ಷೇರು ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿರುವಾಗ ‘ಐಪಿಒ’ಗಳ (ಆರಂಭಿಕ ಸಾರ್ವಜನಿಕ ಹೂಡಿಕೆ) ಭರಾಟೆ ಶುರುವಾಗುತ್ತದೆ. 2023ರಲ್ಲಿ ಸುಮಾರು 60 ಕಂಪನಿಗಳು ಐಪಿಒ ನಡೆಸಿವೆ. ಈ ಪೈಕಿ ಕೆಲವು ಕಂಪನಿಗಳು ಭರ್ಜರಿ ಲಾಭ ತಂದುಕೊಟ್ಟಿದ್ದರೆ ಒಂದಷ್ಟು ಕಂಪನಿಗಳು ಹೂಡಿಕೆದಾರರಿಗೆ ನಷ್ಟದ ಹೊರೆಯನ್ನು ಹೊರಿಸಿವೆ.
ಅರಿತು ಒಳ್ಳೆಯ ಕಂಪನಿಗಳ ಮೇಲೆ ಐಪಿಒ ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆ ಹೆಚ್ಚು. ಲಾಭ ಸಿಗಬಹುದು ಎಂಬ ಅಂದಾಜಿನಲ್ಲಿ ಸಿಕ್ಕ ಸಿಕ್ಕ ಐಪಿಒಗಳಲ್ಲಿ ಹಣ ಹಾಕಿದರೆ ನಷ್ಟದ ಹೊರೆಯನ್ನೂ ಹೊರಬೇಕಾಗುತ್ತದೆ ಎನ್ನುವುದು ಮತ್ತೆ ಸಾಬೀತಾಗಿದೆ.
2024ರಲ್ಲೂ ಐಪಿಒಗಳು ಜರುಗಲಿವೆ. ಇದರಲ್ಲಿ ಹೂಡಿಕೆಗೂ ಮುನ್ನ ಯಾವೆಲ್ಲಾ ಅಂಶಗಳನ್ನು ಗಮನನಿಸಬೇಕು ಬನ್ನಿ ತಿಳಿಯೋಣ.
ಹಿನ್ನೋಟ: 2023ರಲ್ಲಿ ನಡೆದ ಐಪಿಒಗಳ ಮೂಲಕ 60 ಕಂಪನಿಗಳು ₹52,521 ಕೋಟಿ ಸಂಗ್ರಹಿಸಿವೆ. 2023ರ ಮೊದಲಾರ್ಧದಲ್ಲಿ 9 ಐಪಿಒಗಳು ನಡೆದರೆ ದ್ವಿತಿಯಾರ್ಧದಲ್ಲಿ 51 ಕಂಪನಿಗಳ ಐಪಿಒ ಜರುಗಿದೆ.
ಕಳೆದ ವರ್ಷದಲ್ಲಿ ಐಪಿಒ ಮೇಲಿನ ಗೀಳು ಎಷ್ಟರಮಟ್ಟಿಗೆ ಇತ್ತೆಂದರೆ ಒಟ್ಟಾರೆ ಐಪಿಒಗಳ ಬೇಡಿಕೆಯು 36.81 ಪಟ್ಟು ಹೆಚ್ಚಾಗಿತ್ತು. 2023ರಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಕ್ರಮವಾಗಿ ಶೇ 18 ಮತ್ತು ಶೇ 20ರಷ್ಟು ಲಾಭಾಂಶ ಕೊಟ್ಟಿದ್ದರೆ ಐಪಿಒಗಳು ಕೊಟ್ಟಿರುವ ಸರಾಸರಿ ಗಳಿಕೆ ಶೇ 57.34 ರಷ್ಟು. ಆದರೆ, ಬಿಡ್ ಮಾಡಿದ ತಕ್ಷಣ ಎಲ್ಲಾ ಐಪಿಒಗಳು ಸಿಗುವುದಿಲ್ಲ ಮತ್ತು ಸಿಕ್ಕಿದ ಐಪಿಒಗಳೆಲ್ಲವೂ ಲಾಭ ತಂದುಕೊಟ್ಟಿಲ್ಲ ಎನ್ನುವುದು ಗಮನದಲ್ಲಿ ಇರಲಿ.
‘ಐಪಿಒ’ ಅರಿತರೆ ಜಾಕ್‌ಪಾಟ್, ಆತುರಪಟ್ಟರೆ ನಷ್ಟ: ಪ್ರತಿ ಐಪಿಒ ಹೂಡಿಕೆಯೂ ಜಾಕ್‌ಪಾಟ್ ಎನ್ನುವ ಅಂದಾಜಿನಲ್ಲಿ ಬಹುತೇಕರು ಹೂಡಿಕೆ ಮಾಡುತ್ತಾರೆ. ಆದರೆ, ಎಲ್ಲ ಕಂಪನಿಗಳು ಲಾಭ ತಂದುಕೊಡುವುದಿಲ್ಲ. ಲಾಭದ ಅಂದಾಜಿನಲ್ಲಿ ಧುತ್ತೆಂದು ಐಪಿಒಗಳನ್ನು ಖರೀದಿಸಿದವರು ಕೈಸುಟ್ಟುಕೊಂಡಿರುವ ನಿದರ್ಶನಗಳೂ ಇವೆ.
ಷೇರುಪೇಟೆಗೆ ಸೇರ್ಪಡೆಯಾಗುವ ದಿನವೇ ಅನೇಕ ಐಪಿಒಗಳು ಕುಸಿತ ಕಂಡಿವೆ. ಉದಾಹರಣೆಗೆ ಲಿಸ್ಟಿಂಗ್ ದಿನವೇ ಪೇಟಿಎಂ (ಒನ್ 97 ಕಮ್ಯೂನಿಕೇಷನ್ಸ್) ಶೇ 27.5ರಷ್ಟು ಕುಸಿದಿದೆ. ಅಬ್ನಾಸ್ ಹೋಲ್ಡಿಂಗ್ಸ್ ಶೇ 19.98, ರೇನ್ ಬೋ ಚಿಲ್ಡ್ರನ್ ಮೆಡಿಕೇರ್ ಶೇ 16.96, ರೇಟ್ ಗೇನ್ ಟ್ರಾವೆಲ್ ಟೆಕ್ನಾಲಜೀಸ್ ಶೇ 19.88 ಮತ್ತು ಶ್ರೀರಾಮ್ ಪ್ರಾಪರ್ಟೀಸ್ ಶೇ 15.76ರಷ್ಟು ಇಳಿದಿದೆ.
ಷೇರುಪೇಟೆಗೆ ಸೇರ್ಪಡೆಯಾಗುವ ದಿನ (ಲಿಸ್ಟಿಂಗ್ ಡೇ) ನಷ್ಟದ ಹೊರೆ ಹೊರಿಸಿರುವ ಐಪಿಒಗಳು ಮಾತ್ರವಲ್ಲ ಭರ್ಜರಿ ಲಾಭ ತಂದುಕೊಟ್ಟಿರುವ ಕಂಪನಿಗಳೂ ಇವೆ. ಕಳೆದ ವರ್ಷ ಟಾಟಾ ಟೆಕ್ನಾಲಜೀಸ್ ಐಪಿಒ ಶೇ 162.85ರಷ್ಟು ಲಾಭ ಕೊಟ್ಟಿದೆ. ಐಡಿಯಾ ಫೋರ್ಜ್ ಟೆಕ್ನಾಲಜಿ ಶೇ 92.78, ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ 91.76, ಐಆರ್‌ಇಡಿಎ ಶೇ 87.47, ನೆಟ್ ವೆಬ್ ಟೆಕ್ನಾಲಜೀಸ್ ಇಂಡಿಯಾ ಶೇ 82.10ರಷ್ಟು ಗಳಿಕೆ ಕೊಟ್ಟಿದೆ. ಹಾಗಾಗಿ, ಅರಿತು ಹೂಡಿಕೆ ಮಾಡುವುದು ಇಲ್ಲಿ ಬಹಳ ಮುಖ್ಯ.
ಗ್ರೇ ಮಾರ್ಕೆಟ್ ಪ್ರೀಮಿಯಂ ನಂಬಿ ಹೂಡಿಕೆ ಮಾಡಬೇಡಿ: ಷೇರು ಮಾರುಕಟ್ಟೆಯಲ್ಲಿ ಸೇರ್ಪಡೆಯಾಗುವ ಮುನ್ನ ಐಪಿಒವೊಂದಕ್ಕೆ ನಿಗದಿಯಾಗಿರುವ ದರಕ್ಕಿಂತ ಹೂಡಿಕೆದಾರರು ಎಷ್ಟು ಹೆಚ್ಚುವರಿ ಹಣ ನೀಡಲು ಸಿದ್ಧರಿದ್ದಾರೆ ಎನ್ನುವುದನ್ನು ಗ್ರೇ ಮಾರ್ಕೆಟ್ ಪ್ರೀಮಿಯಂ ಎನ್ನಲಾಗುತ್ತದೆ.
ಗ್ರೇ ಮಾರ್ಕೆಟ್ ಪ್ರೀಮಿಯಂ ಆಧರಿಸಿ ಕಂಪನಿಯೊಂದರ ಐಪಿಒ, ಷೇರು ಮಾರುಕಟ್ಟೆಯಲ್ಲಿ ಯಾವ ದರಕ್ಕೆ ಲಿಸ್ಟ್ ಆಗಬಹುದು ಎಂಬುದನ್ನು ಅಂದಾಜು ಮಾಡಲಾಗುತ್ತದೆ.
ಉದಾಹರಣೆಗೆ ಐಪಿಒವೊಂದರ ದರ ₹100 ಇದೆ ಎಂದು ಭಾವಿಸಿ. ಗ್ರೇ ಮಾರ್ಕೆಟ್ ಪ್ರೀಮಿಯಂ ₹20 ಇದೆ ಎಂದುಕೊಳ್ಳಿ. ಹೀಗಿರುವಾಗ ಆ ನಿಗದಿತ ಐಪಿಒ, ಷೇರು ಮಾರುಕಟ್ಟೆಯಲ್ಲಿ ₹120ಕ್ಕೆ ಲಿಸ್ಟ್ ಆಗಲಿದೆ ಎಂದು ಭಾವಿಸಲಾಗುತ್ತದೆ. ಆದರೆ, ಈ ಲೆಕ್ಕಾಚಾರ ನಿಖರ ಇರುವುದಿಲ್ಲ. ಗ್ರೇ ಮಾರ್ಕೆಟ್ ಪ್ರೀಮಿಯಂ ಎನ್ನುವುದು ಸದಾ ಬದಲಾಗುತ್ತಿರುತ್ತದೆ. ಇದರಲ್ಲಿ ಕಾಣದ ಕೈಗಳ ಹಸ್ತಕ್ಷೇಪದ ಸಾಧ್ಯತೆಯೂ ಇರುವುದರಿಂದ ಗ್ರೇ ಮಾರ್ಕೆಟ್ ನಂಬಿ ಐಪಿಒ ಹೂಡಿಕೆ ಮಾಡುವುದು ಸರಿಯಲ್ಲ.
ಉದಾಹರಣೆ: ಎಲ್‌ಐಸಿ ಐಪಿಒ ವೇಳೆ ಕೆಲವೇ ದಿನಗಳಲ್ಲಿ ಗ್ರೇ ಮಾರ್ಕೆಟ್ ಪ್ರೀಮಿಯಂ ಶೇ 90ರಷ್ಟು ಕುಸಿದು ಹೋಯ್ತು.
ಲಿಸ್ಟಿಂಗ್ ಗಳಿಕೆಗೆ ಆಸೆಪಡಬೇಡಿ: ಐಪಿಒವೊಂದು ಷೇರು ಮಾರುಕಟ್ಟೆಗೆ ಸೇರ್ಪಡೆಗೊಳ್ಳುವ ದಿನ ಹೂಡಿಕೆ ಮೊತ್ತದ ಮೇಲೆ ಭರ್ಜರಿ ಲಾಭ ತಂದುಕೊಡುತ್ತದೆ ಎಂಬ ಅಂದಾಜಿನಲ್ಲಿ ಅನೇಕರು ಹೂಡಿಕೆ ಮಾಡುತ್ತಾರೆ. ಬೇಗ ಹಣ ಗಳಿಸುವ ಮಾರ್ಗ ಐಪಿಒ ಎಂದು ಭಾವಿಸುತ್ತಾರೆ. ಆದರೆ, ಇದು ಎಲ್ಲಾ ಸಮಯದಲ್ಲೂ ನಿಜವಾಗುವುದಿಲ್ಲ ಎಂಬ ಅರಿವಿರಲಿ.
ಅರಿತು ಹೂಡಿಕೆ ಮಾಡಿ
ಐಪಿಒಗಳಲ್ಲಿ ಹೂಡಿಕೆ ಮಾಡುವ ಮುನ್ನ ನಿರ್ದಿಷ್ಟ ಕಂಪನಿಯ ಬಗ್ಗೆ ಅರಿತು ಹೂಡಿಕೆ ಮಾಡುವುದು ಬಹಳ ಮುಖ್ಯ. ನಿರ್ದಿಷ್ಟ ಕಂಪನಿಯ ಬಿಸಿನೆಸ್ ಮಾಡೆಲ್, ಆ ಕ್ಷೇತ್ರದ ಬೆಳವಣಿಗೆ ಸಾಧ್ಯತೆ, ಹಣಕಾಸಿನ ಸ್ಥಿತಿಗತಿ, ಕಂಪನಿಯ ಆಡಳಿತ ಮಂಡಳಿಯ ಗಟ್ಟಿತನ, ಯಾವ ಕಾರಣಕ್ಕಾಗಿ ಐಪಿಒ ಮಾಡುತ್ತಿದ್ದಾರೆ ಎಂಬ ವಿಚಾರ ಹೀಗೆ ಎಲ್ಲಾ ಆಯಾಮಗಳಿಂದ ಅವಲೋಕನ ಮಾಡುವುದು ಮುಖ್ಯವಾಗುತ್ತದೆ.
ಕಂಪನಿಯ ಮೇಲೆ ಹಣ ಹಾಕಿರುವ ದೊಡ್ಡ ಹೂಡಿಕೆದಾರರಿಗೆ ಲಾಭ ಒದಗಿಸಲು ಐಪಿಒ ಮಾಡುತ್ತಿದ್ದಾರೆ ಎಂತಾದರೆ ಅಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕಂಪನಿಯ ಸಮಗ್ರ ವಿವರವಿರುವ ಮಾಹಿತಿಯು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ವೆಬ್‌ಸೈಟ್‌ನಲ್ಲಿ ಸಿಗುತ್ತದೆ.
ಮೌಲ್ಯಮಾಪನಕ್ಕಷ್ಟೇ ಆದ್ಯತೆ ಕೊಡಬೇಡಿ: 2020ಕ್ಕೂ ಮೊದಲು ಕೇವಲ ಲಾಭದಾಯಕ ಕಂಪನಿಗಳು ಮಾತ್ರ ಐಪಿಒ ಮಾಡಬಹುದಿತ್ತು. ಆದರೆ, 2020ರ ನಂತರ ಹೊಸ ತಲೆಮಾರಿನ ಕಂಪನಿಗಳ ಐಪಿಒಗೆ ಸೆಬಿ ಅವಕಾಶ ಕಲ್ಪಿಸಿದೆ. ಭವಿಷ್ಯದ ಮೌಲ್ಯಮಾಪನದ ಅಂದಾಜಿನಲ್ಲಿ ನಷ್ಟದಲ್ಲಿರುವ ಕೆಲ ಕಂಪನಿಗಳೂ ಷೇರುಪೇಟೆ ಪ್ರವೇಶಿಸುತ್ತಿವೆ. ಆದ್ದರಿಂದ ಹೂಡಿಕೆದಾರರು ಸರಿಯಾಗಿ ಅರ್ಥೈಸಿಕೊಂಡು ಐಪಿಒ ಹೂಡಿಕೆ ಮಾಡಬೇಕು.
(ಲೇಖಕ ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.