ADVERTISEMENT

ಹಣಕಾಸು ಸಾಕ್ಷರತೆ: ಹೂಡಿಕೆಯಲ್ಲಿ ಗೆಲುವಿನ ಸೂತ್ರ ಏನು?

ರಾಜೇಶ್ ಕುಮಾರ್ ಟಿ. ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ

ರಾಜೇಶ್ ಕುಮಾರ್ ಟಿ. ಆರ್.
Published 1 ಸೆಪ್ಟೆಂಬರ್ 2024, 20:11 IST
Last Updated 1 ಸೆಪ್ಟೆಂಬರ್ 2024, 20:11 IST
ಹೂಡಿಕೆ ವಂಚನೆ–ಪ್ರಾತಿನಿಧಿಕ ಚಿತ್ರ
ಹೂಡಿಕೆ ವಂಚನೆ–ಪ್ರಾತಿನಿಧಿಕ ಚಿತ್ರ   

‘ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ’ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಇದರರ್ಥ ಇಷ್ಟೇ, ನಾವು ಹೂಡಿಕೆಯಲ್ಲಿ ಸದಾ ವೈವಿಧ್ಯತೆ ಕಾಯ್ದುಕೊಳ್ಳಬೇಕು ಎಂಬುದಾಗಿದೆ.

ಹಣಕಾಸಿನ ಉತ್ಪನ್ನಗಳ ಮೇಲೆ ಹೂಡಿಕೆ ಮಾಡಿ ಯಾವ ಪ್ರಮಾಣದಲ್ಲಿ ಲಾಭ ಗಳಿಸುತ್ತೇವೆ ಎನ್ನುವುದು ಎಷ್ಟು ಮುಖ್ಯವೋ, ಮಾರುಕಟ್ಟೆ ಇಳಿಮುಖವಾಗಿದ್ದಾಗ ನಮ್ಮ ಹೂಡಿಕೆ ಸಂಪತ್ತನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆ ಅನ್ನೋದು ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ 12:20:80 ಸೂತ್ರ ಹೂಡಿಕೆದಾರರ ನೆರವಿಗೆ ಬರುತ್ತದೆ.

ಯಾವ ಮಾದರಿಯ ಹೂಡಿಕೆಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕು ಮತ್ತು ಅನಿರೀಕ್ಷಿತ ತುರ್ತುಗಳಿಗೆ ಹೇಗೆ ಸನ್ನದ್ಧರಾಗಿರಬೇಕು ಎನ್ನುವುದಕ್ಕೆ ಈ ಸೂತ್ರ ಒಂದು ಚೌಕಟ್ಟು ಒದಗಿಸುತ್ತದೆ. ಅಲ್ಲದೆ, ದೀರ್ಘಾವಧಿಯಲ್ಲಿ ಹಣಕಾಸಿನ ಗುರಿಗಳನ್ನು ತಲುಪಲು ಇದು ಅನುಕೂಲ ಮಾಡಿಕೊಡುತ್ತದೆ. ಬನ್ನಿ, ಈ ಸೂತ್ರದ ಬಗ್ಗೆ ಇನ್ನಷ್ಟು ತಿಳಿಯೋಣ.

ADVERTISEMENT

ಈ ಹೂಡಿಕೆ ಸೂತ್ರವು ಪ್ರಮುಖವಾಗಿ ಮೂರು ವಿಚಾರಗಳ ಬಗ್ಗೆ ಪ್ರಸ್ತಾಪಿಸುತ್ತದೆ.

* ಅನಿಶ್ಚಿತ ಸಂದರ್ಭಗಳಿಗ ಬೇಕಾದ 12 ತಿಂಗಳ ಖರ್ಚಿನ ಮೊತ್ತವನ್ನು ತುರ್ತು ನಿಧಿಯಲ್ಲಿಟ್ಟುಕೊಳ್ಳಬೇಕು.

* ಚಿನ್ನದ ಮೇಲೆ, ಉಳಿತಾಯದ ಶೇ 20ರಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು.

* ಉಳಿಸಿದ ಒಟ್ಟು ಹಣದಲ್ಲಿ ಶೇ 80ರಷ್ಟು ಹಣವನ್ನು ಷೇರು ಮಾರುಕಟ್ಟೆ ಹೂಡಿಕೆಗಳ ಮೇಲೆ ತೊಡಗಿಸಬೇಕು.

12 ತಿಂಗಳಿಗೆ ಬೇಕಾದ ಅಗತ್ಯ ಹಣ ಲಿಕ್ವಿಡ್ ಫಂಡ್‌ನಲ್ಲಿ ಇರಲಿ: ಜೀವನದಲ್ಲಿ ಅನಿಶ್ಚಿತ ಸಂದರ್ಭ ಬರುವುದು ಸರ್ವೇ ಸಾಮಾನ್ಯ. ಮನೆಯಲ್ಲಿ ಯಾರೋ ಅನಾರೋಗ್ಯಕ್ಕೆ ತುತ್ತಾಗಬಹುದು, ಮತ್ಯಾರಿಗೋ ಉದ್ಯೋಗ ನಷ್ಟವಾಗಬಹುದು. ಇಂತಹ ತುರ್ತು ಹಣಕಾಸಿನ ಸಂದರ್ಭ ಎದುರಿಸಲು 12 ತಿಂಗಳ
ಖರ್ಚಿಗೆ ಬೇಕಾದ ಹಣವನ್ನು ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ, ಸ್ವೀಪ್ ಇನ್ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಅಥವಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ಗಳಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ. ಆಪತ್ಕಾಲದಲ್ಲಿ ಹೂಡಿಕೆಗಳ ಮೇಲೆ ಯಾವುದೇ ಪರಿಣಾಮವಾಗದಂತೆ ತುರ್ತು ನಿಧಿ ನೋಡಿಕೊಳ್ಳುತ್ತದೆ.

ತುರ್ತು ನಿಧಿಯು ಕಷ್ಟಕಾಲದಲ್ಲಿ ನಿಮ್ಮ ಆಪ್ತಮಿತ್ರನಂತೆ ಕೆಲಸ ಮಾಡುತ್ತದೆ. 12 ತಿಂಗಳ ತುರ್ತು ನಿಧಿಯನ್ನು ಕಾಯ್ದಿರಿಸುವಾಗ ಇಲ್ಲಿ, ಹೂಡಿಕೆ ಮೇಲಿನ ಗಳಿಕೆಗಿಂತ ಬೇಕಾದಾಗ ಹಣ ತೆಗೆದುಕೊಳ್ಳುವ ಸಾಧ್ಯತೆಗೆ (ಲಿಕ್ವಿಡಿಟಿ) ಹೆಚ್ಚು ಒತ್ತು ನೀಡಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ತಿಂಗಳ ವೆಚ್ಚ ₹30 ಸಾವಿರ ಅಂತಾದರೆ ನಿಮ್ಮ ತುರ್ತು ನಿಧಿಯಲ್ಲಿ (30,000x 12= 3,60,000) ₹3.60 ಲಕ್ಷ ಇರಬೇಕು.

ಚಿನ್ನದ ಮೇಲಿನ ಹೂಡಿಕೆ ಕಡೆಗಣಿಸಬೇಡಿ: ಆರ್ಥಿಕ ಹಿಂಜರಿತ, ಹಣದುಬ್ಬರದಂತಹ ಸಂದರ್ಭ ನಿಭಾಯಿಸಲು ಚಿನ್ನದ ಮೇಲಿನ ಹೂಡಿಕೆ ಅತ್ಯಗತ್ಯ. ಆರ್ಥಿಕ ಪ್ರಗತಿ ಕುಂಠಿತವಾದಾಗ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ಅನಿಶ್ಚಿತತೆಯ ಬಿಸಿ ತಟ್ಟುತ್ತದೆ. ಆದರೆ, ಇಂತಹ ಕ್ಲಿಷ್ಟ ಸನ್ನಿವೇಶದಲ್ಲೂ ಬಂಗಾರದ ಮೇಲಿನ ಹೂಡಿಕೆ ಸ್ಥಿರವಾಗಿ ನಿಲ್ಲುತ್ತದೆ. ಹಾಗಾಗಿ, ಶೇ 20ರಷ್ಟು ಉಳಿತಾಯದ ಮೊತ್ತವನ್ನು ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಪರಿಗಣಿಸಬೇಕು ಎಂದು 12:20:80 ಸೂತ್ರ ಹೇಳುತ್ತದೆ.

ಗೋಲ್ಡ್ ಮ್ಯೂಚುವಲ್ ಫಂಡ್‌ಗಳು, ಗೋಲ್ಡ್ ಇಟಿಎಫ್, ಸಾವರಿನ್ ಗೋಲ್ಡ್‌ ಬಾಂಡ್‌ನಂತಹ ಹೂಡಿಕೆಗಳನ್ನು ಇಲ್ಲಿ ಪರಿಗಣಿಸಬಹುದು. ಒಡವೆ ಚಿನ್ನ ಖರೀದಿಯ ಆಯ್ಕೆಯೂ ಇದೆ. ಆದರೆ, ಆಭರಣ ಚಿನ್ನ ಕೊಳ್ಳುವುದು ಅಷ್ಟೇನು ಲಾಭದಾಯಕವಲ್ಲ.

ಸಂಪತ್ತು ಬೆಳೆಸಲು ಷೇರು, ಮ್ಯೂಚುವಲ್ ಫಂಡ್ ಬೇಕೇ ಬೇಕು: ಯಾವುದೇ ವ್ಯಕ್ತಿ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಬೇಕಾದರೆ ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಪರಿಗಣಿಸಲೇಬೇಕು. ಅಲ್ಪಾವಧಿಯಲ್ಲಿ ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳು ಏರಿಳಿತಕ್ಕೆ ಒಳಪಟ್ಟರೂ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ತಾಕತ್ತು ಈ ಹೂಡಿಕೆಗಳಿಗೆ ಇದೆ.

ಈ ಎಲ್ಲಾ ಕಾರಣಗಳಿಂದ ಉಳಿತಾಯದ ಶೇ 80ರಷ್ಟು ಹಣವನ್ನು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳ ಮೇಲೆ ತೊಡಗಿಸುವ ಬಗ್ಗೆ ಆಲೋಚನೆ ಮಾಡಬೇಕು. ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವಾಗ ವೈವಿಧ್ಯತೆ ಕಾಯ್ದುಕೊಳ್ಳುವುದನ್ನು ಮರೆಯಬಾರದು. ದೊಡ್ಡ ಗಾತ್ರ, ಮಧ್ಯಮ ಗಾತ್ರ ಮತ್ತು ಸಣ್ಣ ಗಾತ್ರದ ಕಂಪನಿಗಳನ್ನು ಹೂಡಿಕೆಗೆ ಪರಿಗಣಿಸುವ ಜೊತೆಗೆ ಆಂತರಿಕ ಮೌಲ್ಯ ಹೊಂದಿರುವ, ಭವಿಷ್ಯದಲ್ಲಿ ಬೆಳವಣಿಗೆ ಸಾಧ್ಯತೆ ಕಾಣಿಸುವ, ವಿವಿಧ ವಲಯದ ಕಂಪನಿಗಳನ್ನು ಪರಿಗಣಿಸಿ ಅಧ್ಯಯನ ಮಾಡಿ ಹೂಡಿಕೆ ಮಾಡಬೇಕು.

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ವಿವಿಧ ಮಾದರಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಂಡು ಮುನ್ನಡೆಯಬೇಕು. ಹೀಗೆ ಮಾಡಿದಾಗ ಸಂಪತ್ತು ಬೆಳೆಸಲು ಸಾಧ್ಯವಾಗುತ್ತದೆ ಎನ್ನುವುದನ್ನು ಈ ಸೂತ್ರ ತಿಳಿಸುತ್ತದೆ.

ಕಿವಿಮಾತು: ಈ ಹೂಡಿಕೆ ಸೂತ್ರ ಒಂದು ಮಾನದಂಡವಾಗಿದ್ದು, ವ್ಯಕ್ತಿಗತವಾಗಿ ಹೂಡಿಕೆ ವಿಧಾನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಇದೇ ಮಾರ್ಗದಲ್ಲಿ ನಡೆಯಲೇಬೇಕು ಎಂದೇನಿಲ್ಲ. 12:20:80 ಸೂತ್ರವನ್ನು ಒಂದು ಮಾದರಿಯನ್ನಾಗಿ ಪರಿಗಣಿಸಿ ನಿಮ್ಮ ಹೂಡಿಕೆ ಗುರಿಗಳು ಮತ್ತು ಹಣಕಾಸಿನ ಸ್ಥಿತಿಗತಿಗೆ ಅನುಗಣವಾಗಿ ಹೊಂದಾಣಿಕೆ ಮಾಡಿಕೊಳ್ಳಬಹುದು.

ಗಳಿಕೆ ದಾಖಲಿಸಿದ ಸೂಚ್ಯಂಕಗಳು

ಆಗಸ್ಟ್ 30ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 82365 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.58ರಷ್ಟು ಗಳಿಸಿಕೊಂಡಿದೆ. 25235 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.66ರಷ್ಟು ಜಿಗಿದಿದೆ. ಭಾರತದ ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕತೆ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಉತ್ಸಾಹ ಐ.ಟಿ ಕಂಪನಿಗಳ ಷೇರುಗಳಲ್ಲಿ ಉತ್ತಮ ಪ್ರಗತಿ ಬಡ್ಡಿದರ ಇಳಿಕೆಯಾಗಲಿದೆ ಎಂಬ ಆಶಾಭಾವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬೆಲೆ ಏರಿಕೆ ಇಳಿಕೆಯಾಗುತ್ತಿರುವುದು ಸೇರಿ ಹಲವು ಅಂಶಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಎಫ್ಎಂಸಿಜಿ ಸೂಚ್ಯಂಕ ಹೊರತುಪಡಿಸಿ ಇನ್ನುಳಿದ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. ನಿಫ್ಟಿ ಐ.ಟಿ ಶೇ 4.2 ರಿಯಲ್ ಎಸ್ಟೇಟ್ ಶೇ 3.33 ಫಾರ್ಮಾ ಶೇ 3.02 ಅನಿಲ ಮತ್ತು ತೈಲ ಶೇ 2.25 ಫೈನಾನ್ಸ್ ಶೇ 1.65 ಮಾಧ್ಯಮ ಶೇ 1.65 ಲೋಹ ಶೇ 1.36 ಆಟೊ ಶೇ 1.33 ಎನರ್ಜಿ ಶೇ 1.03 ಬ್ಯಾಂಕ್ ಶೇ 0.74ರಷ್ಟು ಗಳಿಸಿಕೊಂಡಿವೆ. ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಕೋಲ್ ಇಂಡಿಯಾ ಶೇ 2.71 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 2.02 ಗ್ರಾಸಿಮ್ ಇಂಡಸ್ಟ್ರಿಸ್ ಶೇ 1.95 ನೆಸ್ಲೆ ಇಂಡಿಯಾ ಶೇ 1.73 ಅದಾನಿ ಎಂಟರ್ ಪ್ರೈಸಸ್ ಶೇ 1.53 ಹಿಂದುಸ್ತಾನ್‌ ಯೂನಿಲಿವರ್‌ ಶೇ 1.06 ಅಲ್ಟ್ರಾಟೆಕ್ ಸಿಮೆಂಟ್ ಶೇ 0.78 ಐಟಿಸಿ ಶೇ 0.64 ಏಷ್ಯನ್‌ ಪೇಂಟ್ಸ್ ಶೇ 0.61 ಅದಾನಿ ಪೋರ್ಟ್ಸ್ ಶೇ 0.5 ಟಾಟಾ ಸ್ಟೀಲ್ ಶೇ 0.49ರಷ್ಟು ಕುಸಿದಿವೆ. ಎಲ್‌ಟಿಐ ಮೈಂಡ್ ಟ್ರೀ ಶೇ 9.04 ಬಜಾಜ್ ಫಿನ್‌ಸರ್ವ್ ಶೇ 8.58 ಬಜಾಜ್ ಫೈನಾನ್ಸ್ ಶೇ 7.09 ಏರ್‌ಟೆಲ್ ಶೇ 5.37 ಸಿಪ್ಲಾ ಶೇ 5.27 ವಿಪ್ರೊ ಶೇ 5.22 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 5.16 ಡಿವೀಸ್ ಲ್ಯಾಬ್ಸ್ ಶೇ 4.96 ಇನ್ಫೊಸಿಸ್ ಶೇ 4.65 ಬಜಾಜ್ ಆಟೊ ಶೇ 4.54 ಎನ್‌ಟಿಪಿಸಿ ಶೇ 3.78 ಮತ್ತು ಒಎನ್‌ಜಿಸಿ ಶೇ 3.46ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಸ್ಥೂಲ ಅರ್ಥಶಾಸ್ತ್ರದ ಬೆಳವಣಿಗೆಗಳತ್ತ ಹೂಡಿಕೆದಾರರು ಚಿತ್ತ ಹರಿಸಲಿದ್ದಾರೆ. ಹಣದುಬ್ಬರ ದರ ಜಾಗತಿಕ ವಿದ್ಯಮಾನಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ. ದೇಶೀಯ ಬೆಳವಣಿಗೆಗಳ ಮೇಲೂ ಹೂಡಿಕೆದಾರರು ದೃಷ್ಟಿ ಇಟ್ಟಿದ್ದಾರೆ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.