ಎಷ್ಟೋ ಮಂದಿ ಜೀವ ವಿಮೆ (ಲೈಫ್ ಇನ್ಶೂರೆನ್ಸ್) ತೆಗೆದುಕೊಂಡಿರುತ್ತಾರೆ. ಆದರೆ, ವಿಮೆ ಪಡೆದಿರುವ ಬಗ್ಗೆ ಕುಟುಂಬದೊಂದಿಗೆ ಚರ್ಚೆ ಮಾಡುವುದಿಲ್ಲ. ಕ್ಲೇಮ್ ಪಡೆದುಕೊಳ್ಳುವಂತಹ ಅನಿಶ್ಚಿತ ಸಂದರ್ಭ ಒದಗಿ ಬಂದರೆ ಅದನ್ನು ಪಡೆಯುವುದು ಹೇಗೆ ಎನ್ನುವ ಬಗ್ಗೆಯೂ ಮನೆಯವರಿಗೆ ತಿಳಿಸಿರುವುದಿಲ್ಲ.
ಹೀಗಾಗಿ, ಅನೇಕರು ಇನ್ಶೂರೆನ್ಸ್ ಇದ್ದೂ ಸಹಿತ ಕ್ಲೇಮ್ ಪಡೆದುಕೊಳ್ಳಲು ಪರದಾಡುತ್ತಾರೆ. ಜೀವ ವಿಮೆ ಕ್ಲೇಮ್ ಪಡೆದುಕೊಳ್ಳುವುದು ಹೇಗೆ? ಯಾವ್ಯಾವ ದಾಖಲೆ ಸಲ್ಲಿಸಬೇಕು? ಎನ್ನುವ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿಯೋಣ.
ವಿವಿಧ ಮಾದರಿಯ ಪಾಲಿಸಿಗಳು:
ಟರ್ಮ್ ಲೈಫ್ ಇನ್ಶೂರೆನ್ಸ್, ಹೋಲ್ ಲೈಫ್ ಇನ್ಶೂರೆನ್ಸ್, ಎಂಡೋಮೆಂಟ್ ಪ್ಲಾನ್, ಯುಲಿಪ್ ಪ್ಲಾನ್, ಮನಿ ಬ್ಯಾಕ್, ಚೈಲ್ಡ್ ಇನ್ಶೂರೆನ್ಸ್ ಸ್ಕೀಂ ಹೀಗೆ ಜೀವ ವಿಮೆಗಳಲ್ಲಿ ಹಲವು ಮಾದರಿಗಳಿವೆ. ಆದರೆ, ಕಡಿಮೆ ಬೆಲೆಗೆ ಹೆಚ್ಚು ಕವರೇಜ್ ಕೊಡುವ ಇನ್ಶೂರೆನ್ಸ್ ಮಾದರಿ ಅಂದರೆ ಟರ್ಮ್ ಇನ್ಶೂರೆನ್ಸ್.
ಎಂಡೋಮೆಂಟ್, ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಜೊತೆಗೆ ಹೂಡಿಕೆಯೂ ಸೇರಿಕೊಂಡಿರುತ್ತದೆ. ಆದರೆ, ಈ ಮಾದರಿಯ ಇನ್ಶೂರೆನ್ಸ್ ಪಾಲಿಸಿಗಳಿಂದ ಹೆಚ್ಚಿನ ಕವರೇಜ್‌ನ ಅನುಕೂಲ ಸಿಗುವುದಿಲ್ಲ. ಹಾಗಾಗಿ, ಜೀವ ವಿಮೆ ಎನ್ನುವ ಪ್ರಶ್ನೆ ಬಂದಾಗ ಟರ್ಮ್ ಲೈಫ್ ಇನ್ಶೂರೆನ್ಸ್ ನಿಮ್ಮ ಮೊದಲ ಆದ್ಯತೆಯಾಗಬೇಕು. ಟರ್ಮ್ ಇನ್ಶೂರೆನ್ಸ್ ಪಡೆದಿರುವ ಕುಟುಂಬದ ಯಜಮಾನ ಅಥವಾ ಯಜಮಾನಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ ನಿರ್ದಿಷ್ಟ ಕುಟುಂಬಕ್ಕೆ ಹಣಕಾಸಿನ ನೆರವನ್ನು ಇನ್ಶೂರೆನ್ಸ್ ಕಂಪನಿ ಒದಗಿಸುತ್ತದೆ. ಒಂದು ರೀತಿಯಲ್ಲಿ ಟರ್ಮ್ ಇನ್ಶೂರೆನ್ಸ್ ಅನ್ನು ಆಪತ್ಕಾಲದ ಆಪ್ತಮಿತ್ರ ಎಂದು ಕರೆಯಬಹುದು.
ಕ್ಲೇಮ್ ಪ್ರಕ್ರಿಯೆ ಸರಾಗಗೊಳಿಸುವ ಅಂಶಗಳೇನು?:
* ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಕಟ್ಟಿ: ನೀವು ಸಮಯಕ್ಕೆ ಸರಿಯಾಗಿ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಿ. ಪ್ರೀಮಿಯಂ ಪಾವತಿ ವಿಳಂಬ ಮಾಡಿದರೆ ಅಥವಾ ಕಟ್ಟದಿದ್ದರೆ ಕ್ಲೇಮ್ ಸಿಗುವುದಿಲ್ಲ.
* ಅನಾರೋಗ್ಯದ ಬಗ್ಗೆ ಮಾಹಿತಿ ಒದಗಿಸಿ: ಲೈಫ್ ಇನ್ಶೂರೆನ್ಸ್ ಅದರಲ್ಲೂ ಟರ್ಮ್ ಇನ್ಶೂರೆನ್ಸ್ ಪಡೆಯುವಾಗ ಅರ್ಜಿಯಲ್ಲಿ ನಿಮಗೆ ಈಗಾಗಲೇ ಏನಾದರೂ ಅನಾರೋಗ್ಯದ ಸಮಸ್ಯೆಗಳಿದ್ದರೆ ಅದರಲ್ಲಿ ಸೂಚಿಸುವಂತೆ ತಿಳಿಸಲಾಗಿರುತ್ತದೆ. ಅದನ್ನು ಹೇಳದೆ ಗೋಪ್ಯವಾಗಿಟ್ಟರೆ ಇನ್ಶೂರೆನ್ಸ್ ಕ್ಲೇಮ್
ಸಿಗದಂತಾಗುವ ಸಾಧ್ಯತೆ ಇರುತ್ತದೆ.
* ಕುಟುಂಬಕ್ಕೆ ಪಾಲಿಸಿ ವಿವರ ತಿಳಿಸಿ: ಇನ್ಶೂರೆನ್ಸ್ ಪಡೆದಿರುವ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿ. ಪಾಲಿಸಿ ಸಂಖ್ಯೆ, ನಾಮಿನಿ ಇನ್ನಿತರೆ ವಿವರಗಳನ್ನು ಕೊಟ್ಟಿರಿ. ಕುಟುಂಬದವರಿಗೆ ಈ ಮಾಹಿತಿ ಗೊತ್ತಿದ್ದರೆ ಸಮಯಕ್ಕೆ ಸರಿಯಾಗಿ ಕ್ಲೇಮ್ ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ. ನೆನಪಿಡಿ, ಇನ್ಶೂರೆನ್ಸ್ ಮಾಡಿಸಿದ್ದರೂ ಅದನ್ನು ಕ್ಲೇಮ್ ಮಾಡದಿದ್ದರೆ ನಿಮ್ಮ ಪ್ರೀತಿ ಪಾತ್ರರಿಗೆ ಹಣ ಸಿಗುವುದಿಲ್ಲ.
* ನಾಮಿನಿ ಮಾಹಿತಿ ನೀಡಿ: ಇನ್ಶೂರೆನ್ಸ್ ಮಾಡಿಸುವಾಗ ನಾಮಿನಿಯ ಹೆಸರು, ವಯಸ್ಸು ಮುಂತಾದ ವಿವರಗಳನ್ನು ಸರಿಯಾಗಿ ನಮೂದಿಸಿ. ಇದರಿಂದ ಸಂಕಷ್ಟದ ಸಂದರ್ಭಗಳಲ್ಲಿ ಕ್ಲೇಮ್ ಪ್ರಕ್ರಿಯೆ ಸರಳವಾಗುತ್ತದೆ.
* ಕ್ಲೇಮ್ ಸಲ್ಲಿಸುವ ಪ್ರಕ್ರಿಯೆ: ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿ ಮೃತಪಟ್ಟ ನಂತರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಇನ್ಶೂರೆನ್ಸ್ ಕಂಪನಿಗೆ ಮಾಹಿತಿ ನೀಡಿ. ಸಾಮಾನ್ಯವಾಗಿ ಇನ್ಶೂರೆನ್ಸ್ ಕಂಪನಿಗಳು ವ್ಯಕ್ತಿ ಸಾವನ್ನಪ್ಪಿದ 30 ದಿನದ ಒಳಗಾಗಿ ಕ್ಲೇಮ್ ಪ್ರಕ್ರಿಯೆ ಜಾರಿಗೊಳಿಸುವಂತೆ ಸೂಚಿಸುತ್ತವೆ. ಆದರೆ, ಒಂದು ಕಂಪನಿಯಿಂದ ಮತ್ತೊಂದಕ್ಕೆ ಈ ದಿನಗಳ ಮಿತಿ ಬದಲಾಗುತ್ತದೆ.
ಇನ್ಶೂರೆನ್ಸ್ ಕಂಪನಿಗೆ ವಿಮೆ ಹೊಂದಿರುವ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಗ್ರಾಹಕ ಸೇವಾ ಕೇಂದ್ರದ ಮೂಲಕ, ವಿಮಾ ಕಚೇರಿಗೆ ಭೇಟಿ ನೀಡುವ ಮೂಲಕ ಅಥವಾ ಇ- ಮೇಲ್ ಮುಖಾಂತರ ಮಾಹಿತಿ ನೀಡಬಹುದು. ಏಜೆಂಟರ ಮೂಲಕ ಇನ್ಶೂರೆನ್ಸ್ ಪಡೆದಿದ್ದರೆ ಅವರ ಮೂಲಕವೂ ಈ ಮಾಹಿತಿ ಕೊಡಬಹುದು.
ಇನ್ಶೂರೆನ್ಸ್ ಕ್ಲೇಮ್ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಮಾಹಿತಿ ನಿರ್ದಿಷ್ಟ ಇನ್ಶೂರೆನ್ಸ್ ಕಂಪನಿಗಳ ವೆಬ್‌ಸೈಟ್‌ನಲ್ಲಿ ಇರುತ್ತದೆ. ಸಾಮಾನ್ಯವಾಗಿ ವಿಮಾ ಪಾಲಿಸಿಯ ನೈಜ ದಾಖಲೆ, ಮರಣ ಪ್ರಮಾಣ ಪತ್ರ, ಡೆತ್ ಕ್ಲೇಮ್ ಅರ್ಜಿ, ಕ್ಯಾನ್ಸಲ್ಡ್ ಚೆಕ್, ನಾಮಿನಿಯ ಕೆವೈಸಿ ದಾಖಲೆಗಳ ಜೊತೆಗೆ ನಾಮಿನಿಯ ಆಧಾರ್, ಪಾನ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ ಅಥವಾ ಇನ್ಯಾವುದೇ ಸರ್ಕಾರಿ ಗುರುತಿನ ಚೀಟಿ ನೀಡಬಹುದು.
ವೈದ್ಯಕೀಯ ಕಾರಣಗಳಿಂದ ಅಥವಾ ಸಹಜವಾಗಿ ವ್ಯಕ್ತಿ ಸಾವನ್ನಪ್ಪಿದರೆ, ವೈದ್ಯರ ಹೇಳಿಕೆ, ಆಸ್ಪತ್ರೆಗೆ ದಾಖಲಾದ ವಿವರ, ಡೆತ್ ಸಮ್ಮರಿ, ವೈದ್ಯಕೀಯ ವರದಿ ಮುಂತಾದ ವಿವರ ಸಲ್ಲಿಸಬೇಕಾಗುತ್ತದೆ. ಅಪಘಾತ ಅಥವಾ ಆತ್ಮಹತ್ಯೆ ಪ್ರಕರಣಗಳಲ್ಲಿ ಕ್ಲೇಮ್ ಸಲ್ಲಿಸುವಾಗ ಪೊಲೀಸ್ ಎಫ್ಐಆರ್, ಪೋಸ್ಟ್ ಮಾರ್ಟಮ್ ವರದಿ, ಪೊಲೀಸರ ಅಂತಿಮ ತನಿಖಾ ವರದಿ/ ಚಾರ್ಚ್ ಶೀಟ್ ಬೇಕಾಗುತ್ತದೆ.
ಇವೆಲ್ಲಾ ದಾಖಲೆಗಳೊಂದಿಗೆ ಇನ್ಶೂರೆನ್ಸ್ ಕ್ಲೇಮ್‌ಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಭರ್ತಿ ಮಾಡಿ ಇನ್ಶೂರೆನ್ಸ್ ಕಂಪನಿಯ ವಲಯ ಕಚೇರಿ ಅಥವಾ ಕಂಪನಿಯ ವೆಬ್‌ಸೈಟ್ ಮೂಲಕ ಕ್ಲೇಮ್ ಸಲ್ಲಿಸಬಹುದು.
ಒಂದೊಮ್ಮೆ ಕ್ಲೇಮ್‌ಗೆ ನಾಮಿನಿ ಸೂಚಿತವಾಗಿಲ್ಲದಿದ್ದರೆ ನೋಂದಾಯಿತ ವಿಲ್ (ಉಯಿಲು) ಅಥವಾ ಕಾನೂನುಬದ್ಧ ಉತ್ತರಾಧಿಕಾರಿಯ ಪ್ರಮಾಣ ಪತ್ರವನ್ನು (Succession Certificate) ಕೋರ್ಟ್‌ನಿಂದ ಪಡೆದುಕೊಳ್ಳಬೇಕಾಗುತ್ತದೆ. ಉತ್ತರಾಧಿಕಾರಿ ಪ್ರಮಾಣ ಪತ್ರವು ಕ್ಲೇಮ್ ಪಡೆಯಲು ಯಾರು ಅರ್ಹರು ಎನ್ನುವುದನ್ನು ಸೂಚಿಸುತ್ತದೆ.
ಕ್ಲೇಮ್ ನೀಡುವ ಪ್ರಕ್ರಿಯೆ:
ಇನ್ಶೂರೆನ್ಸ್ ಕಂಪನಿಯು ಮೃತಪಟ್ಟಿರುವ ವ್ಯಕ್ತಿಯ ಹೆಸರಿನಲ್ಲಿ ಕ್ಲೇಮ್‌ಗೆ ಸಲ್ಲಿಕೆಯಾಗಿರುವ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. ವೈದ್ಯಕೀಯ ವರದಿಗಳು, ಪೊಲೀಸರು ಒದಗಿಸಿರುವ ದಾಖಲೆಗಳು ಮತ್ತು ಇನ್ನಿತರ ಅಗತ್ಯ ವಿವರಗಳನ್ನು ಪಡೆದು ಪರಾಮರ್ಶೆ ಮಾಡುತ್ತದೆ.
ಇನ್ಶೂರೆನ್ಸ್ ಪಾಲಿಸಿ ಪಡೆದಿರುವ ವ್ಯಕ್ತಿ, ಪಾಲಿಸಿ ಪಡೆದ ಮೂರು ವರ್ಷದ ಒಳಗೆ ಸಾವನ್ನಪ್ಪಿದ್ದರೆ ಕ್ಲೇಮ್‌ಗೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ ಕ್ಲೇಮ್ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕ್ಲೇಮ್ ಅನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕಾರ ಮಾಡುವ ಹಕ್ಕು ಇನ್ಶೂರೆನ್ಸ್ ಕಂಪನಿಗೆ ಇದೆ.
ಆದರೆ, ಸರಿಯಾಗಿ ಸಲ್ಲಿಕೆಯಾಗಿರುವ ಕ್ಲೇಮ್ ಅರ್ಜಿಗಳನ್ನು 30 ದಿನದ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ನಿಯಮ ಹೇಳುತ್ತದೆ. ಕೆಲ ಪ್ರಕರಣಗಳನ್ನು ಕ್ಲೇಮ್ ಪರಿಶೀಲಿಸಲು ಹೆಚ್ಚಿನ ಸಮಯ ಅಗತ್ಯವಿದೆ ಎನಿಸಿದರೆ ಇನ್ಶೂರೆನ್ಸ್ ಕಂಪನಿ 120 ದಿನಗಳ ಹೆಚ್ಚುವರಿ ಸಮಯ ಪಡೆದುಕೊಳ್ಳಬಹುದು. ಅಂತಿಮವಾಗಿ ಕ್ಲೇಮ್ ಅನ್ನು ಇನ್ಶೂರೆನ್ಸ್ ಕಂಪನಿ ಒಪ್ಪಿಕೊಂಡ ಮೇಲೆ ಕ್ಲೇಮ್‌ನ ಮೊತ್ತ ನಾಮಿನಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಕರಡಿ ಕುಣಿತಕ್ಕೆ ಷೇರು ಸೂಚ್ಯಂಕಗಳು ಮುಗ್ಗರಿಸಿವೆ. ಅಕ್ಟೋಬರ್ 25ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ ಕಂಡಿವೆ. 79402 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.24ರಷ್ಟು ಇಳಿಕೆಯಾಗಿದೆ. 24180 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.71ರಷ್ಟು ತಗ್ಗಿದೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 5.75ರಷ್ಟು ಕುಸಿದಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 6.45ರಷ್ಟು ಇಳಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಪ್ರಮುಖ ಕಂಪನಿಗಳ ಎರಡನೇ ತ್ರೈಮಾಸಿಕ ಫಲಿತಾಂಶದಲ್ಲಿ ಹಿನ್ನಡೆ ಮಧ್ಯಪ್ರಾಚ್ಯ ಬಿಕ್ಕಟ್ಟು ಚೀನಾ ಮಾರುಕಟ್ಟೆಯತ್ತ ವಾಲುತ್ತಿರುವ ಸಾಂಸ್ಥಿಕ ಹೂಡಿಕೆದಾರರು ಸೇರಿ ಹಲವು ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಶೇ 7.23 ರಿಯಲ್ ಎಸ್ಟೇಟ್ ಶೇ 6.97 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 5.81 ನಿಫ್ಟಿ ಆಟೊ ಶೇ 5.36 ಎನರ್ಜಿ ಶೇ 5.2 ಎಫ್ಎಂಸಿಜಿ ಶೇ 3.5 ಫಾರ್ಮಾ ಶೇ 3.35 ನಿಫ್ಟಿ ಬ್ಯಾಂಕ್ ಶೇ 2.51 ಸೇವಾ ವಲಯ ಶೇ 1.56 ಫೈನಾನ್ಸ್ ಶೇ 0.86 ಮತ್ತು ಐಟಿ ವಲಯ ಶೇ 0.16ರಷ್ಟು ಕುಸಿದಿವೆ. ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 22.65 ಟಾಟಾ ಕನ್ಸ್ಯೂಮರ್ ಶೇ 10.99 ಬಿಪಿಸಿಎಲ್ ಶೇ 10.65 ಅದಾನಿ ಎಂಟರ್ ಪ್ರೈಸಸ್ ಶೇ 10.26 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 9.86 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 8.33 ಎಲ್ ಆ್ಯಂಡ್ ಟಿ ಶೇ 6.95 ಒಎನ್‌ಜಿಸಿ ಶೇ 6.94 ಹಿಂದುಸ್ತಾನ್ ಯೂನಿಲಿವರ್ ಶೇ 6.93 ಶ್ರೀರಾಮ್ ಫೈನಾನ್ಸ್ ಶೇ 6.78 ಅದಾನಿ ಪೋರ್ಟ್ಸ್ ಶೇ 6.31ರಷ್ಟು ಕುಸಿತ ಕಂಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 3.66 ಟೆಕ್ ಮಹೀಂದ್ರ ಶೇ 1.69 ಬಜಾಜ್ ಆಟೊ ಶೇ 1.42 ಮತ್ತು ಬಜಾಜ್ ಫೈನಾನ್ಸ್ ಶೇ 0.15ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಏರ್‌ಟೆಲ್ ಅದಾನಿ ಪವರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸನ್ ಫಾರ್ಮಾ ಪಂಜಾಬ್ ನ್ಯಾಷನಲ್ ಬ್ಯಾಂಕ್ ಫೆಡರಲ್ ಬ್ಯಾಂಕ್ ಇಂಡಿಯನ್ ಬ್ಯಾಂಕ್ ಅಂಬುಜಾ ಸಿಮೆಂಟ್ಸ್ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕ್ಯಾಮ್ಸ್ ಟಿವಿ ಟುಡೆ ನೆಟ್ ವರ್ಕ್ ರೇಲ್ ಟೆಲ್ ಟಾಟಾ ಟೆಕ್ನಾಲಜೀಸ್ ಮಾರುತಿ ಸುಜುಕಿ ಸಿಪ್ಲಾ ಕೆನರಾ ಬ್ಯಾಂಕ್ ವೋಲ್ಟಾಸ್ ಎಸ್‌ಬಿಐ ಕಾರ್ಡ್ ಆ್ಯಂಡ್ ಪೇಮೆಂಟ್ಸ್ ವಿಗಾರ್ಡ್ ಹನಿವೆಲ್ ಆಟೊಮೇಷನ್ ಎಲ್ ಆ್ಯಂಡ್ ಟಿ ಡಾಬರ್ ಇಂಡಿಯಾ ಬಯೊಕಾನ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಸಾಧನೆ ವರದಿ ಪ್ರಕಟಿಸುತ್ತಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.