ADVERTISEMENT

ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ರಾಜೇಶ್ ಕುಮಾರ್ ಟಿ. ಆರ್.
Published 4 ಆಗಸ್ಟ್ 2024, 23:44 IST
Last Updated 4 ಆಗಸ್ಟ್ 2024, 23:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕಳೆದುಕೊಳ್ಳುವುದು ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಜೊತೆಗೆ, ಹಣಕಾಸಿನ ನಷ್ಟಕ್ಕೂ ದಾರಿ ಮಾಡಿಕೊಡಬಹುದು.

ಈಗಂತೂ ಬಹುಪಾಲು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನಲ್ಲಿ ಟ್ಯಾಪ್ ಟು ಪೇ ವ್ಯವಸ್ಥೆ (ಪಿನ್ ನಂಬರ್ ಇಲ್ಲದೆ ಪಾವತಿಸುವ ವ್ಯವಸ್ಥೆ) ಇದೆ. ಇದರಿಂದ ಕಳೆದು ಹೋದ ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳುವುದು ಬಹಳ ಸುಲಭ. ಈ ಕಾರ್ಡ್‌ಗಳು ಕಳೆದು ಹೋದಾಗ ಅಥವಾ ಕಳ್ಳತನವಾದಾಗ ಖಾತೆಯಲ್ಲಿ ಇರುವ ಹಣ ಅನ್ಯರ ಪಾಲಾಗದಂತೆ ಎಚ್ಚರಿಕೆವಹಿಸುವುದು ಹೇಗೆ? ಅವುಗಳನ್ನು ಬ್ಲಾಕ್ ಮಾಡಲು ಹಲವು ಮಾರ್ಗಗಳಿವೆ. ಆ ಕುರಿತು ತಿಳಿಯೋಣ.

ADVERTISEMENT

ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ:

ಕ್ರೆಡಿಟ್ ಕಾರ್ಡ್‌ ಅಥವಾ ಡೆಬಿಟ್ ಕಾರ್ಡ್ ಕಳೆದು ಹೋದ ತಕ್ಷಣ ಮಾಡಬೇಕಾದ ಮೊದಲನೇ ಕೆಲಸವೆಂದರೆ ಅದನ್ನು ಬ್ಲಾಕ್ ಮಾಡುವುದು. ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ (ಗ್ರಾಹಕ ಸಹಾಯವಾಣಿ) ಕರೆ ಮಾಡಿ ಕೂಡಲೇ ಬ್ಲಾಕ್ ಮಾಡಲು ತಿಳಿಸಬೇಕು. ಹೀಗೆ ಬ್ಲಾಕ್ ಮಾಡುವ ಮುನ್ನ ಕಸ್ಟಮರ್ ಕೇರ್‌ ಸಿಬ್ಬಂದಿ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ವೈಯಕ್ತಿಕ ಮಾಹಿತಿ ಇತ್ಯಾದಿ ಕೆಲವು ವಿವರ ಕೇಳುತ್ತಾರೆ. ಅವನ್ನು ಒದಗಿಸಿದರೆ ಕಾರ್ಡ್ ಬ್ಲಾಕ್‌ ಮಾಡಲು ಅವರು ಸಹಾಯ ಮಾಡುತ್ತಾರೆ.

ಎಸ್ಎಂಎಸ್ ಬಳಕೆ:

ಬಹುಪಾಲು ಬ್ಯಾಂಕ್‌ಗಳು ಎಸ್ಎಂಎಸ್ ಮೂಲಕ ಕಾರ್ಡ್‌ಗಳನ್ನು ಬ್ಲಾಕ್ ಮಾಡಲು ಅವಕಾಶ ಕಲ್ಪಿಸಿವೆ. ನಿಮ್ಮ ಕಾರ್ಡ್ ಕಳ್ಳತನವಾದಲ್ಲಿ ಸೂಚಿತ ಮೊಬೈಲ್ ಸಂಖ್ಯೆಗೆ ಸೂಚಿತ ಮಾದರಿಯಲ್ಲಿ ‘BLOCK’ ಅಂತ ಎಸ್ಎಂಎಸ್ ಕಳುಹಿಸಿದರೆ ಕಾರ್ಡ್‌ಗಳನ್ನು ಬ್ಲಾಕ್ ಮಾಡಲು ಸಾಧ್ಯವಿದೆ. ಈ ರೀತಿಯ ಎಸ್ಎಂಎಸ್ ಮೂಲಕ ಅತ್ಯಂತ ವೇಗವಾಗಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಬ್ಲಾಕ್  ಮಾಡಬಹುದಾಗಿದೆ. ಯಾರು ಕೀ ಪ್ಯಾಡ್ ಮೊಬೈಲ್ ಬಳಸುವರೋ ಅವರಿಗೂ ಎಸ್ಎಂಎಸ್ ಮಾದರಿಯಿಂದ ಅನುಕೂಲವಿದೆ. ಬ್ಲಾಕ್ ಎಸ್ಎಂಎಸ್ ಕಳುಹಿಸಿದ ನಂತರದಲ್ಲಿ ಕಾರ್ಡ್ ಸ್ಥಗಿತಗೊಳಿಸಿರುವ ಬಗ್ಗೆ ಬ್ಯಾಂಕ್ ಮತ್ತೊಂದು ಎಸ್ಎಂಎಸ್ ಸಂದೇಶ ಕಳುಹಿಸುತ್ತದೆ.

ನೆಟ್ ಬ್ಯಾಂಕಿಂಗ್, ಬ್ಯಾಂಕ್ ಆ್ಯಪ್‌ ಬಳಕೆ:

ನೀವು ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದರೆ ಅದರ ಮೂಲಕವೂ ಕಾರ್ಡ್‌ಗಳನ್ನು ಬ್ಲಾಕ್ ಮಾಡಲು ಸಾಧ್ಯವಿದೆ. ಹೀಗೆ ಮಾಡುವುದರಿಂದ ಕಾರ್ಡ್‌ನ ಸಂಭಾವ್ಯ ದುರ್ಬಳಕೆ ಮತ್ತು ಹಣಕಾಸಿನ ನಷ್ಟ ತಪ್ಪಿಸಬಹುದು.

ಹಲವು ಬ್ಯಾಂಕ್‌ಗಳು ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳ ಮೂಲಕ ಕ್ರೆಡಿಟ್‌ ಕಾರ್ಡ್‌, ಡೆಬಿಟ್ ಕಾರ್ಡ್ ಬಳಕೆ ಸ್ಥಗಿತಗೊಳಿಸುವ ವ್ಯವಸ್ಥೆ ಕಲ್ಪಿಸಿವೆ. ಆ್ಯಪ್‌ಗಳ ಮೂಲಕ ಡೆಬಿಟ್ ಕಾರ್ಡ್ ಅನ್ನು ಅತ್ಯಂತ ವೇಗವಾಗಿ ಮಾಡಲು ಸಾಧ್ಯವಿದೆ. ಇನ್ನು ಕೆಲವು ಬ್ಯಾಂಕ್‌ಗಳು ವಾಟ್ಸ್‌ಆ್ಯಪ್‌ ಮೂಲಕ ಕೂಡ ಕಾರ್ಡ್ ಸ್ಥಗಿತಗೊಳಿಸಲು ಅವಕಾಶ ಕಲ್ಪಿಸಿವೆ.

ಬ್ಯಾಂಕ್ ಶಾಖೆಗೆ ಭೇಟಿ ನೀಡಿ: 

ಒಂದೊಮ್ಮೆ ಬ್ಯಾಂಕ್ ಕಾರ್ಯ ನಿರ್ವಹಿಸುವ ಸಮಯದಲ್ಲಿ ನಿಮ್ಮ ಕಾರ್ಡ್ ಕಳೆದು ಹೋದರೆ ನೇರವಾಗಿ ಸಮೀಪದ ಬ್ಯಾಂಕ್ ಶಾಖೆಗೆ ಹೋಗಿ ಬ್ಲಾಕ್ ಮಾಡಿಸಬಹುದಾಗಿದೆ. ಆನ್‌ಲೈನ್, ಎಸ್ಎಂಎಸ್, ಆ್ಯಪ್‌ ಮೂಲಕ ಬ್ಲಾಕ್ ಮಾಡಲು ಸಾಧ್ಯವಾಗದಿದ್ದರೆ ಬ್ಯಾಂಕ್ ಶಾಖೆಗೆ ಹೋಗುವುದು ಉತ್ತಮ ಆಯ್ಕೆಯಾಗಿದೆ.

ಬ್ಯಾಂಕ್ ಶಾಖೆಗೆ ಹೋದಾಗ ಯಾವುದಾದರು ಗುರುತಿನ ಚೀಟಿ ಮತ್ತಿತರ ವಿವರ ಕೇಳುತ್ತಾರೆ. ಅದನ್ನು ನೀಡಿ ಕಾರ್ಡ್ ಕಳೆದು ಹೋದ ಬಗ್ಗೆ ವಿವರಿಸಿದರೆ ಕೂಡಲೇ ಕಾರ್ಡ್ ಬ್ಲಾಕ್ ಮಾಡುತ್ತಾರೆ. ಆ ವೇಳೆಯಲ್ಲಿಯೇ ಮತ್ತೊಂದು ಹೊಸ ಕಾರ್ಡ್ ಪಡೆಯುವುದು ಹೇಗೆ ಎನ್ನುವ ಬಗ್ಗೆಯೂ ಬ್ಯಾಂಕ್‌ನಲ್ಲಿ ವಿವರ ಪಡೆದುಕೊಳ್ಳಬಹುದು.

ಕಾರ್ಡ್ ಬ್ಲಾಕ್ ಮಾಡೋದು ಏಕೆ ಮುಖ್ಯ?

l ನಿಮ್ಮ ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌ನಲ್ಲಾಗುವ ಅನಧಿಕೃತ ವಹಿವಾಟು ತಡೆಯಲು ಕಾರ್ಡ್ ಬ್ಲಾಕ್ ಮಾಡಿಸಬೇಕು 

l ಕಾರ್ಡ್ ಕಳೆದು ಹೋದಾಗ ಅದನ್ನು ಬ್ಲಾಕ್ ಮಾಡಿಸದಿದ್ದರೆ ಬೇರೆಯವರು ಕಾರ್ಡ್ ದುರುಪಯೋಗ ಮಾಡಿಕೊಂಡಾಗ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ 

l ಯಾವುದೇ ಅನಧಿಕೃತ ವಹಿವಾಟನ್ನು ಬ್ಯಾಂಕ್‌ನಲ್ಲಿ ಪ್ರಶ್ನೆ ಮಾಡಬೇಕಾದರೆ ಕಳೆದು ಹೋದ ಕಾರ್ಡ್ ಅನ್ನು ಬ್ಲಾಕ್ ಮಾಡುವುದು ಬಹಳ ಮುಖ್ಯ

l ಕಾರ್ಡ್ ಕಳೆದು ಹೋದಾಗ ಅದನ್ನು ಬ್ಲಾಕ್ ಮಾಡಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಷೇರುಪೇಟೆ ಸೂಚ್ಯಂಕಗಳ ಓಟಕ್ಕೆ ತಡೆ
ಆಗಸ್ಟ್ 2ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿವೆ. 80981 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.43ರಷ್ಟು ಇಳಿಕೆಯಾಗಿದೆ. 24717 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.47ರಷ್ಟು ತಗ್ಗಿದೆ. ಅಮೆರಿಕದ ಮಾಹಿತಿ ತಂತ್ರಜ್ಞಾನ ಕಂಪನಿಗಳ ಫಲಿತಾಂಶಗಳಲ್ಲಿ ಹಿನ್ನಡೆ ಅಮೆರಿಕದಲ್ಲಿ ಉದ್ಯೋಗ ಕೊರತೆ ಹೆಚ್ಚಳ ಚೀನಾದಲ್ಲಿ ಪ್ರಗತಿಯ ವೇಗ ಕುಂಠಿತ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಕುಸಿತ ಅಮೆರಿಕ ಫೆಡರಲ್ ಬ್ಯಾಂಕ್‌ನ ಬಡ್ಡಿದರದಲ್ಲಿ ಯಥಾಸ್ಥಿತಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೂಡಿಕೆ ಹಿಂತೆಗೆತ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 3.76 ನಿಫ್ಟಿ ಐ.ಟಿ ಶೇ 3.04 ನಿಫ್ಟಿ ಆಟೊ ಶೇ 2.04 ಎಫ್‌ಎಂಸಿಜಿ ಶೇ 1.57 ಲೋಹ ಶೇ 1.16 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.01ರಷ್ಟು ಕುಸಿದಿವೆ. ನಿಫ್ಟಿ ಎನರ್ಜಿ ಶೇ 2.53 ಫಾರ್ಮಾ ಶೇ 1.39 ಮಾಧ್ಯಮ ಶೇ 1.19 ಅನಿಲ ಮತ್ತು ತೈಲ ಶೇ 0.68 ಫೈನಾನ್ಸ್ ಶೇ 0.21 ಮತ್ತು ನಿಫ್ಟಿ ಬ್ಯಾಂಕ್ ಶೇ 0.11ರಷ್ಟು ಹೆಚ್ಚಳ ಕಂಡಿವೆ. ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಎನ್‌ಟಿಪಿಸಿ ಶೇ 5.95 ಬಿಪಿಸಿಎಲ್ ಶೇ 5.89 ಏಷ್ಯನ್‌ ಪೇಂಟ್ಸ್ ಶೇ 5.31 ಪವರ್ ಗ್ರಿಡ್ ಶೇ 4.01 ಡಿವೀಸ್ ಲ್ಯಾಬ್ಸ್ ಶೇ 3.33 ಕೋಲ್ ಇಂಡಿಯಾ ಶೇ 3.03 ಅದಾನಿ ಪೋರ್ಟ್ಸ್ ಶೇ 2.97 ಅದಾನಿ ಎಂಟರ್ ಪ್ರೈಸಸ್ ಶೇ 2.71 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.52 ಬಜಾಜ್ ಫಿನ್‌ಸರ್ವ್ ಶೇ 2.46 ಶ್ರೀರಾಮ್ ಫೈನಾನ್ಸ್ ಶೇ 2.05 ಮತ್ತು ಬಜಾಜ್ ಆಟೊ ಶೇ 1.33ರಷ್ಟು ಏರಿಕೆ ಕಂಡಿವೆ. ಐಷರ್ ಮೋಟರ್ಸ್ ಶೇ 5.63 ಎಲ್‌ಟಿಐ ಮೈಂಡ್ ಟ್ರೀ ಶೇ 5.24 ಗ್ರಾಸಿಮ್ ಇಂಡಸ್ಟ್ರೀಸ್ ಶೇ 5.21 ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 4.51 ವಿಪ್ರೊ ಶೇ 4.34 ಹೀರೊ ಮೋಟೊಕಾರ್ಪ್ ಶೇ 3.4 ಸಿಪ್ಲಾ ಶೇ 3.23 ಇನ್ಫೊಸಿಸ್ ಶೇ 3.22 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 3.06 ಐಟಿಸಿ ಶೇ 2.71 ಟಾಟಾ ಸ್ಟೀಲ್ ಶೇ 2.58 ಟಿಸಿಎಸ್ ಶೇ 2.35ರಷ್ಟು ಕುಸಿದಿವೆ. ಮುನ್ನೋಟ: ಈ ವಾರ ಏರ್‌ಟೆಲ್ ಒಎನ್‌ಜಿಸಿ ಬಿಇಎಂಎಲ್ ವಿಆರ್‌ಎಲ್ ಲಾಜಿಸ್ಟಿಕ್ಸ್ ಎಬಿಬಿ ಇಂಡಿಯಾ ಹನಿವೆಲ್ ಆಟೊಮೇಷನ್ ಗ್ರಾಫೈಟ್ ಇಂಡಿಯಾ ರೇಮಂಡ್ ಪಿಡಿಲೈಟ್ ಇಂಡಸ್ಟ್ರೀಸ್ ಎನ್‌ಎಚ್‌ಪಿಸಿ ಬಾಷ್ ಟಿವಿಎಸ್ ಮೋಟರ್ ಕಂಪನಿ ಇಂಡಿಗೊ ಪೇಂಟ್ಸ್ ಎಂಆರ್‌ಎಫ್ ಆಯಿಲ್ ಇಂಡಿಯಾ ಬಯೋಕಾನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶ ಆಧರಿಸಿ ಕೆಲ ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿ ಏರಿಳಿತ ಕಾಣಲಿವೆ. ಉಳಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಭಾವವು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳ ಮೇಲೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.