ADVERTISEMENT

ಫ್ಲ್ಯಾಟ್ ಖರೀದಿಯಲ್ಲಿ ಆಯ್ಕೆಯ ಮಹತ್ವ

ಕ್ಲಿಯೋನ್ ಡಿಸೋಜ
Published 10 ನವೆಂಬರ್ 2019, 19:30 IST
Last Updated 10 ನವೆಂಬರ್ 2019, 19:30 IST
ಕ್ಲೆಯಾನ್‌ ಡಿಸೋಜ
ಕ್ಲೆಯಾನ್‌ ಡಿಸೋಜ   

ವಾಸಕ್ಕೆ ಸಿದ್ಧವಿರುವ ಮನೆ ಖರೀದಿ ಮಾಡುವುದರಿಂದಲೇ ಹೆಚ್ಚಿನ ಅನುಕೂಲವಿದೆ ಎನ್ನುವುದಕ್ಕೆ ಕೆಲ ಪ್ರಮುಖ ಕಾರಣಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

*

ಫ್ಲ್ಯಾಟ್ ಕೊಳ್ಳುವ ನಿರ್ಧಾರಕ್ಕೆ ಬಂದ ಮೇಲೆ, ನಿರ್ಮಾಣ ಹಂತದಲ್ಲಿರುವುದನ್ನುಖರೀದಿಸಬೇಕೋ ಅಥವಾ ವಾಸಕ್ಕೆ ಸಿದ್ಧವಾಗಿರುವ ಫ್ಲ್ಯಾಟ್ ಖರೀದಿಸಬೇಕೋ ಎನ್ನುವ ಪ್ರಶ್ನೆ ಮೂಡುತ್ತದೆ. ನಿರ್ಮಾಣ ಹಂತದ ಫ್ಲ್ಯಾಟ್‌ಗಳನ್ನು ಖರೀದಿಸಿದರೆ ಒಳ್ಳೆಯದು ಎಂದು ವಾದಿಸುವವರು ಒಂದೆಡೆಯಾದರೆ, ವಾಸಕ್ಕೆ ಸಿದ್ಧವಿರೋ ಫ್ಲ್ಯಾಟ್‌ಗಳನ್ನೇ ಖರೀದಿಸಿದರೆ ಉತ್ತಮ ಎಂದು ನಂಬಿರುವವರು ಮತ್ತೊಂದೆಡೆ. ವಾಸ್ತವದಲ್ಲಿ ಎರಡೂ ರೀತಿಯ ಖರೀದಿಯಲ್ಲೂ ಸಾಧಕ- ಬಾಧಕಗಳಿವೆ. ಆದರೆ, ವಾಸಕ್ಕೆ ಸಿದ್ಧವಿರುವ ಮನೆ ಖರೀದಿ ಮಾಡುವುದರಿಂದಲೇ ಹೆಚ್ಚಿನ ಅನುಕೂಲವಿದೆ ಎನ್ನುವುದಕ್ಕೆ ಕೆಲ ಪ್ರಮುಖ ಕಾರಣಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ADVERTISEMENT

ವಿಳಂಬ ಸಾಧ್ಯತೆ ಇಲ್ಲ: ನಿರ್ಮಾಣ ಹಂತದ ಫ್ಲ್ಯಾಟ್‌ಗಳಲ್ಲಿ ವಿಳಂಬದ ಸಾಧ್ಯತೆ ಹೆಚ್ಚಿರುತ್ತದೆ. ಬಿಲ್ಡರ್, ಕಟ್ಟಡದ ಕೆಲಸ ಪೂರ್ಣಗೊಳಿಸಿ ನಿಗದಿತ ಸಮಯಕ್ಕೆ ವಾಸಕ್ಕೆ ಬಿಟ್ಟುಕೊಡದ ಪಕ್ಷದಲ್ಲಿ ಮನೆಗಾಗಿ ಹೂಡಿಕೆ ಮಾಡಿರುವ ವ್ಯಕ್ತಿ ಸಂಕಷ್ಟದ ಸನ್ನಿವೇಶ ಎದುರಿಸಬೇಕಾಗುತ್ತದೆ.

ಹಿಂದೆ ಬಿಲ್ಡರ್‌ಗಳು ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 5 ವರ್ಷದ ಅವಧಿ ನಿಗದಿ ಮಾಡುತ್ತಿದ್ದರು. ಆದರೆ, ‘ರೇರಾ’ ಕಾಯ್ದೆಯ ಬಳಿಕ ವಿಳಂಬದ ದಂಡ ತಪ್ಪಿಸಿಕೊಳ್ಳಲು ಫ್ಲ್ಯಾಟ್ ಹಸ್ತಾಂತರಕ್ಕೆ ಕನಿಷ್ಠ ನಾಲ್ಕರಿಂದ ಐದು ವರ್ಷಗಳ ಅವಧಿ ತೆಗೆದುಕೊಳ್ಳುತ್ತಿದ್ದಾರೆ. ವಾಸಕ್ಕೆ ಸಿದ್ಧವಿರುವ ಫ್ಲ್ಯಾಟ್ ತೆಗೆದುಕೊಂಡಾಗ ಅನಿಶ್ಚಿತ ವಿಳಂಬದ ಸಾಧ್ಯತೆ ಇಲ್ಲವೇ ಇಲ್ಲ.

ಇಎಂಐ ಜತೆಗೆ ಬಾಡಿಗೆ ಹೊರೆ ತಪ್ಪುತ್ತದೆ: ಫ್ಲ್ಯಾಟ್‌ಗಳ ಹಸ್ತಾಂತರ ವಿಳಂಬವಾದಾಗ ಒಂದು ಕಡೆ ಬಾಡಿಗೆ ಮನೆ ವೆಚ್ಚ ಮತ್ತೊಂದು ಕಡೆ ಫ್ಲ್ಯಾಟ್‌ಗಾಗಿ ಮಾಡಿರುವ ಸಾಲದ ಸಮಾನ ಮಾಸಿಕ ಕಂತನ್ನು (ಇಎಂಐ) ಹೂಡಿಕೆದಾರನನ್ನು ಬಾಧಿಸುತ್ತದೆ. ಫ್ಲ್ಯಾಟ್‌ನ ಹಸ್ತಾಂತರ ವಿಳಂಬವಾದರೆ ಬ್ಯಾಂಕ್ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ‘ಇಎಂಐ’ ನಿಗದಿತ ಸಮಯಕ್ಕೆ ಸರಿಯಾಗಿ ನೀವು ಪಾವತಿಸಲೇಬೇಕಾಗುತ್ತದೆ. ಸಾಲದ ಕಂತು ಪಾವತಿಸದಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮವಾಗುತ್ತದೆ. ಆದರೆ ವಾಸಕ್ಕೆ ಸಿದ್ಧವಾಗಿರುವ ಫ್ಲ್ಯಾಟ್ ಕೊಂಡಾಗ ಈ ಸಮಸ್ಯೆಯಿಲ್ಲ.

ಆದಾಯ ತೆರಿಗೆ ಅನುಕೂಲ: ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಗೃಹ ಸಾಲ ಪಡೆದ ವ್ಯಕ್ತಿಯು ಸಾಲದ ಅಸಲು ಪಾವತಿ ಮೊತ್ತಕ್ಕೆ ಸೆಕ್ಷನ್ 80 ಅಡಿಯಲ್ಲಿ ₹ 1.5 ಲಕ್ಷದ ವರೆಗೆ ವಾರ್ಷಿಕ ವಿನಾಯ್ತಿ ಪಡೆದುಕೊಳ್ಳಬಹುದು. ಇದಲ್ಲದೆ ಸಾಲದ ಮೇಲಿನ ಬಡ್ಡಿ ಪಾವತಿಗೆ ಸೆಕ್ಷನ್ 24( ಬಿ) ಅಡಿಯಲ್ಲಿ ₹ 2 ಲಕ್ಷದವರೆಗೆ ವಿನಾಯ್ತಿ ಸಿಗುತ್ತದೆ. ಆದರೆ, ಈ ತೆರಿಗೆ ವಿನಾಯ್ತಿ ಪಡೆಯಬೇಕಾದರೆ ಫ್ಲ್ಯಾಟ್ ನಿರ್ಮಾಣವಾಗಿ ಅದು ನಿಮ್ಮ ಸ್ವಾಧೀನದಲ್ಲಿರಬೇಕು. ಕಟ್ಟಡ ನಿರ್ಮಾಣ 5 ವರ್ಷಗಳಿಗಿಂತ ವಿಳಂಬವಾದರೆ ನಿಮಗೆ ₹ 2 ಲಕ್ಷದ ಸಾಲದ ಮೇಲಿನ ಬಡ್ಡಿ ಪಾವತಿಗೆ ಇರುವ ಮಿತಿ ಕೇವಲ ₹ 30 ಸಾವಿರಕ್ಕೆ ಇಳಿಯುತ್ತದೆ. ಇದರಿಂದ ನಷ್ಟ ಹೆಚ್ಚು.

ಜಿಎಸ್‌ಟಿ ಇಲ್ಲ: ನಿರ್ಮಾಣ ಹಂತದಲ್ಲಿ ಸಾಮಾನ್ಯ ಕಟ್ಟಡಗಳಿಗೆ ಶೇ 12 ರಷ್ಟು ಜಿಎಸ್‌ಟಿಯನ್ನು (ಇನ್‌ಪುಟ್ ಕ್ರೆಡಿಟ್ ಸೇರಿ) ಬಿಲ್ಡರ್‌ಗಳು ವಿಧಿಸಬಹುದು. ಕೈಗೆಟುಕುವ ದರದ ಕಟ್ಟಡಗಳಿಗೆ (ಇನ್‌ಪುಟ್ ಕ್ರೆಡಿಟ್ ಸೇರಿ) ಶೇ 8 ರಷ್ಟು ಜಿಎಸ್‌ಟಿ ವಿಧಿಸಬಹುದು. ಆದರೆ, ವಾಸಕ್ಕೆ ಸಿದ್ಧವಾಗಿರುವ ಫ್ಲ್ಯಾಟ್ ಖರೀದಿಸಿದರೆ ಜಿಎಸ್‌ಟಿ ಅನ್ವಯಿಸುವುದಿಲ್ಲ.

ನಿರ್ಮಾಣ ಹಂತದ ಫ್ಲ್ಯಾಟ್‌ ನಿಮ್ಮ ಆದ್ಯತೆ ಆದರೆ, ಗಮನಿಸಿ: ಪ್ರಮುಖ ಡೆವಲಪರ್‌ಗಳು ನಿರ್ಮಿಸುವ ಫ್ಲ್ಯಾಟ್‌ಗಳ ಬಗ್ಗೆ ಮಾತ್ರ ಗಮನಹರಿಸಿ. ‘ರೇರಾ’ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿದೆಯೇ ತಿಳಿಯಿರಿ. ನಿರ್ಮಾಣ ಹಂತದ ಫ್ಲಾಟ್ ಖರೀದಿಸುವಾಗ ಕಾಮಗಾರಿ ಶೇ 30 ರಿಂದ ಶೇ 50 ರವರೆಗೆ ಪೂರ್ಣಗೊಂಡಿರುವುದನ್ನು ಪರಿಗಣಿಸಿ. ಕಟ್ಟಡ ನಿರ್ಮಾಣ ಹಂತದಲ್ಲಿರುವಾಗ ಆಗಾಗ ಸೈಟ್‌ಗೆ ಭೇಟಿ ನೀಡಿ. ಉತ್ತಮ ಬೆಲೆಯಲ್ಲಿ ಫ್ಲ್ಯಾಟ್ ಖರೀದಿಸಲು ಚೌಕಾಶಿ ಮಾಡಲು ಮರೆಯಬೇಡಿ. ಷರತ್ತುಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ಮುನ್ನಡೆಯಿರಿ.

ಪೇಟೆಯ ಓಟಕ್ಕೆ ಮೂಡೀಸ್ ಮೂಗುದಾರ
ದಾಖಲೆ ಮೇಲೆ ದಾಖಲೆಗಳನ್ನು ಬರೆದ ಷೇರುಪೇಟೆ ಸೂಚ್ಯಂಕಗಳಿಗೆ ಮೂಡೀಸ್ ರೇಟಿಂಗ್ ಏಜೆನ್ಸಿ ಮೂಗುದಾರ ಹಾಕಿದೆ. ಭಾರತದ ಆರ್ಥಿಕ ವೃದ್ಧಿ ದರ ಸ್ಥಿರವಲ್ಲ, ನಕಾರಾತ್ಮಕ ಎಂದು ಮೂಡೀಸ್ ಹೇಳಿದ ಪರಿಣಾಮ 40,749 ಅಂಶಗಳಷ್ಟು ಏರಿಕೆ ದಾಖಲಿಸಿದ್ದ ಸೆನ್ಸೆಕ್ಸ್ ಒಂದೇ ದಿನ 330 ಅಂಶಗಳಷ್ಟು ಕುಸಿತ ಕಂಡಿದೆ. 40,323 ರಲ್ಲಿ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.4 ರಷ್ಟು ಮಾತ್ರ ಏರಿಕೆ ದಾಖಲಿಸಿದೆ. 11,908 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ವಾರದ ಕೊನೆಗೆ ಶೇ 0.2 ರಷ್ಟು ಜಿಗಿದಿದೆ.

ವಲಯವಾರು: ‘ನಿಫ್ಟಿ’ ಮಧ್ಯಮ ಶ್ರೇಣಿ ಸೂಚ್ಯಂಕ ಶೇ 1 ರಷ್ಟು ಕುಸಿದಿದೆ. ಬ್ಯಾಂಕ್, ಲೋಹ, ರಿಯಲ್ ಎಸ್ಟೇಟ್ ಶೇ 3.6 ರಷ್ಟು ಏರಿಕೆ ಕಂಡಿವೆ. ವಾಹನ ತಯಾರಿಕೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಎಫ್‌ಎಂಸಿಜಿ ಶೇ 4.5 ರಷ್ಟು ತಗ್ಗಿವೆ.

ಗಳಿಕೆ- ಇಳಿಕೆ: ಭಾರ್ತಿ ಇನ್ಫ್ರಾಟೆಲ್ ವಾರದ ಅವಧಿಯಲ್ಲಿ ಶೇ 8 ರಷ್ಟು ಏರಿಕೆ ಕಂಡಿದೆ. ಐಸಿಐಸಿಐ ಬ್ಯಾಂಕ್ , ಹಿಂಡಾಲ್ಕೊ, ಬಜಾಜ್ ಫಿನ್ಸ್ ಸರ್ವ್, ಜೆಎಸ್‌ಡಬ್ಲ್ಯು ಸ್ಟೀಲ್ ಸುಮಾರು ಶೇ 5 ರಿಂದ ಶೇ 6 ರಷ್ಟು ಏರಿಕೆ ಕಂಡಿವೆ. ಚೀನಾ ಮತ್ತು ಅಮೆರಿಕ ನಡುವಣ ವ್ಯಾಪಾರ ಒಪ್ಪಂದ ಸಕಾರಾತ್ಮಕ ಹಾದಿಯಲ್ಲಿ ಸಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ಲೋಹ ವಲಯದ ಷೇರುಗಳು ಹೆಚ್ಚಳ ಕಂಡಿವೆ.

ನಿರೀಕ್ಷೆಗಿಂತ ಕಡಿಮೆ ಗಳಿಕೆ ವರಮಾನದಾಖಲಿಸಿದ ಪರಿಣಾಮ ಟೈಟಾನ್ ಶೇ 11 ರಷ್ಟು ಕುಸಿದಿದೆ. ಜೀ ಎಂಟರ್ ಟೇನ್‌ಮೆಂಟ್ ಶೇ 7 ರಷ್ಟು ತಗ್ಗಿದೆ. ಇಂಡಿಯನ್ ಆಯಿಲ್, ಗೇಲ್, ಯುಪಿಎಲ್, ಮಾರುತಿ ಸುಜುಕಿ ಮತ್ತು ಹಿಂದೂಸ್ಥಾನ್ ಯುನಿಲಿವರ್ ಕೂಡ ಕುಸಿದಿವೆ.

ಮುನ್ನೋಟ: ಈ ವಾರ ಬ್ರಿಟಾನಿಯಾ, ಅದಾನಿ, ಕೋಲ್ ಇಂಡಿಯಾ, ಹಿಂಡಾಲ್ಕೊ, ಗ್ರಾಸಿಮ್, ಒಎನ್‌ಜಿಸಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಕೈಗಾರಿಕೆ ಉತ್ಪಾದನೆ, ಆಮದು- ರಫ್ತು ದತ್ತಾಂಶ ಹೊರಬೀಳಲಿವೆ. ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಸಗಟು ಬೆಲೆ ಸೂಚ್ಯಂಕದ ಮಾಹಿತಿ ಸಿಗಲಿದೆ. ಈ ಮೇಲಿನ ಸಂಗತಿಗಳ ಜತೆಗೆ ಮೂಡೀಸ್ ರೇಟಿಂಗ್ ಸೇರಿ, ಜಾಗತಿಕ ವಿದ್ಯಮಾನಗಳು ಕೂಡ ಪೇಟೆಯ ಮೇಲೆ ಪ್ರಭಾವ ಬೀರಲಿವೆ.

ವಾರದ ಬೆಳವಣಿಗೆಗಳು
*ಹೂಡಿಕೆ ತಜ್ಞ ರಾಕೇಶ್ ಜುನ್‌ಜುನ್‌ವಾಲಾ, ಯೆಸ್ ಬ್ಯಾಂಕ್‌ನಲ್ಲಿ ಶೇ 0.5 ರಷ್ಟು ಪಾಲುದಾರಿಕೆ ಪಡೆದಿದ್ದಾರೆ
*ಅಮೆರಿಕದ ಫುಡ್ ಕಂಪನಿ ಬರ್ಗರ್ ಕಿಂಗ್ ಆರಂಭಿಕ ಸಾರ್ವಜನಿಕ ಬಂಡವಾಳಕ್ಕೆ (ಐಪಿಒ) ತಯಾರಿ ಆರಂಭಿಸಿದೆ
*ಹಂತ ಹಂತವಾಗಿ ವ್ಯಾಪಾರ ಶುಲ್ಕವನ್ನು ಹಿಂದೆಪಡೆಯಲು ಅಮೆರಿಕ ಮತ್ತು ಚೀನಾ ಒಪ್ಪಿವೆ
*ದೇವರು ಕೂಡ ಇನ್ಫೊಸಿಸ್‌ನ ಲೆಕ್ಕವನ್ನು ಬದಲಿಸಲು ಸಾಧ್ಯವಿಲ್ಲ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ನಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.