ADVERTISEMENT

ದುಡ್ಡುಕಾಸು | ತುರ್ತುನಿಧಿ ಇಲ್ಲದಿದ್ರೆ ಏನ್ಮಾಡ್ಬೇಕು?

ಕ್ಲಿಯೋನ್ ಡಿಸೋಜ
Published 27 ಏಪ್ರಿಲ್ 2020, 2:06 IST
Last Updated 27 ಏಪ್ರಿಲ್ 2020, 2:06 IST
ಸಾಂದರ್ಭಿಕ ವಿತ್ರ
ಸಾಂದರ್ಭಿಕ ವಿತ್ರ   
""

ತುರ್ತು ನಿಧಿಯುಸಂಕಷ್ಟ ಕಾಲದ ಆಪತ್ಬಾಂಧವನಂತೆ. ಬಳಿಯಲ್ಲಿ ತುರ್ತು ನಿಧಿ ಇಲ್ಲದಿದ್ದರೆ ಹಣಕಾಸು ಬಿಕ್ಕಟ್ಟಿನಿಂದ ಪಾರಾಗುವುದು ಹೇಗೆ. ‘ಕೋವಿಡ್-19’ನಿಂದ ಸೃಷ್ಟಿಯಾಗಿರುವ ಆರ್ಥಿಕ ಸ್ಥಿತಿಯಲ್ಲಿ ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ ಇದು. ಈ ಸಮಸ್ಯೆಗೆ ಪರಿಹಾರ ಒದಗಿಸುವ ಮಾಹಿತಿ ಇಲ್ಲಿದೆ.

ಸಾಲದಿಂದ ಮೊದಲು ಋಣಮುಕ್ತರಾಗಿ:ಬದುಕಿನ ಹಾದಿಯಲ್ಲಿ ಎದುರಾಗುವ ಅನಿಶ್ಚಿತ ಸಂದರ್ಭಗಳನ್ನು ಎದುರಿಸಲು ಪ್ರತಿಯೊಬ್ಬರೂ ಕನಿಷ್ಠ 6 ತಿಂಗಳ ತುರ್ತು ನಿಧಿ ಇಟ್ಟುಕೊಳ್ಳಬೇಕು ಎನ್ನುವುದು ಹಣಕಾಸು ತಜ್ಞರು ನೀಡುವ ಸಲಹೆ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಏರಿಳಿತಗಳಿದ್ದರೆ ಒಂದು ವರ್ಷಕ್ಕೆ ಬೇಕಾಗುವಷ್ಟು ಹಣವನ್ನು ತುರ್ತು ನಿಧಿಯಲ್ಲಿ ಇಟ್ಟುಕೊಳ್ಳುವುದು ಅವಶ್ಯ. ಆದರೆ, ಅನಿವಾರ್ಯ ಕಾರಣಗಳಿಂದ ತುರ್ತು ನಿಧಿ ಸ್ಥಾಪನೆ ಸಾಧ್ಯವಾಗಿಲ್ಲದಿದ್ದರೆ, ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯುವುದು ಬಹಳ ಮುಖ್ಯ. ನೀವು ಗೃಹ ಸಾಲ, ವಾಹನ ಸಾಲ, ಕ್ರೆಡಿಟ್ ಕಾರ್ಡ್ ಸಾಲ ಅಥವಾ ಇನ್ಯಾವುದೇ ಸಾಲ ಪಡೆದಿದ್ದು ಕೋವಿಡ್ ನಿಂದಾಗಿ ನಿರ್ದಿಷ್ಟ ಆದಾಯ ಬರುತ್ತಿಲ್ಲ ಅಥವಾ ಉದ್ಯೋಗ ನಷ್ಟವಾಗಿದೆ ಎಂದಾದರೆ, ನೀವು ಮೊದಲು ಸಾಲದ ಅಸಲಿನ ಮೊತ್ತವನ್ನು ತೀರಿಸುವ ಗಟ್ಟಿ ಮನಸ್ಸು ಮಾಡಬೇಕು.

ಅಯ್ಯೋ ಅಷ್ಟು ದೊಡ್ಡ ಮೊತ್ತದ ಹಣವನ್ನು ಒಂದೇ ಬಾರಿ ಹೊಂದಿಸುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಿಮ್ಮ ಉಳಿತಾಯ ಖಾತೆ, ಫಿಕ್ಸೆಡ್ ಡೆಪಾಸಿಟ್, ಬಂಗಾರ, ಡೆಟ್ ಫಂಡ್‌ ಗಳು, ಪಿಎಫ್ ಹಣ, ಇನ್ಶುರೆನ್ಸ್ ಮೆಚ್ಯೂರಿಟಿ ಹಣ ಹೀಗೆ ಎಲ್ಲಿ ಸಾಧ್ಯವೋ ಅಲ್ಲಿಂದೆಲ್ಲಾ ಹಣ ಹೊಂದಿಸಿ ಸಾಲ ಕಟ್ಟಿಬಿಡಬೇಕು.

ADVERTISEMENT

ಹೀಗೆ ಮಾಡಿದಾಗ ನಿಮಗೆ ಪ್ರತಿ ತಿಂಗಳೂ ದೊಡ್ಡ ಮೊತ್ತದ ಹಣವನ್ನು ಸಮಾನ ಮಾಸಿಕ ಕಂತು (ಇಎಂಐ) ಕಟ್ಟುವ ಗೋಜು ಇರುವುದಿಲ್ಲ. ಕೋವಿಡ್ ನಿಂದ ತತ್ತರಿಸಿರುವ ಆರ್ಥಿಕತೆ ಸರಿದಾರಿಗೆ ಬರಲು ಎಷ್ಟು ದಿನಗಳು ಬೇಕೋ ಎನ್ನುವ ಬಗ್ಗೆ ಯಾರಿಗೂ ಯಾವ ಅಂದಾಜು ಕೂಡ ಇಲ್ಲ. ಹೀಗಾಗಿ ಈಗಾಗಲೇ ಇರುವ ಸಾಲ ತೀರಿಸಲು ಮತ್ತೊಂದು ಸಾಲ ಮಾಡಿಕೊಂಡರೆ ನಿಮಗೆ ಕಷ್ಟವಾಗುತ್ತದೆ. ದಿನಕಳೆದಂತೆ ಒಂದು ‘ಇಎಂಐ’ ಕಟ್ಟುವ ಜಾಗದಲ್ಲಿ ಎರಡೆರಡು ‘ಇಎಂಐ’ ಹೊಂದಿಸುವ ತಲೆಬಿಸಿ ಶುರುವಾಗುತ್ತದೆ. ಆಗ ದಿನನಿತ್ಯದ ಖರ್ಚುಗಳನ್ನು ನಿಭಾಯಿಸಲು ನೀವು ಹೆಣಗಾಡಬೇಕಾಗುತ್ತದೆ.

ಈಗಲಾದರೂ ತುರ್ತು ನಿಧಿ ಸ್ಥಾಪಿಸಿ:ನೀವು ಹಣವನ್ನು ಉಳಿಸಿದರೆ, ಹಣ ನಿಮ್ಮನ್ನು ಉಳಿಸುತ್ತದೆ ಎನ್ನುವ ಮಾತಿದೆ. ಆದರೆ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದಾಗ ಬಹುತೇಕರು ಉಳಿತಾಯ ಮಾಡಿ ತುರ್ತು ನಿಧಿ ಸ್ಫಾಪನೆ ಮಾಡುವುದಿಲ್ಲ. ಉದ್ಯೋಗ ನಷ್ಟ, ತುರ್ತು ವೈದ್ಯಕೀಯ ವೆಚ್ಚ ಸೇರಿದಂತೆ ಹಲವು ಸಂದರ್ಭಗಳಿಗೆ ತುರ್ತು ನಿಧಿ ನಿಮ್ಮ ನೆರವಿಗೆ ಬರುತ್ತದೆ. ಕೋವಿಡ್ ಸಂಕಷ್ಟದ ಕಾಲದಲ್ಲೂ ನಿಮಗೆ ನಿರ್ದಿಷ್ಟ ಆದಾಯ ಬರುತ್ತಿದ್ದರೆ ಕೂಡಲೇ ತುರ್ತು ನಿಧಿ ಸ್ಥಾಪನೆ ಮಾಡಿಕೊಳ್ಳಿ.

ಕನಿಷ್ಠ 6 ತಿಂಗಳ ಖರ್ಚನ್ನು ಸುಲಭದಲ್ಲಿ ಸಿಗುವ ಹೂಡಿಕೆಗಳಲ್ಲಿ ತೊಡಗಿಸಿ. ಅನಿಶ್ಚಿತ ವಲಯಗಳಲ್ಲಿ ನೀವು ಉದ್ಯೋಗದಲ್ಲಿದ್ದರೆ ಕನಿಷ್ಠ 1 ವರ್ಷದ ತುರ್ತು ನಿಧಿ ಇರಲಿ. ಫಿಕ್ಸೆಡ್ ಡೆಪಾಸಿಟ್, ಸೇವಿಂಗ್ಸ್ ಬ್ಯಾಂಕ್ ಅಕೌಂಟ್, ಸೇಫ್ ಡೆಟ್ ಫಂಡ್ ಗಳು, ಸಾಂಪ್ರದಾಯಿಕ ಹೈಬ್ರೀಡ್ ಫಂಡ್‌ಗಳಲ್ಲಿ ಹಣ ತೊಡಗಿಸಿ. ಹೀಗೆ ಮಾಡುವುದರಿಂದ ಸಂಕಷ್ಟದ ಕಾಲದಲ್ಲಿ ಅನಗತ್ಯವಾಗಿ ಸಾಲ ಮಾಡಿ ಆರ್ಥಿಕ ಹೊರೆ ಹೊರುವುದನ್ನು ತಪ್ಪಿಸಬಹುದು.

ಕಾದು ನೋಡುವ ತಂತ್ರಕ್ಕೆ ಪೇಟೆ ಶರಣು

ಕಳೆದ ಎರಡು ವಾರಗಳಲ್ಲಿ ಚೇತರಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಏಪ್ರಿಲ್ 24 ಕ್ಕೆ ಕೊನೆಗೊಂಡ ವಾರದಲ್ಲಿ ಹಿನ್ನಡೆ ಅನುಭವಿಸಿವೆ. ‘ಕೋವಿಡ್-19’ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ, ಆರ್ಥಿಕ ಚೇತರಿಕೆಗೆ ಮತ್ತೊಂದು ಪ್ಯಾಕೇಜ್ ಘೋಷಣೆಯಲ್ಲಿ ವಿಳಂಬ ಸೇರಿ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ. 31,327 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.83 ರಷ್ಟು ಕುಸಿತ ಕಂಡಿದೆ. 9,154 ಅಂಶಗಳಲ್ಲಿ ವಹಿವಾಟು ಪೂರೈಸಿರುವ ನಿಫ್ಟಿ, ವಾರಾಂತ್ಯಕ್ಕೆ ಶೇ 1.2 ರಷ್ಟು ತಗ್ಗಿದೆ.

ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಮೇ 3 ರ ಬಳಿಕವೂ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿರುವುದರಿಂದ ಅದರ ನೇರ ಪರಿಣಾಮ ಜೂನ್ ಅಂತ್ಯದ ತ್ರೈಮಾಸಿಕ ಫಲಿತಾಂಶಗಳ ಮೇಲೆ ಬೀಳಲಿದೆ. ಈ ನಡುವೆ ಫ್ರ್ಯಾಂಕ್ಲಿನ್ ಟೆಂಪಲ್ಟನ್ ಫಂಡ್‌ಗಳನ್ನು ರದ್ದು ಮಾಡಿ ಹೂಡಿಕೆಗಳನ್ನು ತಡೆ ಹಿಡಿದಿರುವುದು, ತೈಲ ಬೆಲೆ ಇಳಿಕೆಯಿಂದ ಸಹ ಮಾರುಕಟ್ಟೆ ಒತ್ತಡಕ್ಕೆ ಸಿಲುಕಿದೆ.

ಜಾಗತಿಕ ಮಾರುಕಟ್ಟೆಗಳಲ್ಲೂ ಹೂಡಿಕೆದಾರರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ತ್ರೈಮಾಸಿಕ ಫಲಿತಾಂಶಗಳು ಪ್ರಕಟಗೊಳುತ್ತಿರುವುದರಂದ ಪ್ರಸಕ್ತ ವಾರದಲ್ಲಿ ಕಂಪನಿಗಳ ಫಲಿತಾಂಶ ಆಧಾರಿತ ಖರೀದಿ, ಮಾರಾಟ ನಿರೀಕ್ಷಿಸಬಹುದಾಗಿದೆ.
ಪೇಟೆಯಲ್ಲಿನ ಹಿಂಜರಿತ ವಾತಾವರಣದ ನಡುವೆ ಬಿಎಸ್ಇ 500 ಸೂಚ್ಯಂಕದಲ್ಲಿ ಐಎಫ್‌ಬಿ ಇಂಡಸ್ಟ್ರೀಸ್, ನವನೀತ್ ಎಜುಕೇಷನ್, ಎಚ್‌ಇಜಿ, ಅರಬಿಂದೊ ಫಾರ್ಮಾ, ದೀವಾನ್ ಹೌಸಿಂಗ್, ಮುತ್ತೂಟ್ ಫೈನಾನ್ಸ್, ಗ್ರಾಫೈಟ್ ಇಂಡಿಯಾ, ಯುಕೊ ಬ್ಯಾಂಕ್, ರಿಲಯನ್ಸ್ ಕ್ಯಾಪಿಟಲ್ ಶೇ 10 ರಿಂದ ಶೇ 40 ರ ವರೆಗೆ ಏರಿಕೆ ಕಂಡಿವೆ. ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕದಲ್ಲಿ ಡೆನ್‌ನೆಟ್ ವರ್ಕ್ಸ್ , ಫ್ಯೂಚರ್‌ ಎಂಟರ್‌ಪ್ರೈಸಸ್, ರುಚಿ ಸೋಯಾ, ಸುವೆನ್ ಲೈಫ್, ಯುನಿಟೆಕ್, ಕ್ವಾಲಿಟಿ, ಎರೋಸ್ ಇಂಟರ್‌ ನ್ಯಾಷನಲ್ ಮೀಡಿಯಾ ಸೇರಿ ಪ್ರಮುಖ ಕಂಪನಿಗಳು ಶೇ 10 ರಿಂದ ಶೇ 40 ರಷ್ಟು ಜಿಗಿತ ಕಂಡಿವೆ.

ಮುನ್ನೋಟ:ಎಚ್‌ಡಿಎಎಫ್‌ಸಿ ಲೈಫ್, ಹಿಂದೂಸ್ಥಾನ್ ಯುನಿ ಲಿವರ್, ಆ್ಯಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಐಸಿಐಸಿಐ ಲೋಂಬಾರ್ಡ್, ಅಂಬುಜಾ ಸಿಮೆಂಟ್ಸ್, ಅದಾನಿ ಪವರ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ವಾರಾಂತ್ಯಕ್ಕೆ ವಾಹನ ಖರೀದಿ ದತ್ತಾಂಶವೂ ಬಿಡುಗಡೆಯಾಗಲಿದ್ದು, ಅದು ಲಾಕ್‌ಡೌನ್ ನಿಂದಾಗಿ ನಿರಾಸೆ ಮೂಡಿಸುವ ಸಾಧ್ಯತೆಯಿದೆ. ಬ್ಯಾಂಕ್ ಆಫ್ ಜಪಾನ್, ಫೆಡರಲ್ ರಿಸರ್ವ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಈ ವಾರ ಬಡ್ಡಿ ದರ ಪ್ರಕಟಿಸಲಿವೆ. ಈ ಎಲ್ಲಾ ಸಂಗತಿಗಳ ಜತೆಗೆ ಲಾಕ್‌ಡೌನ್ ಬಗ್ಗೆ ಸರ್ಕಾರದ ತೀರ್ಮಾನ, ಜಾಗತಿಕವಾಗಿ ಕೋವಿಡ್ ಸೋಂಕಿನ ಸ್ಥಿತಿಗತಿಯು ಮಾರುಕಟ್ಟೆ ಸೂಚ್ಯಂಕಗಳ ಹಾದಿ ನಿರ್ಧರಿಸಲಿವೆ.

ಏನು ಮಾಡಬೇಕು? ಏನು ಮಾಡಬಾರದು?

• ಪರಿಸ್ಥಿತಿ ಸುಧಾರಿಸುವವರೆಗೆ ಹೊಸ ಸಾಲಗಳನ್ನು ಮಾಡಬೇಡಿ.

• ಸದ್ಯಕ್ಕೆ ಮಾರುಕಟ್ಟೆ ಕುಸಿದಿರುವುದರಿಂದ ಷೇರು ಮಾರುಕಟ್ಟೆ ಹೂಡಿಕೆಗಳನ್ನು ಈಗಲೇ ಹಿಂದೆ ಪಡೆಯಬೇಡಿ. ಅನಿವಾರ್ಯ ಎಂದಾಗ ಮಾತ್ರ ಹಣ ತೆಗೆದುಕೊಳ್ಳಿ.

• ನಿಮಗೆ ಸದ್ಯದ ಸ್ಥಿತಿಯಲ್ಲಿ ನಿರ್ದಿಷ್ಟ ಮಾಸಿಕ ಆದಾಯವಿದ್ದರೆ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ಮುಂದುವರಿಸಿ, ಇಲ್ಲವಾದಲ್ಲಿ ಸ್ಥಗಿತಗೊಳಿಸಿ.

• ಅನಗತ್ಯ ಶಾಪಿಂಗ್ ಸೇರಿ ಇನ್ನಿತರ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

(ಕ್ಲಿಯೋನ್ ಡಿಸೋಜ ಲೇಖಕ, ಸುವಿಷನ್ ಹೋಲ್ಡಿಂಗ್ಸ್ ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.