ADVERTISEMENT

ಆರ್‌ಬಿಐ ರಿಟೇಲ್ ಡೈರೆಕ್ಟ್‌: ಹೂಡಿಕೆ ಹೇಗೆ?

ಪ್ರಮೋದ್
Published 26 ಡಿಸೆಂಬರ್ 2021, 18:58 IST
Last Updated 26 ಡಿಸೆಂಬರ್ 2021, 18:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸಣ್ಣ ಹೂಡಿಕೆದಾರರು ಸರ್ಕಾರಿ ಬಾಂಡ್‌ಗಳನ್ನು (ಸಾಲಪತ್ರ) ನೇರವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈಚೆಗೆ ಅವಕಾಶ ಕಲ್ಪಿಸಿದೆ. ಸರ್ಕಾರಿ ಸಾಲಪತ್ರಗಳ ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವುದನ್ನು ಪ್ರೋತ್ಸಾಹಿಸಲು ಈ ಕ್ರಮ. ಆರ್‌ಬಿಐನ ರಿಟೇಲ್ ಡೈರೆಕ್ಟ್ ಹೂಡಿಕೆ ಹೇಗೆ, ಅನುಕೂಲಗಳೇನು, ಮಿತಿಗಳೇನು, ಯಾರಿಗೆ ಈ ಹೂಡಿಕೆ ಸೂಕ್ತ ಎನ್ನುವ ಮಾಹಿತಿ ಇಲ್ಲಿದೆ.

ಪ್ರಮೋದ್ ಬಿ.ಪಿ.

ಏನಿವು ಸರ್ಕಾರಿ ಸಾಲಪತ್ರಗಳು?: ಸರ್ಕಾರದ ವಿವಿಧ ಕೆಲಸಗಳಿಗೆ ಹಣಕಾಸಿನ ಅಗತ್ಯ ಇರುತ್ತದೆ. ಇಂತಹ ಆರ್ಥಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸರ್ಕಾರ ಹೊರಡಿಸುವ ಪತ್ರಗಳೇ ಸಾಲಪತ್ರಗಳು ಅಥವಾ ಗವರ್ನಮೆಂಟ್ ಸೆಕ್ಯೂರಿಟಿಸ್. ಸರ್ಕಾರದಿಂದ ಸಾಲಪತ್ರಗಳನ್ನು ಖರೀದಿಸಿದವರಿಗೆ ನಿಯಮಿತವಾಗಿ ಬಡ್ಡಿ ಸಿಗುತ್ತದೆ. ಮೆಚ್ಯೂರಿಟಿ ಅವಧಿ ಬಳಿಕ ಹೊಡಿಕೆ ಮೊತ್ತ ವಾಪಸ್ ಸಿಗುತ್ತದೆ. ಸರಳವಾಗಿ ಹೇಳುವುದಾದರೆ ಕೇಂದ್ರ ಸರ್ಕಾರದ ಪರವಾಗಿ ಆರ್‌ಬಿಐ ವಿತರಿಸುವ ಬಾಂಡ್‌ಗಳನ್ನು ಸಾಲಪತ್ರಗಳು ಎನ್ನಬಹುದು. ರಾಜ್ಯ ಸರ್ಕಾರಗಳು ಕೂಡ ಈ ರೀತಿಯ ಬಾಂಡ್ಗಳನ್ನು ನೀಡಿ ಹಣ ಸಂಗ್ರಹಿಸಲು ಅವಕಾಶವಿದೆ.

ಆರ್‌ಬಿಐ ರಿಟೇಲ್ ಡೈರೆಕ್ಟ್‌ನಿಂದ ಯಾವ ಹೂಡಿಕೆ ಮಾಡಬಹುದು?: ಆರ್‌ಬಿಐ ರಿಟೇಲ್ ಡೈರೆಕ್ಟ್‌ನಿಂದ ಹೂಡಿಕೆದಾರರು ಪ್ರಮುಖ
ವಾಗಿ ನಾಲ್ಕು ರೀತಿಯ ಹೂಡಿಕೆ ಉತ್ಪನ್ನಗಳನ್ನು ಖರೀದಿಸಬಹುದು. ಕೇಂದ್ರ ಸರ್ಕಾರದ 91ರಿಂದ 364 ದಿನಗಳ ಅವಧಿಯ ಟ್ರೆಷರಿ ಬಿಲ್‌ ಗಳಲ್ಲಿ ಹೂಡಿಕೆ ಮಾಡಬಹುದು. ಕೇಂದ್ರ ಸರ್ಕಾರದ ದೀರ್ಘಾವಧಿ, ಅಂದರೆ 1 ವರ್ಷದಿಂದ 40 ವರ್ಷಗಳ ಅವಧಿಯ, ಬಾಂಡ್‌ಗಳಲ್ಲಿ ಹೂಡಿಕೆ ಸಾಧ್ಯ. ರಾಜ್ಯ ಸರ್ಕಾರಗಳು ವಿತರಿಸುವ 10 ವರ್ಷಗಳ ಬಾಂಡ್‌ಗಳಲ್ಲಿಯೂ ಹೂಡಿಕೆಗೆ ಅವಕಾಶವಿದೆ. ಇವಲ್ಲದೆ ಚಿನ್ನದ ಬಾಂಡ್‌ಗಳಲ್ಲಿಯೂ ಹಣ ತೊಡಗಿಸಬಹುದು.

ADVERTISEMENT

ಹೂಡಿಕೆ ಅನುಕೂಲಗಳು: ಸರ್ಕಾರದ ಸಾಲಪತ್ರಗಳಲ್ಲಿ ಹೂಡಿಕೆ ಮಾಡಿದಾಗ ರಿಸ್ಕ್ ಬಹಳ ಕಡಿಮೆಯಿದ್ದು ದೀರ್ಘಾವಧಿಯಲ್ಲಿ ಒಳ್ಳೆಯ ಲಾಭಾಂಶ ಗಳಿಸಲು ಸಾಧ್ಯವಿದೆ. ಹಾಗಾಗಿ ಕಡಿಮೆ ರಿಸ್ಕ್ ಇರಬೇಕು,ಒಳ್ಳೆಯ ಲಾಭಾಂಶವೂ ಸಿಗಬೇಕು ಎನ್ನುವವರಿಗೆ ಈ ಹೂಡಿಕೆ ಉತ್ಪನ್ನಗಳು ಒಳ್ಳೆಯ ಆಯ್ಕೆ. ಮುಕ್ತ ಮಾರುಕಟ್ಟೆಯಲ್ಲೂ ಈ ಹೂಡಿಕೆಗಳು ಚಲಾವಣೆಯಲ್ಲಿರುವುದರಿಂದ ನಗದೀಕರಣ ಅವಕಾಶವೂ ಇದೆ. ಹೂಡಿಕೆ ವೈವಿಧ್ಯತೆ ಕಾಯ್ದುಕೊಳ್ಳಲು ಸರ್ಕಾರಿ ಸಾಲಪತ್ರಗಳು ಒಳ್ಳೆಯ ಆಯ್ಕೆ.

ಆರ್‌ಡಿಜಿ ಖಾತೆಯ ಮೂಲಕವೇ ಏಕೆ?: ಆರ್‌ಬಿಐನ ರಿಟೇಲ್ ಡೈರೆಕ್ಟ್‌ ಗಿಲ್ಟ್ (ಆರ್‌ಡಿಜಿ) ಖಾತೆಯ ಮೂಲಕ ಖರೀದಿಸಿದರೆ ಯಾವುದೇ ಶುಲ್ಕ ಅಥವಾ ಬ್ರೋಕರೇಜ್ ಕಮಿಷನ್ ಕೊಡಬೇಕಿಲ್ಲ. ಅಲ್ಲದೆ, ಕೇವಲ ₹ 10 ಸಾವಿರದಿಂದ ಹೂಡಿಕೆ ಸಾಧ್ಯ. ಒಂದೇ ಒಂದು ಗ್ರಾಂ ಚಿನ್ನದ ಮೇಲೆ ಕೂಡ ಚಿನ್ನದ ಬಾಂಡ್‌ಗಳ ಮೂಲಕ ಹೂಡಿಕೆ ಮಾಡಬಹುದು. ನಿಮಗೆ ಬೇಕಾದಾಗ ಚಿನ್ನದ ಬಾಂಡ್ ಖರೀದಿಸಲು ಸಾಧ್ಯವಿದೆ.

ಹೂಡಿಕೆ ಎಷ್ಟು ಸುರಕ್ಷಿತ?: ಈ ಹೂಡಿಕೆಯಲ್ಲಿ ಹೆಚ್ಚು ರಿಸ್ಕ್ ಇಲ್ಲವಾದರೂ ಕೆಲವು ಮಿತಿಗಳಿವೆ. ಬಡ್ಡಿ ದರ ವ್ಯತ್ಯಾಸ, ಬೆಲೆ ಏರಿಕೆ, ಮಾರುಕಟ್ಟೆಯಲ್ಲಿ ನಗದು ಲಭ್ಯತೆ, ಆರ್‌ಬಿಐ ಹಣಕಾಸು ನೀತಿ ಹೀಗೆ ಹಲವು ಅಂಶಗಳು ಸಾಲಪತ್ರಗಳಲ್ಲಿನ ಹೂಡಿಕೆ ಲಾಭಾಂಶವನ್ನು ನಿರ್ಧರಿಸುತ್ತವೆ. ಸಾಮಾನ್ಯವಾಗಿ ಬಡ್ಡಿ ದರ ಜಾಸ್ತಿಯಾದಾಗ ಬಾಂಡ್ಗಳಿಕೆ ಇಳಿಕೆಯಾಗುತ್ತದೆ. ಬಡ್ಡಿ ದರ ಇಳಿಕೆಯಾದಾಗ ಬಾಂಡ್ ಗಳಿಕೆ ಹೆಚ್ಚಾಗುತ್ತದೆ. ವಿಚಿತ್ರ ಅನಿಸಿದರೂ ಇದು ಕೆಲಸ ಮಾಡುವುದು ಹೀಗೆಯೇ.

ಬಡ್ಡಿ ದರ ಹೆಚ್ಚಾದಾಗ ಹೊಸ ಬಾಂಡ್‌ಗಳನ್ನು ಹೆಚ್ಚಿನ ಬಡ್ಡಿ ದರಕ್ಕೆ ಬಿಡುಗಡೆ ಮಾಡಲಾಗುತ್ತದೆ. ಹೊಸ ಬಾಂಡ್‌ಗಳಿಂದ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆದರೆ ಈಗಾಗಲೇ ಹಳೆಯ ಬಾಂಡ್ ಖರೀದಿಸಿದವರಿಗೆ ಬಡ್ಡಿ ದರ ಹೆಚ್ಚು ಆಗುವುದಿಲ್ಲ. ಬಡ್ಡಿ ದರ ಇಳಿಕೆಯಾದಾಗ ಕಡಿಮೆ ಬಡ್ಡಿ ದರಕ್ಕೆ ಹೊಸ ಬಾಂಡ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹಳೆಯ ಬಾಂಡ್‌ಗಳಲ್ಲಿ ಹೆಚ್ಚಿಗೆ ಬಡ್ಡಿ ದರ ಇರುತ್ತದೆ. ಆದರೆ ಹೊಸ ಬಾಂಡ್‌ಗಳಲ್ಲಿ ಬಡ್ಡಿ ಕಡಿಮೆ ಇರುವ ಕಾರಣ ಬಾಂಡ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಈ ರೀತಿಯ ಮಿತಿ ಈ ಹೂಡಿಕೆಯಲ್ಲಿದೆ.

ಆರ್‌ಡಿಜಿ ಖಾತೆ ತೆರೆಯುವುದು ಹೇಗೆ?: ರಿಟೇಲ್ ಡೈರೆಕ್ಟ್ ಗಿಲ್ಟ್ ಖಾತೆ ತೆರೆಯಲು ಉಳಿತಾಯ ಖಾತೆ, ಪ್ಯಾನ್ ಕಾರ್ಡ್, ಆಧಾರ್, ಕೆವೈಸಿ ದಾಖಲೆಗಳು, ಇ–ಮೇಲ್ ವಿಳಾಸ ಮತ್ತು ಮೊಬೈಲ್ ನಂಬರ್ ಅಗತ್ಯ. ಮೊದಲು www.rbiretaildirect.org.inಗೆ ಲಾಗಿನ್ ಆಗಿ ನೋಂದಣಿ ಪ್ರಕ್ರಿಯೆ ಪೂರೈಸಿದ ಮೇಲೆ ಮೊಬೈಲ್ ಮತ್ತು ಇ–ಮೇಲ್‌ ಒಟಿಪಿ ವೆರಿಫಿಕೇಷನ್ ಆಗುತ್ತದೆ. ನಂತರ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ ನಾಮನಿರ್ದೇಶನ ಯಾರ ಹೆಸರಿಗೆ ಎಂಬುದನ್ನು ತಿಳಿಸಿ, ಬ್ಯಾಂಕ್ ಖಾತೆಯನ್ನು ಜೋಡಿಸಿದರೆ ನಿಮ್ಮ ಖಾತೆ ಹೂಡಿಕೆಗೆ ಸಿದ್ಧವಾಗುತ್ತದೆ.

ಅನಿಶ್ಚಿತತೆ ನಡುವೆ ಗಳಿಕೆ ಕಂಡ ಸೂಚ್ಯಂಕಗಳು

ಡಿಸೆಂಬರ್ 24ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಗಳಿಕೆಯ ಹಾದಿಗೆ ಮರಳಿವೆ. 57,124 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.07ರಷ್ಟು ಗಳಿಕೆ ಕಂಡಿದೆ. 17,003 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.06ರಷ್ಟು ಏರಿಕೆಯಾಗಿದೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ವಲಯ ಶೇ 2.95ರಷ್ಟು ಗಳಿಕೆ ಕಂಡಿದೆ. ಫಾರ್ಮಾ ವಲಯ ಶೇ 1.97ರಷ್ಟು, ಎಫ್‌ಎಂಸಿಜಿ ಶೇ 1.31ರಷ್ಟು, ಲೋಹ ವಲಯ ಶೇ 0.29ರಷ್ಟು ಮತ್ತು ರಿಯಲ್ ಎಸ್ಟೇಟ್ ಶೇ 0.28ರಷ್ಟು ಗಳಿಕೆ ಕಂಡಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.21ರಷ್ಟು, ನಿಫ್ಟಿ ಬ್ಯಾಂಕ್ ಶೇ 2.14ರಷ್ಟು, ಮಾಧ್ಯಮ ಶೇ 1.54ರಷ್ಟು, ಮಿಡ್ ಕ್ಯಾಪ್ ಶೇ 1.09ರಷ್ಟು, ವಾಹನ ವಲಯ ಶೇ 0.54ರಷ್ಟು ಇಳಿಕೆ ಕಂಡಿವೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಎಚ್‌ಸಿಎಲ್ ಟೆಕ್ ಶೇ 8.01ರಷ್ಟು, ಸಿಪ್ಲಾ ಶೇ 5.59ರಷ್ಟು, ಟೆಕ್ ಮಹೀಂದ್ರ ಶೇ 4.93ರಷ್ಟು, ಯುಪಿಸಿಎಲ್ ಶೇ 4.37ರಷ್ಟು ಮತ್ತು ವಿಪ್ರೊ ಶೇ 4.12ರಷ್ಟು ಗಳಿಕೆ ಕಂಡಿವೆ. ಎನ್‌ಟಿಪಿಸಿ ಶೇ 3.42ರಷ್ಟು, ಗ್ರಾಸಿಮ್ ಶೇ 3.30ರಷ್ಟು, ಬಿಪಿಸಿಎಲ್ ಶೇ 3.26ರಷ್ಟು, ಎಚ್‌ಡಿಎಫ್‌ಸಿ ಶೇ 3.16ರಷ್ಟು ಮತ್ತು ಎಕ್ಸಿಸ್ ಬ್ಯಾಂಕ್ ಶೇ 3.11ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಅಷ್ಟೇನೂ ಚಟುವಟಿಕೆ ನಿರೀಕ್ಷಿಸುವಂತಿಲ್ಲ. ಹೊಸ ವರ್ಷದಲ್ಲಿ ತ್ರೈಮಾಸಿಕ ಫಲಿತಾಂಶಗಳು ಆರಂಭವಾಗುವುದರಿಂದ ಅದರತ್ತ ಹೂಡಿಕೆದಾರರ ದೃಷ್ಟಿ ನೆಟ್ಟಿದೆ. ಓಮೈಕ್ರಾನ್ ಪ್ರಕರಣಗಳು ಮತ್ತು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.