್ಮಾ ವಲಯ ಶೇ 4.2ರಷ್ಟು ಮತ್ತು ಬ್ಯಾಂಕ್ ಸೂಚ್ಯಂಕ ಶೇ 3.7ರಷ್ಟು ಕುಸಿದಿವೆ. ಎಫ್ಎಂಸಿಜಿ ವಲಯ ಶೇ 2.9ರಷ್ಟು ಏರಿಕೆ ದಾಖಲಿಸಿದೆ.
ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಐಟಿಸಿ ಶೇ 9ರಷ್ಟು, ಹಿಂದುಸ್ಥಾನ್ ಯುನಿಲಿವರ್ ಶೇ 5ರಷ್ಟು, ಬ್ರಿಟಾನಿಯಾ ಶೇ 1ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 5ರಷ್ಟು, ಗ್ರಾಸಿಮ್ ಶೇ 2ರಷ್ಟು, ಟಾಟಾ ಸ್ಟೀಲ್ ಶೇ 2ರಷ್ಟು, ಹಿಂಡಾಲ್ಕೋ ಶೇ 2ರಷ್ಟು ಗಳಿಸಿವೆ. ಹೀರೊ ಮೋಟೊಕಾರ್ಪ್ ಶೇ 7ರಷ್ಟು, ಎಲ್‌ಆ್ಯಂಡ್‌ಟಿ ಶೇ 7ರಷ್ಟು, ಸನ್ ಫಾರ್ಮಾ ಶೇ 6ರಷ್ಟು, ಅದಾನಿ ಪೋರ್ಟ್ಸ್ ಶೇ 6ರಷ್ಟು, ಸಿಪ್ಲಾ ಶೇ 5ರಷ್ಟು, ಬಿಪಿಸಿಎಲ್ ಶೇ 5ರಷ್ಟು ಕುಸಿದಿವೆ.
ಐಪಿಒ: ಮಾರ್ಚ್ 24ರಿಂದ ಬಾರ್ಬಿಕ್ಯೂ ನೇಷನ್ ಐಪಿಒ ಮುಕ್ತವಾಗಲಿದೆ.
ಮುನ್ನೋಟ: ಅಮೆರಿಕದಲ್ಲಿ ಬಾಂಡ್‌ಗಳ ಮೇಲಿನ ಗಳಿಕೆ ಎತ್ತ ಸಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ. ತೈಲ ಬೆಲೆ ಇಳಿಕೆ ಕಾಣವುದೋ ಅಥವಾ ಮತ್ತೆ ಏರಿಕೆಯ ಹಾದಿ ತುಳಿಯುವುದೋ ನೋಡಬೇಕಿದೆ. ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ. ಮಾರ್ಚ್‌ನ ತ್ರೈಮಾಸಿಕ ಗಳಿಕೆಯು ಡಿಸೆಂಬರ್ ತ್ರೈಮಾಸಿಕಕ್ಕಿಂತ ಹಿನ್ನಡೆ ಕಾಣಬಹುದು ಎಂಬ ಅಂದಾಜು ಸಹ ಹೂಡಿಕೆದಾರರು ಅಳೆದು ತೂಗಿ ನಿರ್ಧಾರ ಕೈಗೊಳ್ಳುವಂತೆ ಮಾಡಿದೆ. ಸದ್ಯ ಅನಿಶ್ಚಿತ ವಾತಾವರಣ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.