ADVERTISEMENT

ಹಣಕಾಸು ಸಾಕ್ಷರತೆ: ಉಳಿತಾಯ– ಅಂಚೆ ಯೋಜನೆಯಲ್ಲಿದೆ ಪ್ರತಿ ತಿಂಗಳೂ ಆದಾಯ!

ರಾಜೇಶ್ ಕುಮಾರ್ ಟಿ.ಆರ್ ಅವರ ಹಣಕಾಸು ಸಾಕ್ಷರತೆ ಅಂಕಣ

ರಾಜೇಶ್ ಕುಮಾರ್ ಟಿ. ಆರ್.
Published 18 ಫೆಬ್ರುವರಿ 2024, 20:29 IST
Last Updated 18 ಫೆಬ್ರುವರಿ 2024, 20:29 IST
<div class="paragraphs"><p>ಹಣಕಾಸು ಸಾಕ್ಷರತೆ</p></div>

ಹಣಕಾಸು ಸಾಕ್ಷರತೆ

   

ಹೂಡಿಕೆ ಹಣಕ್ಕೆ ಸುರಕ್ಷತೆಯೂ ಬೇಕು, ಪ್ರತಿ ತಿಂಗಳು ನಿಶ್ಚಿತ ಆದಾಯವೂ ಬರಬೇಕು ಎನ್ನುವವರಿಗೆ ಒಂದು ಉತ್ತಮ ಆಯ್ಕೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ. ಇದು ಕೇಂದ್ರ ಸರ್ಕಾರದ ಗ್ಯಾರಂಟಿ ಇರುವ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಪ್ರತಿ ತಿಂಗಳು ಹೂಡಿಕೆ ಮೊತ್ತದ ಮೇಲೆ ಬಡ್ಡಿ ಪಡೆದುಕೊಳ್ಳುವ ಅವಕಾಶವಿದೆ. ಬನ್ನಿ ಈ ಯೋಜನೆ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಯೋಣ.

ಏನಿದು ಮಾಸಿಕ ಆದಾಯ ಯೋಜನೆ?

ADVERTISEMENT

ಈ ಮಾಸಿಕ ಆದಾಯ ಯೋಜನೆಯು ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಪ್ರಮುಖವಾದುದು. ಈ ಯೋಜನೆಯಲ್ಲಿ ಹೂಡಿಕೆ ಮೊತ್ತ ಆಧರಿಸಿ ಪ್ರತಿ ತಿಂಗಳು ಬಡ್ಡಿ ಲಾಭ ದಕ್ಕುತ್ತದೆ. ಐದು ವರ್ಷಗಳ ಮೆಚ್ಯೂರಿಟಿ ಅವಧಿಯ ಬಳಿಕ ಹೂಡಿಕೆಯ ಅಸಲಿನ ಮೊತ್ತವೂ ಸಿಗುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ನೀವಿದನ್ನು ಪ್ರಾರಂಭಿಸಬಹುದು.

ಯಾರು ಖಾತೆ ತೆರೆಯಬಹುದು? ಠೇವಣಿ ವಿವರ

ವಯಸ್ಕರು ಈ ಖಾತೆ ತೆರೆಯಬಹುದು. ಇಬ್ಬರು ಅಥವಾ ಮೂವರು ಸೇರಿ ಜಂಟಿ ಖಾತೆಯನ್ನೂ ಪ್ರಾರಂಭಿಸಬಹುದು. 18 ವರ್ಷದೊಳಗಿನವರ ಹೆಸರಿನಲ್ಲಿ ಪೋಷಕರು ಖಾತೆ ಶುರು ಮಾಡಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಕನಿಷ್ಠ ₹1 ಸಾವಿರದಿಂದ ಗರಿಷ್ಠ ₹15 ಲಕ್ಷ ಹೂಡಿಕೆ ಮಾಡಲು ಅವಕಾಶವಿದೆ.

ಆದರೆ, ಒಬ್ಬರ ಹೆಸರಿನಲ್ಲಿ ಖಾತೆ ಇದ್ದರೆ ಗರಿಷ್ಠ ₹9 ಲಕ್ಷ ಮಾತ್ರ ಹೂಡಿಕೆ ಮಾಡಬಹುದು. ಜಂಟಿ ಹೆಸರಿನಲ್ಲಿ ಖಾತೆ ಇದ್ದರೆ ₹15 ಲಕ್ಷದವರೆಗೆ ಹೂಡಿಕೆ ಸಾಧ್ಯವಿದೆ. ಜಂಟಿ ಖಾತೆಯಲ್ಲಿ ಎಲ್ಲ ಪಾಲುದಾರರು ಸರಿಸಮನಾದ ಮೊತ್ತವನ್ನು ಹೂಡಬೇಕಾಗುತ್ತದೆ.

ಬಡ್ಡಿ ಮತ್ತು ತೆರಿಗೆ

ಈ ಯೋಜನೆಯ ಸದ್ಯದ ಬಡ್ಡಿ ದರ ಶೇ 7.4ರಷ್ಟಿದ್ದು ಹೊಡಿಕೆ ಮೊತ್ತದ ಮೇಲೆ ಬರುವ ಬಡ್ಡಿ ಪ್ರತಿ ತಿಂಗಳ ಕೊನೆಗೆ ಸಿಗುತ್ತದೆ. ಒಂದೊಮ್ಮೆ ಬರುವ ಬಡ್ಡಿಯನ್ನು ಪ್ರತಿ ತಿಂಗಳ ಕೊನೆಯಲ್ಲಿ ನೀವು ಪಡೆದುಕೊಳ್ಳದಿದ್ದರೆ ಯಾವುದೇ ಹೆಚ್ಚುವರಿ ಬಡ್ಡಿ ಲಾಭ ನಿಮಗೆ ಸಿಗುವುದಿಲ್ಲ. ಪ್ರತಿ ತಿಂಗಳ ಬರುವ ಬಡ್ಡಿಯನ್ನು ಹೂಡಿಕೆದಾರರು ಅಂಚೆ ಕಚೇರಿಯ ಉಳಿತಾಯ ಖಾತೆಗೆ ಸ್ವಯಂ ಚಾಲಿತವಾಗಿ ವರ್ಗಾಯಿಸಿಕೊಳ್ಳಬಹುದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಿಂದ ಬರುವ ಬಡ್ಡಿಗೆ ನಿರ್ದಿಷ್ಟ ವ್ಯಕ್ತಿಯ ತೆರಿಗೆ ಸ್ಲ್ಯಾಬ್‌ಗೆ ಅನುಗುಣವಾಗಿ ತೆರಿಗೆ ಅನ್ವಯಿಸುತ್ತದೆ.

ಅವಧಿಗೆ ಮುನ್ನ ಠೇವಣಿ ತೆಗೆದರೆ ಏನಾಗುತ್ತದೆ?

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಹೂಡಿಕೆ ಅವಧಿ 5 ವರ್ಷಗಳು. ಮೊದಲ ಒಂದು ವರ್ಷ ಹೂಡಿಕೆ ಮೊತ್ತವನ್ನು ತೆಗೆಯಲು ಯಾವುದೇ ಅವಕಾಶ ಇರುವುದಿಲ್ಲ. ಒಂದನೇ ವರ್ಷದ ನಂತರ ಮೂರನೇ ವರ್ಷದ ಒಳಗೆ ಠೇವಣಿ ಹಿಂತೆಗೆದರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 2ರಷ್ಟು ದಂಡ ವಿಧಿಸಲಾಗುತ್ತದೆ.

ಮೂರನೇ ವರ್ಷ ನಂತರ ಐದನೇ ವರ್ಷದ ಒಳಗೆ ಠೇವಣಿ ಹಿಂತೆಗೆದರೆ ಒಟ್ಟು ಅಸಲಿನ ಮೊತ್ತದಲ್ಲಿ ಶೇ 1ರಷ್ಟು ದಂಡ ಕಟ್ಟಬೇಕಾಗುತ್ತದೆ. ಒಂದೊಮ್ಮೆ ಠೇವಣಿದಾರ ಮೆಚ್ಯೂರಿಟಿ ಅವಧಿಗೂ ಮುನ್ನ ಮೃತಪಟ್ಟರೆ ಖಾತೆಯನ್ನು ಮುಚ್ಚಿ ನಾಮಿನಿಗೆ ಅಸಲು ಹೂಡಿಕೆ ಮೊತ್ತ ಮತ್ತು ಬಡ್ಡಿಯನ್ನು ನೀಡಲಾಗುತ್ತದೆ.

ಹೂಡಿಕೆ ಮೇಲೆ ಸಿಗುವ ಬಡ್ಡಿ ಲಾಭ ಎಷ್ಟು?

ಸದ್ಯ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಬಡ್ಡಿ ದರ ಶೇ 7.4ರಷ್ಟಿದೆ. ಇದರಂತೆ ₹9 ಲಕ್ಷ ಹೂಡಿದರೆ ಪ್ರತಿ ತಿಂಗಳು ₹5,550 ಲಭಿಸುತ್ತದೆ. ₹15 ಲಕ್ಷ ಹೂಡಿದರೆ ₹9,250 ಬಡ್ಡಿ ಲಾಭ ಸಿಗುತ್ತದೆ. (ಹೆಚ್ಚಿನ ವಿವರಗಳಿಗೆ ಪಟ್ಟಿ ಗಮನಿಸಿ)

ಬಡ್ಡಿ ವಿವರ: ಹಾಲಿ ಬಡ್ಡಿದರ;ಹೂಡಿಕೆ ಮೊತ್ತ;ಪ್ರತಿ ತಿಂಗಳು ಸಿಗುವ ಬಡ್ಡಿ;5 ವರ್ಷಕ್ಕೆ ಸಿಗುವ ಬಡ್ಡಿ

ಸಾರಾಂಶ

ಪ್ರತಿ ತಿಂಗಳು ನಿಶ್ಚಿತ ಆದಾಯ ಬೇಕು, ಬಂಡವಾಳ ಸುರಕ್ಷತೆಯೇ ಆದ್ಯತೆ ಎನ್ನುವವರಿಗೆ ಈ ಯೋಜನೆ ಹೆಚ್ಚು ಸೂಕ್ತ. ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್ ಫಂಡ್ ಹೂಡಿಕೆಗಳಿಗೆ ಹೋಲಿಸಿ ನೋಡಿದಾಗ ಈ ಸ್ಕೀಂನಲ್ಲಿ ಬಡ್ಡಿ ಲಾಭ ಕಡಿಮೆ. ಬೆಲೆ ಏರಿಕೆಯನ್ನು ಮೀರಿ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಲಾಭ ಕೊಡುವುದಿಲ್ಲ. ಆದರೆ, ಷೇರು ಮಾರುಕಟ್ಟೆಯಲ್ಲಿ ಲಾಭದ ಖಾತರಿ ಇರುವುದಿಲ್ಲ. ಮಾರುಕಟ್ಟೆ ಏರಿಳಿತಕ್ಕೆ ನಿಮ್ಮ ಹೂಡಿಕೆ ಮೇಲಿನ ಗಳಿಕೆ ಒಳಪಟ್ಟಿರುತ್ತದೆ. ಹೂಡಿಕೆ ನಿರ್ಧಾರಕ್ಕೂ ಮುನ್ನ ಈ ಅರಿವು ನಿಮಗಿರಲಿ. ಸಾಧಕ –ಬಾಧಕಗಳನ್ನು ಅರಿತು ಮುನ್ನಡೆಯಿರಿ. 

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.